ಮೋದಿ ಸರಕಾರದ ವಿರುದ್ಧ ಕೆನಡಾ ಪ್ರಧಾನಿ ಟ್ರುಡೊ ವಾಗ್ದಾಳಿ
ಹೊಸದಿಲ್ಲಿ: ಭಾರತವು ಕೆನಡಾದ ಆರು ರಾಜತಾಂತ್ರಿಕರನ್ನು ದೇಶದಿಂದ ಉಚ್ಚಾಟಿಸಿರುವ ಹಿನ್ನೆಲೆಯಲ್ಲಿ ಆ ದೇಶದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ತನಿಖೆಯೊಂದರಲ್ಲಿ (ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ) ಭಾರತೀಯ ರಾಯಭಾರಿ ‘ಆಸಕ್ತಿಯ ವ್ಯಕ್ತಿ’ಯಾಗಿದ್ದಾರೆ ಎಂಬ ಮಾಹಿತಿಯನ್ನು ಕೆನಡಾ ಸರಕಾರವು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ನೀಡಿತ್ತು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತವು ಇದೊಂದು ಅಸಂಬದ್ಧ ಆರೋಪ ಎಂದು ಬಣ್ಣಿಸಿದೆ. ಕೆನಡಾದಲ್ಲಿಯ ತನ್ನ ರಾಯಭಾರಿ ಮತ್ತು ಇತರ ರಾಜತಾಂತ್ರಿಕರನ್ನು ಹಿಂದೆಗೆದುಕೊಳ್ಳಲು ನಿರ್ಧರಿಸಿರುವ ಅದು, ಕೆನಡಾದ ಆರು ರಾಜತಾಂತ್ರಿಕರನ್ನು ಉಚ್ಚಾಟಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರುಡೊ,‘ನಾನು ಪ್ರಧಾನಿ ಮೋದಿಯವರೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದೇನೆ.ಉಭಯ ದೇಶಗಳ ಗುಪ್ತಚರ ಸಂಸ್ಥೆಗಳೊಂದಿಗೆ ನಾವು ತೊಡಗಿಸಿಕೊಂಡಿದ್ದೇವೆ. ಆದರೆ ದುರದೃಷ್ಟವಶಾತ್ ನಾನು ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಸಂಸತ್ತಿನಲ್ಲಿ ಹೇಳಿಕೆ ನೀಡಿದ ಬಳಿಕ ಮತ್ತು ಈವರೆಗೆ ಪ್ರತಿ ಹೆಜ್ಜೆಯಲ್ಲಿಯೂ ಭಾರತ ಸರಕಾರದ ಉತ್ತರವು ವಿಷಯವನ್ನು ನಿರಾಕರಿಸುವ, ಮಸುಕುಗೊಳಿಸುವ ಮತ್ತು ನನ್ನ ಮೇಲೆ ವೈಯಕ್ತಿಕವಾಗಿ ಹಾಗೂ ಕೆನಡಾ ಸರಕಾರ,ಅದರ ಅಧಿಕಾರಿಗಳು ಮತ್ತು ಪೋಲೀಸ್ ಏಜೆನ್ಸಿಗಳ ಋಜುತ್ವದ ಮೇಲೆ ದಾಳಿಯ ಉದ್ದೇಶವನ್ನು ಹೊಂದಿದೆ ’ಎಂದು ಹೇಳಿದರು.
ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಹುಳಿ ಹಿಂಡುವುದು ಕೆನಡಾದ ಆಯ್ಕೆಯಾಗಿರಲಿಲ್ಲ ಎಂದು ಟ್ರುಡೊ ಒಪ್ಪಿಕೊಂಡರು.
ಭಾರತವು ವಿಶ್ವದ ಪ್ರಮುಖ ಪ್ರಜಾಪ್ರಭುತ್ವಗಳಲ್ಲಿ ಒಂದು ಎಂದು ಕೆನಡಾ ಪರಿಗಣಿಸಿದೆ ಎಂದ ಅವರು,ವಿಶ್ವಾದ್ಯಂತ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಹೆಚ್ಚುತ್ತಿರುವಾಗ ಪ್ರಜಾಪ್ರಭುತ್ವಗಳು ಒಂದಾಗಿರಬೇಕು ಎಂದು ಒತ್ತಿ ಹೇಳಿದರು.
ಕೆನಡಾದಲ್ಲಿ ದೇಶದ ಪ್ರಜೆಯೋರ್ವನ ಹತ್ಯೆ ಒಂದು ದೇಶವಾಗಿ ನಾವು ಕಡೆಗಣಿಸುವ ವಿಷಯವಲ್ಲ ಎಂದು ಪ್ರತಿಪಾದಿಸಿದ ಟ್ರುಡೊ, ‘ಕೆನಡಾದ ತನಿಖಾ ಸಂಸ್ಥೆಗಳು ಭಾರತದಲ್ಲಿಯ ತಮ್ಮ ಸಹವರ್ತಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದವು, ಆದರೆ ಭಾರತದ ತನಿಖಾ ಸಂಸ್ಥೆಗಳು ಅದನ್ನು ಮತ್ತು ಸಮಸ್ಯೆಗೆ ಮಾರ್ಗವೊಂದನ್ನು ಕಂಡುಕೊಳ್ಳುವ ಪ್ರಯತ್ನಗಳನ್ನು ತಿರಸ್ಕರಿಸಿವೆ. ಇದು ದೇಶಾದ್ಯಂತ ಕೆನಡಾ ಪ್ರಜೆಗಳ ಮೇಲೆ ಹಿಂಸಾತ್ಮಕ ಪರಿಣಾಮಗಳನ್ನುಂಟು ಮಾಡಲು ಇಲ್ಲಿಯ ಭಾರತೀಯ ರಾಜತಾಂತ್ರಿಕರು ಕ್ರಿಮಿನಲ್ ಸಂಘಟನೆಗಳೊಂದಿಗೆ ಕೈಗೂಡಿಸುವ ಸರಣಿ ಕಾರ್ಯಾಚರಣೆಗೆ ಅಡ್ಡಿಯನ್ನುಂಟು ಮಾಡುವ ಹಂತಕ್ಕೆ ನಮ್ಮನ್ನು ತಂದಿದೆ’ ಎಂದು ಹೇಳಿದರು.