ಪಾರ್ಲಿಮೆಂಟ್ ನಲ್ಲಿ ಮಿಂಚಿದ ಮಿಲೇನಿಯಲ್ ಸಂಸದರು; 30 ವರ್ಷಕ್ಕಿಂತ ಕೆಳಗಿನ ಏಳು ಸಂಸದರ ಪರಿಚಯ ಇಲ್ಲಿದೆ...

Update: 2024-06-28 13:33 GMT

ಬೀದರ್ ಲೋಕಸಭಾ ಕ್ಷೇತ್ರದ ನೂತನ ಸಂಸದ ಸಾಗರ್ ಖಂಡ್ರೆ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಅಲ್ಲಿದ್ದ ಎಲ್ಲರೂ ಅವರನ್ನೇ ಆಶ್ಚರ್ಯದಿಂದ ನೋಡುತ್ತಿದ್ದರು. ಅವರ ಪ್ರಮಾಣ ವಚನ ಮುಗಿದು ಕೆಳಗಿಳಿದು ಹೋಗುವಾಗ ಹಿರಿಯ ಸಂಸದರೊಬ್ಬರು "ಆಪ್ ಏಕ್ ದಂ ಸಚ್ಚೇ ಹೈ0" ಎಂದರೆ ಮತ್ತೊಬ್ಬ ಹಿರಿಯ ಸದಸ್ಯರು ಅವರನ್ನು ಶಾಲಾ ಬಾಲಕನನ್ನು ನೋಡಿದ ಹಾಗೆ ನೋಡಿ "ಹೌ ಓಲ್ಡ್ ಆರ್ ಯೂ" ಎಂದು ಕೇಳಿದರು. ಆಗ ಹಲವು ಸಂಸದರು ನಕ್ಕು ಬಿಟ್ಟರು. ಅದಕ್ಕೆ ಸಾಗರ್ ಖಂಡ್ರೆ 26 ವರ್ಷ ಅಂತ ಹೇಳಿ ಮುಗುಳ್ನಗೆಯೊಂದಿಗೆ ಉತ್ತರಿಸಿದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಸರಾಸರಿ ವಯಸ್ಸು 55 ರಷ್ಟಿತ್ತು. ಆದರೆ ಅದೇ ಚುನಾವಣೆಯಲ್ಲಿ ಏಳು ಯುವ ಅಭ್ಯರ್ಥಿಗಳು 30ಕ್ಕಿಂತಲೂ ಕಡಿಮೆ ವಯಸ್ಸಿನಲ್ಲೇ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅದರಲ್ಲೂ ಮೂವರು ಸಂಸದರ ವಯಸ್ಸು ಕೇವಲ 25 ವರ್ಷ ಮಾತ್ರ. ಲೋಕಸಭೆಗೆ ಸ್ಪರ್ಧಿಸಲು ಇರುವ ಕನಿಷ್ಠ ವಯೋಮಿತಿಯೂ ಅದೇ. ಈ ಏಳು ಸಂಸದರು ಬೇರೆ ಬೇರೆ ಪಕ್ಷಗಳಿಂದ ಬೇರೆ ಬೇರೆ ರಾಜ್ಯಗಳಿಂದ ಸ್ಪರ್ಧಿಸಿ ಸಂಸತ್ತನ್ನು ಪ್ರವೇಶಿಸಿದ್ದಾರೆ.

ಎರಡು ಕನ್ನಡಿಗರೂ ಸೇರಿದಂತೆ ಈ 7 ಯುವ ಸಂಸದರ ಪರಿಚಯ ಇಲ್ಲಿದೆ:

ಸಾಗರ್‌ ಖಂಡ್ರೆ: 1997ರ ಡಿಸೆಂಬರ್‌ 29ರಂದು ಜನಿಸಿರುವ 26 ವರ್ಷ ವಯಸ್ಸಿನ ಸಾಗರ್‌ ಖಂಡ್ರೆಯವರು ಎದುರಿಸಿದ ಮೊದಲ ಚುನಾವಣೆಯಲ್ಲೇ ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು 1 ಲಕ್ಷ 25 ಸಾವಿರಕ್ಕೂ ಹೆಚ್ಚು ಮತಗಳಿಂದ ಮಣಿಸಿ ಸಂಸತ್ತು ಪ್ರವೇಶಿಸಿ ಸುದ್ದಿಯಾಗಿದ್ದಾರೆ. 1984ರಲ್ಲಿ ಬೀದರ್‌ ಲೋಕಸಭಾ ಕ್ಷೇತ್ರದಿಂದಲೇ ನರಸಿಂಗ್‌ರಾವ್‌ ಸೂರ್ಯವಂಶಿ ಅವರು ತನ್ನ 27ನೇ ವಯಸ್ಸಿನಲ್ಲಿ ಗೆದ್ದು ಸಂಸತ್‌ ಪ್ರವೇಶಿಸಿದ್ದರು. ಈಗ ಆ ದಾಖಲೆಯನ್ನು ಸಾಗರ್‌ ಮುರಿದಿದ್ದಾರೆ. ಖಂಡ್ರೆ ಬೆಂಗಳೂರಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಒಂದರಿಂದ ಬಿಬಿಎ, ಎಲ್‌ಎಲ್‌ಬಿ ಪದವಿಯನ್ನು ಪಡೆದಿದ್ದಾರೆ.

ಅವರು ಭಾಲ್ಕಿ ವಿಧಾನ ಸಭಾ ಕ್ಷೇತ್ರದ ಶಾಸಕ ಮತ್ತು ಕರ್ನಾಟಕ ಸರಕಾರದಲ್ಲಿ ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವರಾಗಿರುವ ಈಶ್ವರ ಖಂಡ್ರೆಯವರ ಮಗ ಮತ್ತು ಮಾಜಿ ಸಚಿವ ಭೀಮಣ್ಣ ಖಂಡ್ರೆ ಮೊಮ್ಮಗ. ಈ ಬಾರಿ ಚುನಾವಣೆಯಲ್ಲಿ ಈಶ್ವರ್‌ ಖಂಡ್ರೆ ತಮ್ಮ ಮಗನನ್ನು ಗೆಲ್ಲಿಸುವ ಸಲುವಾಗಿ ಸಾಕಷ್ಟು ಶ್ರಮವಹಿಸಿದ್ದರು.

ಸದ್ಯ ಸಾಗರ್ ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಪ್ರಿಯಾಂಕಾ ಸತೀಶ್ ಜಾರಕಿಹೊಳಿ: ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿ ಎಲ್ಲರ ಗಮನವನ್ನು ಸೆಳೆದಿರುವ ಮತ್ತೊಂದು ಹೆಸರು ಪ್ರಿಯಾಂಕ ಸತೀಶ್ ಜಾರಕಿಹೊಳಿ.

27 ನೇ ವಯಸ್ಸಿನಲ್ಲೇ, ಪ್ರಿಯಾಂಕಾ ಜಾರಕಿಹೊಳಿ ಅವರು ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಕ್ಷೇತ್ರವನ್ನು ಗೆಲ್ಲುವ ಮೂಲಕ ಮೀಸಲು ರಹಿತ ಲೋಕಸಭಾ ಕ್ಷೇತ್ರದಿಂದ ಸಂಸದರಾದ ಮೊತ್ತ ಮೊದಲ ದಲಿತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಚಿಕ್ಕೋಡಿಯಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರು ಹಾಲಿ ಸಂಸದ ಹಾಗೂ ಬಿಜೆಪಿ ಮುಖಂಡ ಅಣ್ಣಾಸಾಹೇಬ ಜೊಲ್ಲೆ ಅವರನ್ನು 90,834 ಮತಗಳ ಅಂತರದಿಂದ ಸೋಲಿಸಿ ಗೆಲುವು ಸಾಧಿಸಿದ್ದರು. ಪ್ರಿಯಾಂಕ ಒಟ್ಟು ಚಲಾಯಿಸಲ್ಪಟ್ಟ 51.21 ರಷ್ಟು ಮತಗಳನ್ನು ಪಡೆಡಿದ್ದರು.

ಮುಂಬೈ ಕರ್ನಾಟಕದಲ್ಲಿ ಕಾಂಗ್ರೆಸಿನ ವಿಜಯ ಪತಾಕೆಯನ್ನು ಹಾರಿಸಿದ ಏಕ ಮಾತ್ರ ಸಂಸದೆ ಎಂಬ ಹೆಗ್ಗಳಿಕೆಯೂ ಇವರದ್ದೇ. ಮುಂಬೈ ಕರ್ನಾಟಕದಲ್ಲಿ ಚಿಕ್ಕೋಡಿ ಹೊರತುಪಡಿಸಿ ಉಳಿದೆಲ್ಲ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಯಮಕನಮರಡಿ ಶಾಸಕ ಮತ್ತು ಕರ್ನಾಟಕ ಸರಕಾರದಲ್ಲಿ ಸಚಿವರಾಗಿರುವ ಪ್ರಭಾವೀ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ. ಸ್ವಂತ ವ್ಯವಹಾರವೊಂದನ್ನು ಪ್ರಿಯಾಂಕ ನಡೆಸುತ್ತಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ 2021 ರಲ್ಲಿ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿಯನ್ನು ಪ್ರಿಯಾಂಕಾ ಪಡೆದಿದ್ದಾರೆ.

2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಪ್ರಿಯಾಂಕ ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ರಾಜಕೀಯದಲ್ಲಿ ಹೆಚ್ಚು ಮಹಿಳೆಯರಿಗೆ ಅವಕಾಶ ಸಿಗಬೇಕು ಎಂದು ಹೇಳುವಾಗ 1990 ರ ದಶಕದ ಉತ್ತರಾರ್ಧದಿಂದಲೇ ಈ ಪ್ರದೇಶದಲ್ಲಿ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿರುವ ಜಾರಕಿಹೊಳಿ ಕುಟುಂಬಕ್ಕೆ ಸೇರಿದ ಕಾರಣ ಮಾತ್ರ ತನಗೆ ಅವಕಾಶ ಸಿಕ್ಕಿದೆ ಎಂಬ ಅಂಶವನ್ನೂ ಪ್ರಿಯಾಂಕ ಒಪ್ಪಿಕೊಂಡಿದ್ದರು. ಇದೀಗ ಗೆಲುವು ಸಾಧಿಸಿ ಸಂವಿಧಾನದ ಹೆಸರಿನಲ್ಲೇ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದಾರೆ.

ಪ್ರಿಯಾ ಸರೋಜ್: ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿರುವ 26 ವರ್ಷದ ಪ್ರಿಯಾ ಸರೋಜ್ ಮುಂದಿನ ಹೆಸರು. ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಇವರಿಗಾಗಿ ಎಸ್ ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಪತ್ನಿ ಮೈನ್ಪುರಿ ಸಂಸದೆ ಡಿಂಪಲ್ ಯಾದವ್ ಮತ ಕೇಳುವ ವಿಡಿಯೋ ಒಂದು ತುಂಬಾ ವೈರಲ್ ಆಗಿತ್ತು.

"ಚುನಾವ್ ಮೇ ಬಿಟಿಯ ಖಡೀ ಹೈ ಕಿ ನಹೀ... , ಬಿಟಿಯಾ ಪಡಿ ಲಿಕಿ ಹೈ ಕಿ ನಹೀ... ಅಬ್ ಕಿಸ್ಕಿ ಝಿಮ್ಮೆದಾರಿ ಹೈ ಜಿತಾನೆ ಕಿ.... ಅಂತ ಡಿಂಪಲ್ ಹೇಳಿದ್ದರು. ಅಂದ್ರೆ ಚುನಾವಣೆಯಲ್ಲಿ ನಿಮ್ಮ ಮಗಳು ಸ್ಪರ್ಧಿಸಿದ್ದಾಳೆ ಹೌದೋ ಅಲ್ಲವೊ, ನಿಮ್ಮ ಮಗಳು ಸುಶಿಕ್ಷಿತಳು ಹೌದೋ ಅಲ್ವೋ... ಈಗ ಇವಳ ಜಯ ಖಚಿತ ಪಡಿಸುವುದು ಯಾರ ಜವಾಬ್ದಾರಿ.... ? ಎಂದು ಮತದಾರರನ್ನು ಡಿಂಪಲ್ ಕೇಳುವ ವಿಡಿಯೋ ತುಂಬಾ ವೈರಲ್ ಆಗಿತ್ತು.

ಸುಪ್ರಿಂ ಕೋರ್ಟ್‌ನಲ್ಲಿ ವಕೀಲರಾಗಿರುವ ಪ್ರಿಯಾ ಸರೋಜ್ ಅವರು ಬಿಜೆಪಿಯ ಬಿ ಪಿ ಸರೋಜ್ ಅವರನ್ನು 35850 ಮತಗಳ ಅಂತರದಿಂದ ಸೋಲಿಸಿ ಮಚ್ಲಿಶಹರ್ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿ ನವೆಂಬರ್ 23, 1998 ರಂದು ಜನಿಸಿದ ಪ್ರಿಯಾ ಸರೋಜ್ ಸಮಾಜವಾದಿ ಪಕ್ಷದ ಸದಸ್ಯೆ. ಈ ವರ್ಷ ಲೋಕಸಭೆಗೆ ಆಯ್ಕೆಯಾದ ಎರಡನೇ ಅತಿ ಕಿರಿಯ ಅಭ್ಯರ್ಥಿ ಇವರು.

ಮೂರು ಬಾರಿಯ ಸಂಸದ ಮತ್ತು ಉತ್ತರ ಪ್ರದೇಶದ ಹಾಲಿ ಶಾಸಕರಾದ ತುಫಾನಿ ಸರೋಜ್ ಇವರ ತಂದೆ.

ಗೆದ್ದ ಮೇಲೆ ಈವರೆಗೆ ನನ್ನನ್ನು ಎಲ್ಲರೂ " ಸಾಂಸದ್ ಜಿ ಕೀ ಭೇಟಿ " ಎಂದು ಕರೆಯುತ್ತಿದ್ದರು. ಇನ್ನು ಮೇಲೆ ತಂದೆಯವರನ್ನು ಸಾಂಸದ್ ಜಿ ಕೇ ಪಿತಾ ಎಂದು ಕರೆಯಲ್ಲಿದ್ದಾರೆ ಎಂದು ಹೇಳಿ ಖುಷಿ ವ್ಯಕ್ತಪಡಿಸಿದ್ದರು.

ಪ್ರಿಯಾ ತನ್ನ ಶಾಲಾ ಶಿಕ್ಷಣವನ್ನು ನವದೆಹಲಿಯ ಏರ್ ಫೋರ್ಸ್ ಗೋಲ್ಡನ್ ಜುಬಿಲಿ ಇನ್‌ಸ್ಟಿಟ್ಯೂಟ್‌ನಲ್ಲಿ ಪೂರ್ಣಗೊಳಿಸಿದ. ನಂತರ ದೆಹಲಿ ವಿವಿಯಿಂದ ಬಿ ಎ ಪದವಿ ಪಡೆದರು. ಆಮೇಲೆ ನೋಯ್ಡಾದ ವಿಶ್ವವಿದ್ಯಾನಿಲಯ ಒಂದರಿಂದ ಕಾನೂನು ಪದವಿ ಪಡೆದರು.

ಅತ್ಯುತ್ತಮ ವಾಗ್ಮಿಯೂ ಆಗಿರುವ ಪ್ರಿಯಾ ಸರೋಜ್ ಇದೀಗ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇಕ್ರ ಹಸನ್ ಚೌಧರಿ: ಈ ಲೋಕಸಭಾ ಚುನಾವಣೆ ವೇಳೆ ಮುಸ್ಲಿಂ ಅಭ್ಯರ್ಥಿಗಳಲ್ಲಿ ಇಕ್ರ ಹಸನ್ ಚೌಧರಿ ಅವರ ವಿಡಿಯೋಗಳು ವೈರಲ್ ಆದಷ್ಟು ಈ ಬಾರಿ ಉವೈಸಿ ಅವರ ವಿಡಿಯೋ ಕೂಡ ವೈರಲ್ ಆಗಿರಲಿಕ್ಕಿಲ್ಲ.

ಇಕ್ರಾ ಅವರು ಬಿಜೆಪಿಯ ಪ್ರದೀಪ್ ಕುಮಾರ್ ಅವರನ್ನು 69,116 ಮತಗಳ ಅಂತರದಿಂದ ಸೋಲಿಸಿ ಕೈರಾನಾದಿಂದ ಲೋಕಸಭಾ ಸದಸ್ಯರಾಗಿದ್ದಾರೆ.

ಇಕ್ರಾ ಚೌಧರಿ ಅವರು ಆಗಸ್ಟ್ 26, 1994 ರಂದು ಮುಸ್ಲಿಂ ಗುಜ್ಜರ್ ಕುಟುಂಬ ಒಂದರಲ್ಲಿ ಜನಿಸಿದರು. ಲೋಕಸಭೆ ಮತ್ತು ರಾಜ್ಯಸಭೆಯ ಮಾಜಿ ಸದಸ್ಯರಾದ ಚೌಧರಿ ಮುನವ್ವರ್ ಹಸನ್ ಮತ್ತು ಮಾಜಿ ಲೋಕಸಭಾ ಸದಸ್ಯರಾದ ಬೇಗಂ ತಬಸ್ಸುಮ್ ಹಸನ್ ದಂಪತಿಯ ಪುತ್ರಿ ಇಕ್ರಾ. ಪ್ರಸ್ತುತ, ಇಕ್ರಾ ಸಹೋದರ ಚೌಧರಿ ನಹಿದ್ ಹಸನ್ ಅವರು ಕೈರಾನಾ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಮೂರನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ಇಕ್ರಾ ನವದೆಹಲಿಯ ಕ್ವೀನ್ ಮೇರಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ದೆಹಲಿ ವಿವಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಬಿ ಎ ಪದವಿ ಗಳಿಸಿದರು. ನಂತರ ಅವರು 2020 ರಲ್ಲಿ ಲಂಡನ್ ನಿಂದ ಅಂತರರಾಷ್ಟ್ರೀಯ ರಾಜಕೀಯ ಕಾನೂನಿನಲ್ಲಿ ಎಲ್‌ಎಲ್‌ಎಂ ಪದವಿ ಪಡೆದರು.

ಇಕ್ರಾ 2016 ರಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ 5000 ಮತಗಳಿಂದ ಸೋಲುವ ಮೂಲಕ ತನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು.

2022 ರ ಯುಪಿ ವಿಧಾನಸಭಾ ಚುನಾವಣೆಯ ವೇಳೆ ಕೆಲವು ಪ್ರಕರಣಗಳಲ್ಲಿ ಜೈಲು ಪಾಲಾದ ತನ್ನ ಸಹೋದರ ನಹಿದ್ ಹಸನ್‌ ಅವರು ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದರು ಇಕ್ರಾ. ಅಲ್ಲಿಂದ ನಹೀದ್ ಗೆದ್ದರು. ಆಗಲೇ ಇಕ್ರಾರನ್ನು ಗುರುತಿಸಿದ್ದ ಅಖಿಲೇಶ್ ಯಾದವ್ ಇವರಿಗೆ ಲೋಕ ಭಾ ಟಿಕೆಟ್ ಕೊಟ್ಟರು. ಈಗ ಇಕ್ರಾ ಹಸನ್ ಯುವ ಸಂಸದೆ.

ಒಬ್ಬ ಯುವಕ "ವೋಟ್ ಫಾರ್ ಇಕ್ರಾ" ಎಂದು ಘೋಷಣೆ ಕೂಗಿದಾಗ ಹಿರಿಯರೊಬ್ಬರು ಅವನಿಗೆ ಸಲಹೆ ನೀಡಿ ಅವರನ್ನು ಇಕ್ರಾ ಬೆಹನ್ ಎಂದು ಕರೆಯಿರಿ ಎಂದು ಹೇಳಿದ್ದಾಗಿ ʼದಿ ವೈರ್ʼ ವರದಿ ಮಾಡಿತ್ತು. ಇಕ್ರಾ ಗಾಗಿ ಪ್ರಚಾರ ಮಾಡುವವರರಲ್ಲಿ ಸರ್ವ ಧರ್ಮೀಯ ಹಿರಿಯರು ಮತ್ತು ನಾಯಕರಿದ್ದರೆಂದೂ ಅದರಲ್ಲೂ ಹೆಚ್ಚಾಗಿ ಹಿಂದೂಗಳಿದ್ದರು ಎಂದೂ ಅನೇಕ ಮಾಧ್ಯಮಗಳು ವರದಿ ಮಾಡಿದ್ದವು. ಅವರಲ್ಲಿ ಹಲವಾರು ಗ್ರಾಮದ ಪ್ರಭಾವಿ ಮುಖಂಡರು ಮತ್ತು ಹತ್ತಿರದ ಹಳ್ಳಿಗಳ ಪ್ರಧಾನರು ಸೇರಿದ್ದರು ಎಂದು ʼದಿ ವೈರ್ʼ ವರದಿ ಮಾಡಿತ್ತು. ಗಂಭೀರವಾದ ವಿಷಯಗಳನ್ನು ಸುಲಭವಾಗಿ ಮನವರಿಕೆಯಾಗುವಂತೆ ತಿಳಿಸುವ ಕಲೆ ಇಕ್ರಾ ಹಸನ್ ಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಮುಂದಿರುವ ಹೆಸರುಗಳು ಪುಷ್ಪೇಂದ್ರ ಸರೋಜ್, ಶಾಂಭವಿ ಚೌಧರಿ ಮತ್ತು ಸಂಜನಾ ಜಾಟವ್ ಅವರದ್ದು.

ಈ ಬಾರಿಯ ಲೋಕಸಭೆಯ ಅತ್ಯಂತ ಕಿರಿಯ ವಯಸ್ಸಿನ ಸಂಸದ ಎಂಬ ಹೆಗ್ಗಳಿಕೆ ಕೇವಲ 25 ವರ್ಷ ವಯಸ್ಸಿನ ಪುಷ್ಪೇಂದ್ರ ಸರೋಜ್ ಇವರದ್ದು. ಲಂಡನ್ನಿನಿಂದ ಲೆಕ್ಕ ಪರಿಶೋಧನೆ ಹಾಗು ಮ್ಯಾನೇಜ್ ಮೆಂಟ್ ನಲ್ಲಿ ಪದವಿ ಪಡೆದಿರುವ ಪುಷ್ಪೇಂದ್ರ ಸರೋಜ್ ಉತ್ತರಪ್ರದೇಶದ ಕೌಶಾಂಬಿ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಬಿಜೆಪಿಯ ದಿಗ್ಗಜ ನಾಯಕ ವಿನೋದ್ ಸೋಂಕರ್ ಅವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ಧಾರೆ. ಇವರ ತಂದೆ ಇಂದ್ರಜಿತ್ ಸರೋಜ್ ಯುಪಿ ವಿಧಾನ ಸಭೆಯಲ್ಲಿ ವಿಪಕ್ಷದ ಉಪನಾಯಕ.

ಲೋಕಸಭಾ ಚುನಾವಣಾ ಪ್ರಚಾರ ವೇಳೆ ಪ್ರಧಾನಿ ಮೋದಿಯವರು ಓರ್ವ ಅಭ್ಯರ್ಥಿಯನ್ನು ಮಗಳು ಎಂದು ಕರೆದು ಸಂಬೋಧಿಸಿದ್ದು ಎಲ್ಲರ ಗಮನ ಸೆಳೆದಿತ್ತು. ಯುವ ನಾಯಕಿ ಓರ್ವರ ಜೊತೆ ಪ್ರಧಾನಿಯವರ ಫೋಟೋ ತುಂಬಾ ವೈರಲ್ ಆಗಿತ್ತು. ಆ ಯುವ ನಾಯಕಿ ಶಾಂಭವಿ ಚೌದರಿ. ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿಯಿಂದ ಇವರು ಗೆದಿದ್ದಾರೆ. ಇವರು ಬಿಹಾರ ಸರಕಾರದಲ್ಲಿ ಮಂತ್ರಿಯಾಗಿರುವ ಅಶೋಕ್ ಚೌಧರಿ ಅವರ ಪುತ್ರಿ. ಪರಿಶಿಷ್ಟ ಜಾತಿಗೆ ಮೀಸಲಾದ ಬಿಹಾರದ ಸಮಸ್ತಿಪುರ ಲೋಕಸಭಾ ಕ್ಷೇತ್ರದಿಂದ ಶಾಂಭವಿ ಗೆದ್ದಿದ್ದಾರೆ. ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸನ್ನಿ ಹಜಾರಿ ಅವರನ್ನು 1,87,251 ಮತಗಳಿಂದ ಸೋಲಿಸಿದ್ದಾರೆ.

ಇದೀಗ ಕೇವಲ 25 ವರ್ಷದ ಪ್ರಾಯದಲ್ಲಿ ಶಾಂಭವಿ ಲೋಕಸಭೆ ಪ್ರವೇಶಿಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಪಟ್ಟಿಯಲ್ಲಿರುವ ಕೊನೆಯ ಹೆಸರು ಈ ಬಾರಿ ಅತಿ ಹೆಚ್ಚು ಗಮನ ಸೆಳೆದ ರಾಜಸ್ಥಾನದ ಭರತ್ಪುರದಿಂದ ಚುನಾಯಿತರಾದ ದಲಿತ ಸಮುದಾಯದ ಸಂಜನಾ ಜಾಟವ್ ಅವರದ್ದು. ಸಂಜನಾ ವಯಸ್ಸು ಕೇವಲ 26 ವರ್ಷ. 2023 ರ ವಿಧಾನ ಸಭಾ ಚುನಾವಣೆಯಲ್ಲಿ ಕಟ್ಮೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಸಂಜನಾ ಕೇವಲ 409 ವೋಟುಗಳಿಂದ ಸೋಲನುಭವಿಸಿದ್ದರು. ಈಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಭರತ್ಪುರದಿಂದ ಸ್ಪರ್ಧಿಸಿ ಸಂಜನಾ 51,983 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News