ಈಡಿ ಸಮನ್ಸ್ ಜಾರಿಗೊಳಿಸಿದ ತಿಂಗಳ ನಂತರ ಕಾಂಗ್ರೆಸ್ ತೊರೆದ ರೂಪದರ್ಶಿ, ರಾಜಕಾರಣಿ ಅನುಕೃತಿ ಗುಸೈನ್

Update: 2024-03-17 15:26 GMT

ಅನುಕೃತಿ ಗುಸೈನ್ | (Photo: X/@Anukriti_Gusain)

ಹೊಸ ದಿಲ್ಲಿ: ಉತ್ತರಾಖಂಡದ ಮಾಜಿ ಸಚಿವ ಹರಕ್ ಸಿಂಗ್ ರಾವತ್ ಅವರ ಸೊಸೆ, ರೂಪದರ್ಶಿ, ರಾಜಕಾರಣಿ ಅನುಕೃತಿ ಗುಸೈನ್ ರಾವತ್ ಅವರು ಶನಿವಾರ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದು, ಅವರು ಶೀಘ್ರವೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಒಂದು ತಿಂಗಳ ಮುನ್ನ, ಅರಣ್ಯ ಹಗರಣ ಆರೋಪದ ಸಂಬಂಧ ತನ್ನೆದುರು ವಿಚಾರಣೆಗೆ ಹಾಜರಾಗುವಂತೆ ಅನುಕೃತಿ ಗುಸೈನ್ ರಾವತ್ ಹಾಗೂ ಅವರ ಮಾವ ಹರಕ್ ಸಿಂಗ್ ರಾವತ್ ಅವರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿಗೊಳಿಸಿತ್ತು.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕರಣ್ ಮಹಾರಾ ಅವರಿಗೆ ಪತ್ರ ಬರೆದಿರುವ ಅನುಕೃತಿ, ವೈಯಕ್ತಿಕ ಕಾರಣಗಳಿಗಾಗಿ ಪಕ್ಷ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ಮಾಜಿ ರಾಜ್ಯ ಅರಣ್ಯ ಸಚಿವ ಹಾಗೂ ಕಾಂಗ್ರೆಸ್ ನಾಯಕ ಹರಕ್ ಸಿಂಗ್ ರಾವತ್ ಹಾಗೂ ಅವರ ಸೊಸೆ ಅನುಕೃತಿಗೆ ಜಾರಿ ನಿರ್ದೇಶನಾಲಯವು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು. ಅರಣ್ಯ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಫೆಬ್ರವರಿ 7ರಂದು ಉತ್ತರಾಖಂಡ, ಹೊಸದಿಲ್ಲಿ ಹಾಗೂ ಹರ್ಯಾಣದಲ್ಲಿ ಜಾರಿ ನಿರ್ದೇಶನಾಲಯವು ಶೋಧ ಕಾರ್ಯಾಚರಣೆ ನಡೆಸಿದ ನಂತರ, ಈ ಸಮನ್ಸ್ ಜಾರಿಗೊಳಿಸಲಾಗಿತ್ತು.

ಅರಣ್ಯ ಸಚಿವರಾಗಿದ್ದ ಹರಕ್ ಸಿಂಗ್ ರಾವತ್ ವಿರುದ್ಧ ಕಾನೂನುಬಾಹಿರವಾಗಿ ಸಾವಿರಾರು ಮರಗಳನ್ನು ಉರುಳಿಸಿದ ಆರೋಪ, ಹಣಕಾಸು ಅಕ್ರಮ ಹಾಗೂ 2019ರಲ್ಲಿ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಪಾಖ್ರೊ ಹುಲಿ ಸಂರಕ್ಷಿತ ವಲಯದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ ಆರೋಪವು ಕೇಳಿ ಬಂದಿತ್ತು. ಈ ಸಂಬಂಧ ಅವರ ವಿರುದ್ಧ ಪ್ರಕರಣವೂ ದಾಖಲಾಗಿತ್ತು.

ಮೊದಲಿಗೆ ಬಿಜೆಪಿಯಲ್ಲಿದ್ದ ಹರಕ್ ಸಿಂಗ್ ರಾವತ್, ಈ ಹಿಂದಿನ ಬಿಜೆಪಿ ಸರಕಾರದಲ್ಲಿ ಅರಣ್ಯ ಸಚಿವರಾಗಿದ್ದಾಗ ಪಾಖ್ರೊ ಹುಲಿ ಸಂರಕ್ಷಿತ ವಲಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News