ಮನಮೋಹನ್ ಸಿಂಗ್ ಭ್ರಷ್ಟಾಚಾರದ ವಿರೋಧಿಯಾಗಿದ್ದರು: ಅಣ್ಣಾ ಹಜಾರೆ
ಹೊಸದಿಲ್ಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತಾ ʼಮನಮೋಹನ್ ಸಿಂಗ್ ಭ್ರಷ್ಟಾಚಾರದ ವಿರೋಧಿಯಾಗಿದ್ದರುʼ ಎಂದು ಅಣ್ಣಾ ಹಜಾರೆ ಹೇಳಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳ ಬಳಕೆದಾರರು ಅಣ್ಣಾ ಹಜಾರೆಯನ್ನು ತರಾಟೆಗೆ ತೆಗೆದುಕೊಂಡಿದ್ದು, ಮತ್ಯಾಕೆ ಮನಮೋಹನ್ ಸಿಂಗ್ ವಿರುದ್ಧ ಹೋರಾಟ ನಡೆಸಿದ್ದು ಎಂದು ಪ್ರಶ್ನಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಯಾವಾಗಲೂ ದೇಶ ಮತ್ತು ಸಮಾಜದ ಕಲ್ಯಾಣಕ್ಕೆ ಆದ್ಯತೆ ನೀಡುತ್ತಿದ್ದರು. ಹುಟ್ಟುವವರು ಸಾಯಲೇಬೇಕು. ಆದರೆ ಸಿಂಗ್ ಮಾಡಿದ ಕೆಲಸಗಳು ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಗಳು ಅಪಾರ. ಅವರು ದೇಶದ ಆರ್ಥಿಕತೆಗೆ ಹೊಸ ದಿಕ್ಕನ್ನು ನೀಡಿದರು. 2010ರಲ್ಲಿ ಸಿಂಗ್ ಅವರ ಅಧಿಕಾರಾವಧಿಯಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಭ್ರಷ್ಟಾಚಾರ ವಿರುದ್ಧದ ಆಂದೋಲನದ ಸಮಯದಲ್ಲಿ ನನ್ನ ಜತೆ ಚರ್ಚಿಸಿದರು. ಭ್ರಷ್ಟಾಚಾರ ವಿರುದ್ಧದ ಲೋಕಾಯುಕ್ತ ಕಾಯ್ದೆಗೆ ಸಂಬಂಧಿಸಿದಂತೆ ತ್ವರಿತವಾಗಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಸಿಂಗ್ ಅವರು ಇಂದು ನಮ್ಮೊಂದಿಗೆ ಭೌತಿಕವಾಗಿ ಇಲ್ಲ. ಆದರೆ ಅವರ ನೆನಪುಗಳು ಸದಾ ನಮ್ಮೊಂದಿಗೆ ಇರುತ್ತದೆ ಎಂದು ಅಣ್ಣಾ ಹಜಾರೆ ಹೇಳಿದ್ದರು.
2011ರಲ್ಲಿ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ನಡೆಸಿದ್ದ ಹೋರಾಟ ದೇಶದಲ್ಲಿ ಭಾರೀ ಸಂಚಲನ ಮೂಡಿಸಿತ್ತು. 2011ರ ಎಪ್ರಿಲ್ 5ರಂದು ಪ್ರಾರಂಭವಾಗಿದ್ದ ಅಣ್ಣಾ ಹಜಾರೆಯ ಭ್ರಷ್ಟಾಚಾರದ ವಿರುದ್ಧದ ಪ್ರತಿಭಟನೆ ಡಿಸೆಂಬರ್ 23ಕ್ಕೆ ಕೊನೆಯಾಗಿತ್ತು. ಅಣ್ಣಾ ಹಜಾರೆಯ ಹೋರಾಟವು ಮನಮೋಹನ್ ಸಿಂಗ್ ಸರ್ಕಾರದ ವಿರುದ್ಧ ಜನರಲ್ಲಿ ತೀವ್ರ ಅಸಮಾಧಾನ ಮೂಡಿಸಿತು. ಈ ಆಂದೋಲನ 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎಗೆ ದೊಡ್ಡ ನಷ್ಟ ಉಂಟು ಮಾಡಿತ್ತು.
ಅಣ್ಣಾ ಹಜಾರೆಯ ಹೇಳಿಕೆಗೆ ಬೆನ್ನಲ್ಲೇ ಸಾಮಾಜಿಕ ಬಳಕೆದಾರರು ಮನಮೋಹನ್ ಸಿಂಗ್ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದೇಕೆ ಎಂದು ಅಣ್ಣಾ ಹಜಾರೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.