ಸೋದರಳಿಯನನ್ನು ಬಿಎಸ್ಪಿ ರಾಷ್ಟ್ರೀಯ ಸಂಚಾಲಕ ಹುದ್ದೆಯಿಂದ ದಿಢೀರ್ ವಜಾ ಮಾಡಿದ ಮಾಯಾವತಿ
ಲಕ್ನೋ: ಅಚ್ಚರಿಯ ರಾಜಕೀಯ ನಡೆಯಲ್ಲಿ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ತಮ್ಮ ಅಳಿಯ ಆಕಾಶ್ ಆನಂದ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು 'ರಾಜಕೀಯ ಉತ್ತರಾಧಿಕಾರಿ' ಹುದ್ದೆಯಿಂದ ದಿಢೀರನೇ ವಜಾ ಮಾಡಿದ್ದಾರೆ. ನೇಮಕ ಮಾಡಿದ ಕೇವಲ ಐದು ತಿಂಗಳಲ್ಲೇ ವಜಾ ಮಾಡಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಮಂಗಳವಾರ ರಾತ್ರಿ ಎಕ್ಸ್ ಪೋಸ್ಟ್ ನಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿರುವ ಬಿಎಸ್ಪಿ ನಾಯಕಿ, ಪಕ್ಷದ ಹಿತಾಸಕ್ತಿಯ ದೃಷ್ಟಿಯಿಂದ ಮತ್ತು ಆನಂದ್ ಸಂಪೂರ್ಣ ಪ್ರಬುದ್ಧತೆ ಪಡೆಯಬೇಕು ಎಂಬ ಕಾರಣಕ್ಕೆ ಈ ಕ್ರಮ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದ ದಿನವೇ ಕೈಗೊಂಡ ಈ ನಿರ್ಧಾರದ ಸಂಬಂಧ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, "ಬಿಎಸ್ಪಿ ಬಾಬಾ ಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರ ಆತ್ಮಗೌರವ ಮತ್ತು ಸ್ವಾಭಿಮಾನದ ಸಂಕೇತ ಹಾಗೂ ಸಾಮಾಜಿಕ ಬದಲಾವಣೆಗಾಗಿ ಕಾನ್ಶಿರಾಂ ಅವರು ಕಟ್ಟಿದ ಚಳವಳಿ. ಇದಕ್ಕಾಗಿ ನಾನು ನನ್ನ ಇಡೀ ಜೀವನವನ್ನು ಸಮರ್ಪಿಸಿಕೊಂಡಿದ್ದೇನೆ ಮತ್ತು ಹೊಸ ಪೀಳಿಗೆ ಕೂಡಾ ಈ ಚಳವಳಿಗೆ ವೇಗ ನೀಡಲು ಸಜ್ಜಾಗಬೇಕು" ಎಂದಿದ್ದಾರೆ.
"ಈ ನಿಟ್ಟಿನಲ್ಲಿ ಪಕ್ಷದಲ್ಲಿ ಇತರ ಜನರನ್ನು ಪ್ರೋತ್ಸಾಹಿಸುವ ಜತೆಗೆ ಆಕಾಶ್ ಆನಂದ್ ಅವರನ್ನು ರಾಷ್ಟ್ರೀಯ ಸಂಚಾಲಕ ಮತ್ತು ಉತ್ತರಾಧಿಕಾರಿಯಾಗಿ ಘೋಷಿಸಿದ್ದೆ. ಆದರೆ ಪಕ್ಷದ ಮತ್ತು ಚಳವಳಿಯ ವಿಸ್ತೃತ ಹಿತಾಸಕ್ತಿಯಿಂದ, ಸಂಪೂರ್ಣ ಪ್ರಬುದ್ಧತೆ ಪಡೆಯುವವರೆಗೂ ಈ ಎರಡೂ ಪ್ರಮುಖ ಹೊಣೆಗಾರಿಕೆಗಳಿಂದ ಕೈಬಿಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.