ದೇಶದಲ್ಲಿ ಏಕ ಪಕ್ಷ ಪ್ರಭುತ್ವದ ಸ್ಥಾಪನೆಗೆ ಮೋದಿ ಬಯಸುತ್ತಿದ್ದಾರೆ: ಖರ್ಗೆ ಆರೋಪ
ಹೊಸದಿಲ್ಲಿ: ‘‘ನರೇಂದ್ರ ಮೋದಿ ಹಾಗೂ ಆಡಳಿತರೂಢ ಬಿಜೆಪಿಯವರು ದೇಶದಲ್ಲಿ ಏಕಪಕ್ಷದ ಪ್ರಭುತ್ವ ಸ್ಥಾಪಿಸಲು ಬಯಸುತ್ತಿದ್ದಾರೆ ಹಾಗೂ ಈ ಕಾರಣಕ್ಕಾಗಿ ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಲಾಗುತ್ತಿದೆ’’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪಾದಿಸಿದ್ದಾರೆ.
‘‘ಅವರು (ಮೋದಿ ಹಾಗೂ ಬಿಜೆಪಿ) ‘ಏಕ್ ಅಕೇಲಾ’ (ಓರ್ವ ಏಕಾಂಗಿ)ಬಗ್ಗೆ ಮಾತನಾಡುತ್ತಿದ್ದು, ಇದು ಪ್ರಜಾಪ್ರಭುತ್ವದ ಧ್ವಂಸಕ್ಕೆ ಸಮಾನವಾಗಿದೆ. ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸುವ ಮೂಲಕ ಅವರು ಈ ಕೆಲಸವನ್ನು ನಿಖರವಾಗಿ ಮಾಡುತ್ತಿದ್ದಾರೆ’’ ಎಂದು ಖರ್ಗೆ ಅವರು ಸಾಮಾಜಿಕ ಜಾಲತಾಣ X ನಲ್ಲಿ ಟ್ವೀಟ್ ಮಾಡಿದ್ದಾರೆ.
140ಕ್ಕೂ ಅಧಿಕ ಪ್ರತಿಪಕ್ಷ ಸಂಸದರನ್ನು ಸದನದಿಂದ ಅಮಾನತುಗೊಳಿಸಲಾಗಿದೆ. ಯಾಕೆಂದರೆ ಅವರು ಭದ್ರತಾ ಉಲ್ಲಂಘನೆಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವರಿಂದ ಹೇಳಿಕೆಯೊಂದನ್ನು ಬಯಸಿದ್ದರು. ಆದರೆ ದುಷ್ಕರ್ಮಿಗಳು ಸಂಸತ್ ಭವನದೊಳಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದ ಬಿಜೆಪಿ ಸಂಸದ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಇದು ಯಾವ ರೀತಿಯ ತನಿಖೆ ಎಂದು ಖರ್ಗೆ ಹೇಳಿದ್ದಾರೆ.
‘‘ಸಂಸತ್ ಭವನದ ಭದ್ರತೆಯ ಜವಾಬ್ದಾರಿ ಹೊತ್ತ ಹಿರಿಯ ಅಧಿಕಾರಿಗಳನ್ನು ಇದಕ್ಕೆ ಯಾಕೆ ಹೊಣೆಯಾಗಿ ಮಾಡಿಲ್ಲ? ಇಷ್ಟರೊಳಗೆ ಅವರ ತಲೆಗಳು ಉರುಳಬೇಕಿತ್ತು’’ ಎಂದು ಅವರು ಹೇಳಿದ್ದಾರೆ.
ಒಳನುಸುಳುಕೋರರು ಕೆಲವು ತಿಂಗಳುಗಳಿಂದ ಈ ಸಂಚನ್ನು ರೂಪಿಸಿದ್ದರು. ಇಂತಹದ್ದೊಂದು ಅಗಾಧವಾದ ಭದ್ರತಾ ವೈಫಲ್ಯಕ್ಕೆ ಯಾರು ಹೊಣೆ ಎಂದವರು ಪ್ರಶ್ನಿಸಿದ್ದಾರೆ.
‘‘ ಸಂಸತ್ ನ ಬಹುಸ್ತರದ ಭದ್ರತೆಯನ್ನು ಪರಿಗಣನೆಗೆ ತೆಗೆದುಕೊಂಡರೆ, ಈ ಇಬ್ಬರು ನುಸುಳುಕೋರರಿಗೆ ತಮ್ಮ ಬೂಟುಗಳ ಒಳಗೆ ಹಳದಿ ಬಣ್ಣದ ಹೊಗೆಬಾಂಬ್ ಗಳನ್ನು ಬಚ್ಚಿಡಲು ಹಾಗೂ ಸಂಸತ್ ಭವನವನ್ನು ಪ್ರವೇಶಿಸಲು ಮತ್ತು ಭಾರತದ ಪ್ರಜಾಪ್ರಭುತ್ವದ ಪರಮಪವಿತ್ರ ಸ್ಥಳವನ್ನು ತಲುಪಲು ಹೇಗೆ ಸಾಧ್ಯವಾಯಿತು’’ ಎಂದು ಕಾಂಗ್ರೆಸ್ ಅಧ್ಯಕ್ಷರು ಅಚ್ಚರಿ ವ್ಯಕ್ತಪಡಿಸಿದ್ದಾರೆ.