ಮೋದಿ ಪ್ರಧಾನಿಯಾಗಬಾರದು : ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ

Update: 2024-06-08 13:49 GMT

ಮಮತಾ ಬ್ಯಾನರ್ಜಿ , ನರೇಂದ್ರ ಮೋದಿ | PC : PTI 

ಹೊಸದಿಲ್ಲಿ : "ಈ ಬಾರಿಯ ಜನಾದೇಶ ನರೇಂದ್ರ ಮೋದಿ ವಿರುದ್ಧವಾಗಿತ್ತು, ಆದ್ದರಿಂದ ಅವರು ಈ ಬಾರಿ ಪ್ರಧಾನಿಯಾಗಬಾರದು. ಬೇರೆಯವರು ಪ್ರಧಾನಿಯಾಗಗಬೇಕು” ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ನೂತನವಾಗಿ ಚುನಾಯಿತರಾದ ಟಿಎಂಸಿ ಸಂಸದರೊಂದಿಗಿನ ಸಭೆಯ ನಂತರ ಅವರು ಮಾತನಾಡಿದರು. ಬಿಜೆಪಿಯು ಪ್ರಜಾಸತ್ತಾತ್ಮಕವಲ್ಲದ ಮತ್ತು ಕಾನೂನುಬಾಹಿರ ರೀತಿಯಲ್ಲಿ ಸರಕಾರವನ್ನು ರಚಿಸಿದೆ. ಹಾಗಾಗಿ ನೂತನ ಸರಕಾರದ ಪ್ರಮಾಣ ವಚನ ಸಮಾರಂಭದಲ್ಲಿ ತೃಣಮೂಲ ಕಾಂಗ್ರೆಸ್ ಭಾಗವಹಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಘೋಷಿಸಿದರು.

ಸಭೆಯಲ್ಲಿ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿಯವರನ್ನು ಟಿಎಂಸಿ ಸಂಸದೀಯ ಪಕ್ಷದ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು.

“ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು. ಇದಕ್ಕಾಗಿ ತಮ್ಮ ಪಕ್ಷವು ಸಂಸತ್ತಿನಲ್ಲಿ ದನಿಯೆತ್ತಲಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯುವುದು ಪ್ರಧಾನಿ ಮೋದಿಯವರ ಉದ್ದೇಶವಾಗಿತ್ತು. ಆದರೆ, ಅವರು (ಬಿಜೆಪಿ) ಬಹುಮತದ ಗಡಿಯನ್ನು ದಾಟಲಿಲ್ಲ. ಈಗ ಅವರು ಹೇಗೆ ಸಂವಿಧಾನವನ್ನು ತಿದ್ದುಪಡಿ ಮಾಡುತ್ತಾರೆ? ಕಳೆದ ಬಾರಿ ಅವರು ಅವರು ಚರ್ಚೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸಿದ್ದರು. ಆದರೆ ಈ ಬಾರಿ ಆ ರೀತಿ ಮಾಡಲು ಸಾಧ್ಯವಾಗುವುದಿಲ್ಲ”, ಎಂದು ಅವರು ಹೇಳಿದರು.

"ನಾವು ಪರಿಸ್ಥಿತಿಯ ಮೇಲೆ ನಿಗಾ ಇಡುತ್ತಿದ್ದೇವೆ. ಈ ಎನ್ ಡಿ ಎ ಸರಕಾರ ಎಷ್ಟು ದಿನ ಇರುತ್ತದೆ ಎಂದು ನೋಡೋಣ. ಇಂದು INDIA ಮೈತ್ರಿಕೂಟ ಸರಕಾರ ರಚನೆಗೆ ಹಕ್ಕು ಸಾಧಿಸದಿರಬಹುದು. ಅಂದರೆ ಅದು ನಾಳೆ ಸರಕಾರ ಮಾಡುವುದಿಲ್ಲ ಎಂದು ಅರ್ಥವಲ್ಲ" ಎಂದು ಪಶ್ಚಿಮ ಬಂಗಾಳದ ಸಿಎಂ ಆಗಿರುವ ಮಮತಾ ಹೇಳಿದರು.

ತಮ್ಮ ಪಕ್ಷವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ದುರ್ಬಲ ಮತ್ತು ಅಸ್ಥಿರ ಬಿಜೆಪಿ ನೇತೃತ್ವದ ಎನ್ ಡಿ ಎ ಸರಕಾರವನ್ನು ಅಧಿಕಾರದಿಂದ ತೆಗೆದುಹಾಕಿದರೆ ಸಂತೋಷವಾಗುತ್ತದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News