ಪರಿಶಿಷ್ಟ ಪಂಗಡ ಪ್ರದೇಶದಲ್ಲಿರುವ ಕನಿಷ್ಠ ಶೇ. 44 ಗ್ರಾಮೀಣ ಕುಟುಂಬಗಳು ಇನ್ನೂ ನಳ್ಳಿ ನೀರಿನ ಸಂಪರ್ಕ ಪಡೆದಿಲ್ಲ: ಕೇಂದ್ರ

Update: 2023-07-31 16:40 GMT

Photo: ಸಾಂದರ್ಭಿಕ ಚಿತ್ರ | PTI 

ಹೊಸದಿಲ್ಲಿ: ದೇಶದ ಪರಿಶಿಷ್ಟ ಪಂಗಡ ಪ್ರದೇಶದಲ್ಲಿರುವ ಸುಮಾರು ಶೇ. 44 ಗ್ರಾಮೀಣ ಕುಟುಂಬಗಳು ಇನ್ನು ನಳ್ಳಿ ನೀರಿನ ಸಂಪರ್ಕ ಪಡೆದಿಲ್ಲ ಎಂದು ಸರಕಾರದ ಅಂಕಿ-ಅಂಶ ಹೇಳಿದೆ.

ರಾಜ್ಯ ಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಜಲಶಕ್ತಿಯ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್, 2.17 ಕೋಟಿ (ಶೇ. 55.3) ಗ್ರಾಮೀಣ ಬುಡಕಟ್ಟು ಕುಟುಂಬಗಳಲ್ಲಿ 1.2 ಕೋಟಿ ಕುಟುಂಬಗಳು ಇದುವರೆಗೆ ನಳ್ಳಿ ನೀರಿನ ಸಂಪರ್ಕ ಪಡೆದಿಲ್ಲ ಎಂದು ತಿಳಿಸಿದ್ದಾರೆ.

ಅರ್ಧಕ್ಕಿಂತ ಹೆಚ್ಚು ಗ್ರಾಮೀಣ ಬುಡಕಟ್ಟು ಕುಟುಂಬಗಳು ನಳ್ಳಿ ನೀರು ಪಡೆದುಕೊಳ್ಳದೇ ಇರುವ ರಾಜ್ಯಗಳೆಂದರೆ ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಪಶ್ಚಿಮಬಂಗಾಳ ಎಂದು ಅವರು ತಿಳಿಸಿದ್ದಾರೆ. ಬುಡಕಟ್ಟು ಪ್ರದೇಶ ಹಾಗೂ ಇತರ ಪ್ರದೇಶಗಳಲ್ಲಿರುವವರು ಸೇರಿದಂತೆ ದೇಶದ ಪ್ರತಿ ಗ್ರಾಮೀಣ ಕುಟುಂಬಗಳಿಗೆ 2024ರ ಒಳಗೆ ಕುಡಿಯುವ ನೀರು ಪೂರೈಸಲು ಕೇಂದ್ರ ಸರಕಾರ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಜಲ್ ಜೀವನ್ ಮಿಷನ್ (ಜೆಜೆಎಂ)-ಹರ್ ಘರ್ ಜಲ್ ಅನ್ನು ಅನುಷ್ಠಾನಗೊಳಿಸಿತ್ತು.

ಇನ್ನೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಲಶಕ್ತಿಯ ರಾಜ್ಯ ಸಚಿವ ಬಿಶ್ವೇಶ್ವರ್ ಟುಡು, ಕೇಂದ್ರ ಜಲ ಆಯೋಗ (CWC) ದೇಶದಲ್ಲಿರುವ 146 ಪ್ರಮುಖ ಜಲಾಶಯಗಳಲ್ಲಿ ನೀರು ಸಂಗ್ರಹದ ಮಟ್ಟವನ್ನು ವಾರಕ್ಕೊಮ್ಮೆ ಪರಿಶೀಲಿಸುತ್ತಿದೆ ಹಾಗೂ ಈ ಬಗ್ಗೆ ವಾರಕ್ಕೊಮ್ಮೆ ಪ್ರತಿ ಗುರುವಾರ ಬುಲೆಟಿನ್ ಅನ್ನು ಪ್ರಕಟಿಸುತ್ತಿದೆ ಎಂದರು.

ಜಲಾಶಯದ ಸಂಗ್ರಹದ ಇತ್ತೀಚೆಗಿನ ಬುಲೆಟಿನ್ನ ಪ್ರಕಾರ 86 ಜಲಾಶಯಗಳಲ್ಲಿ ಶೇ. 40 ಅಥವಾ ಅದರ ಸಾಮರ್ಥ್ಯಕ್ಕಿಂತ ಕಡಿಮೆ ನೀರು ಸಂಗ್ರಹ ಇದೆ ಎಂದು ಅವರು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News