ಮೋದಿ ಸರಕಾರ ದುರ್ಬಲವಾಗಿದ್ದು, ಯಾವುದೇ ಕ್ಷಣ ಪತನವಾಗಬಹುದು: ಲಾಲೂ ಪ್ರಸಾದ್ ಯಾದವ್

Update: 2024-07-06 06:37 GMT

ಲಾಲೂ ಪ್ರಸಾದ್ ಯಾದವ್ |  PC : PTI 

ಪಾಟ್ನಾ: ಮೋದಿ ಸರಕಾರವು ತಾನಾಗಿಯೇ ಪತನವಾಗಲಿದೆ ಎಂದು ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಭವಿಷ್ಯ ನುಡಿದಿದ್ದಾರೆ.

ಆರ್ಜೆಡಿ ಪಕ್ಷದ 27ನೇ ವಾರ್ಷಿಕ ಸಂಸ್ಥಾಪನಾ ದಿನವನ್ನುದ್ದೇಶಿಸಿ ಮಾತನಾಡಿದ ಅವರು, “ನರೇಂದ್ರ ಮೋದಿ ಸರಕಾರವು ಯಾವಾಗ ಬೇಕಾದರೂ ಪತನವಾಗಬಹುದು. ಅದು ಆಗಸ್ಟ್ ತಿಂಗಳಲ್ಲೇ ಪತನಗೊಳ್ಳಬಹುದು. ಹೀಗಾಗಿ ಮಧ್ಯಂತರ ಚುನಾವಣೆಗೆ ಸನ್ನದ್ಧರಾಗಿರಿ” ಎಂದು ಆರ್ಜೆಡಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಇದೇ ವೇಳೆ, ಮುಂದಿನ ವರ್ಷ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತೇಜಸ್ವಿ ಯಾದವ್ ಆರ್ಜೆಡಿ ಪಕ್ಷದ ಚುಕ್ಕಾಣಿ ಹಿಡಿಯಬಹುದು ಎಂಬ ಸುಳಿವನ್ನೂ ಅವರು ನೀಡಿದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷಾಂತರ ಕುರಿತು ಅವರ ಹೆಸರು ಉಲ್ಲೇಖಿಸದೆಯೇ ಟೀಕಿಸಿದ ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್, “ನಾವು ನಮ್ಮ ಮೂಲಭೂತ ಸೈದ್ಧಾಂತಿಕತೆಯಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ನಾವು 2020ರ ವಿಧಾನಸಭಾ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿದ್ದೆವು ಹಾಗೂ ನಮ್ಮನ್ನು ಅಧಿಕಾರದಿಂದ ಹೊರಗಿಡಲಾಯಿತು” ಎಂದು ಆರೋಪಿಸಿದರು.

ಲಾಲೂ ಪ್ರಸಾದ್ ಯಾದವ್ ರ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ನಿತ್ಯಾನಂದ ರಾಯ್, “ಲಾಲೂ ಪ್ರಸಾದ್ ಯಾದವ್ ಅವರು ಮುಂಗೇರಿ ಲಾಲ್ ನ ಈಡೇರದ ಕನಸುಗಳನ್ನು ಕಾಣುತ್ತಿದ್ದಾರೆ. ಜನರು ಮೋದಿಗೆ ಮತ ಚಲಾಯಿಸಿದ್ದು, ಅವರು ಮೂರನೆ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರ್ಜೆಡಿ ಆಡಳಿತಾವಧಿಯಲ್ಲಿ ಜನರಿಂದ ತಿರಸ್ಕೃತಗೊಂಡಿರುವ ವಿರೋಧ ಪಕ್ಷಗಳನ್ನು ಮೋದಿ ನಾಯಕತ್ವ ಹಾಗೂ ನಿತೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಎನ್ಡಿಎ ಮೈತ್ರಿಕೂಟ ಪರಾಭವಗೊಳಿಸುತ್ತಲೇ ಸಾಗಲಿದೆ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News