ಮನೀಷ್ ಸಿಸೋಡಿಯಾ ಜಾಮೀನು ಅರ್ಜಿ | ತೀರ್ಪು ಕಾಯ್ದಿರಿಸಿದ ದಿಲ್ಲಿ ನ್ಯಾಯಾಲಯ

Update: 2024-04-20 15:01 GMT

ಮನೀಷ್ ಸಿಸೋಡಿಯಾ  | PC : PTI 

ಹೊಸದಿಲ್ಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಕಾರಾಗೃಹದಲ್ಲಿರುವ ದಿಲ್ಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಸಲ್ಲಿಸಿದ ಜಾಮೀನು ಅರ್ಜಿಯ ಮೇಲಿನ ತನ್ನ ತೀರ್ಪನ್ನು ದಿಲ್ಲಿ ನ್ಯಾಯಾಲಯ ಶನಿವಾರ ಕಾಯ್ದಿರಿಸಿದೆ.

ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು, ಆದೇಶವನ್ನು ಎಪ್ರಿಲ್ 30ರಂದು ಘೋಷಿಸಲಾಗುವುದು ಎಂದು ಪ್ರಕಟಿಸಿದರು.

ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಸಲ್ಲಿಸಿದ ಪ್ರಕರಣದಲ್ಲಿ ಜಾಮೀನು ಕೋರಿ ಆಮ್ ಆದ್ಮಿ ಪಕ್ಷದ ನಾಯಕರಾಗಿರುವ ಮನೀಷ್ ಸಿಸೋಡಿಯಾ ಅವರು ಅರ್ಜಿ ಸಲ್ಲಿಸಿದ್ದರು.

ಅಬಕಾರಿ ನೀತಿ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಹೆಸರಿಸಲಾಗಿರುವ ಮನೀಷ್ ಸಿಸೋಡಿಯಾ ಅವರು ಸಿಬಿಐಯಿಂದ 2023 ಫೆಬ್ರವರಿಯಲ್ಲಿ ಬಂಧಿತರಾದ ಬಳಿಕ ಕಾರಾಗೃಹದಲ್ಲಿ ಇದ್ದಾರೆ. ಇದೇ ಪ್ರಕರಣದಲ್ಲಿ 2023 ಮಾರ್ಚ್ 9ರಂದು ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಪ್ರಸ್ತುತ ಅವರನ್ನು ತಿಹಾರ್ ಕಾರಾಗೃಹದಲ್ಲಿ ಇರಿಸಲಾಗಿದೆ.

ಸಿಬಿಐಯನ್ನು ಪ್ರತಿನಿಧಿಸಿದ ಸರಕಾರಿ ವಕೀಲ ಪಂಕಜ್ ಗುಪ್ತಾ ಶನಿವಾರ, ಸಿಸೋಡಿಯಾ ಅವರು ಪ್ರಭಾವಿ ರಾಜಕಾರಣಿ ಹಾಗೂ ಅವರ ಒತ್ತಾಸೆಯ ಮೇರೆಗೆ ಸಹ ಆರೋಪಿಗಳು ಈ ಅಪರಾಧಗಳನ್ನು ಎಸಗಿದ್ದಾರೆ ಎಂದು ಪ್ರತಿಪಾದಿಸಿದರು.

ಸಾಕ್ಷ್ಯಗಳ ನಾಶ ಹಾಗೂ ಅಧಿಕಾರದ ದುರ್ಬಳಕೆ ಕುರಿತು ಮನೀಷ್ ಸಿಸೋಡಿಯಾ ಅವರ ವಿರುದ್ಧ ಪ್ರಾಥಮಿಕ ಪ್ರಕರಣ ದಾಖಲಿಸಲಾಗಿತ್ತು ಎಂದು ಗುಪ್ತಾ ಪ್ರತಿಪಾದಿಸಿದ್ದಾರೆ. ಮನೀಷ್ ಸಿಸೋಡಿಯಾ ಅವರ ಪ್ರಕರಣವು ಜಾಮೀನು ಪಡೆದ ಇತರ ಆರೋಪಿಗಳ ಪ್ರಕರಣಕ್ಕಿಂತ ಭಿನ್ನವಾಗಿದೆ ಎಂದು ಕೂಡ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News