ಹಣದುಬ್ಬರ, ನಿರುದ್ಯೋಗದಿಂದಾಗಿ ಮೋದಿ ಜನಪ್ರಿಯತೆ ಕುಸಿತ, ಆದರೂ 2024ರಲ್ಲಿ ಬಿಜೆಪಿಗೆ ಮತ್ತೆ ಅಧಿಕಾರದ ಸಾಧ್ಯತೆ: ಸಮೀಕ್ಷೆ

Update: 2023-08-25 16:39 GMT

ನರೇಂದ್ರ ಮೋದಿ | PHOTO: PTI 

ಹೊಸದಿಲ್ಲಿ: ಹೆಚ್ಚುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗದಿಂದಾಗಿ ಭಾರತೀಯ ಮತದಾರರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರಕಾರದ ಬಗ್ಗೆ ಅಸಮಾಧಾನ ಹೆಚ್ಚುತ್ತಿದೆ, ಆದರೂ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತನ್ನ ವೈಯಕ್ತಿಕ ಜನಪ್ರಿಯತೆಯಿಂದಾಗಿ ಮೋದಿ ಮೂರನೇ ಅಧಿಕಾರಾವಧಿಯನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ‘ಇಂಡಿಯಾ ಟುಡೇ’ ಮ್ಯಾಗಝಿನ್ ನಡೆಸಿರುವ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯು ಶುಕ್ರವಾರ ಹೇಳಿದೆ.

ಮುಖ್ಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರ ಜನಪ್ರಿಯತೆ ಹೆಚ್ಚಳಗೊಂಡಿದ್ದು, 26 ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಉತ್ತಮ ಸಾಧನೆಯನ್ನು ಮಾಡುವ ನಿರೀಕ್ಷೆಯಿದೆ ಎಂದು ಸಮೀಕ್ಷೆಯು ಹೇಳಿದೆ.

ಜನಪ್ರಿಯತೆ ಕುಸಿದಿದ್ದರೂ ಮೋದಿ ಭಾರತದ ಮುಂದಿನ ಪ್ರಧಾನಿ ಹುದ್ದೆಗೆ ಅತ್ಯುತ್ತಮ ಅಭ್ಯರ್ಥಿಯಾಗಿ 36 ಅಂಕಗಳ ಮುನ್ನಡೆಯೊಂದಿಗೆ ರಾಹುಲ್‌ಗಿಂತ ಬಹಳ ಮುಂದಿದ್ದಾರೆ ಮತ್ತು ಅವರ ಬಿಜೆಪಿಯು ಈಗ ಚುನಾವಣೆ ನಡೆದರೆ ಲೋಕಸಭೆಯ 542 ಸ್ಥಾನಗಳ ಪೈಕಿ 287 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಯು ಭವಿಷ್ಯ ನುಡಿದಿದೆ.

ವರ್ಷಕ್ಕೆರಡು ಬಾರಿ ನಡೆಸಲಾಗುವ ಇಂಡಿಯಾ ಟುಡೇ ಸಮೀಕ್ಷೆಯು ಜುಲೈ 15 ಮತ್ತು ಆಗಸ್ಟ್ ನಡುವೆ ಸಮೀಕ್ಷೆಗೆ ಉತ್ತರಿಸಿದ್ದ 1.60 ಲಕ್ಷಕ್ಕೂ ಅಧಿಕ ಜನರ ಪೈಕಿ ಶೇ.59ರಷ್ಟು ಜನರು ತಾವು ಮೋದಿ ಸರಕಾರದಿಂದ ತೃಪ್ತರಾಗಿದ್ದೇವೆ ಎಂದು ಹೇಳಿದ್ದಾರೆ. ಜನವರಿಯಲ್ಲಿ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಇಂತಹವರ ಸಂಖ್ಯೆ ಶೇ.67ರಷ್ಟಿತ್ತು.

ಇದೇ ರೀತಿ ಪ್ರಧಾನಿಯಾಗಿ ಮೋದಿಯವರ ಸಾಧನೆಯನ್ನು ಮೆಚ್ಚಿದ್ದವರ ಸಂಖ್ಯೆಯೂ ಕುಸಿದಿದೆ. ಮೋದಿಯವರು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶೇ.63ರಷ್ಟು ಜನರು ಹೇಳಿದ್ದಾರೆ. ಈ ಸಂಖ್ಯೆ ಜನವರಿಯಲ್ಲಿ ಶೇ.72ರಷ್ಟಿತ್ತು. ಮೋದಿಯವರ ಸಾಧನೆ ಕಳಪೆಯಾಗಿದೆ ಎಂದು ಹೇಳಿದವರ ಸಂಖ್ಯೆ ಹಿಂದಿನ ಶೇ.16ರಿಂದ ಈಗ ಶೇ.22ಕ್ಕೆ ಏರಿದೆ.

ಹಣದುಬ್ಬರ ಹೆಚ್ಚಿದಾಗೆಲ್ಲ ಅತೃಪ್ತಿ ವ್ಯಕ್ತಪಡಿಸುವವರ ಸಂಖ್ಯೆ ಹೆಚ್ಚುತ್ತದೆ ಎಂದು ಇಂಡಿಯಾ ಟುಡೇ ಸಮೀಕ್ಷೆಯನ್ನು ನಡೆಸಿದ ಸಿ-ವೋಟರ್ ಏಜೆನ್ಸಿಯ ಯಶವಂತ ದೇಶಮುಖ ಹೇಳಿದ್ದಾರೆ.

ಆದರೆ ಇವು ಗಮನಾರ್ಹ ಸಂಖ್ಯೆಗಳಾಗಿವೆ ಎಂದು ಅಧಿಕಾರದಲ್ಲಿ ಒಂಭತ್ತು ವರ್ಷಗಳ ಬಳಿಕ ಮೋದಿಯವರ ವೈಯಕ್ತಿಕ ಜನಪ್ರಿಯತೆಯನ್ನು ಉಲ್ಲೇಖಿಸಿ ಹೇಳಿರುವ ದೇಶಮುಖ,ವಿಶ್ವಾಸಾರ್ಹತೆಯ ಪ್ರಜ್ಞೆಯಿದೆ,ಮತದಾರರು ಅವರ ಪ್ರಯತ್ನಗಳನ್ನು ನೋಡುತ್ತಿದ್ದಾರೆ. ಕೆಟ್ಟ ಸುದ್ದಿಗಳು ಅವರ ಜನಪ್ರಿಯತೆಗೆ ಹೆಚ್ಚಿನ ಹಾನಿಯನ್ನುಂಟು ಮಾಡಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿದೆ ಎಂದಿರುವ ಸಮೀಕ್ಷೆಯು ಪಕ್ಷದ ಗತವೈಭವನ್ನು ಮರಳಿಸಲು ಅವರು ಅತ್ಯಂತ ಅರ್ಹ ವ್ಯಕ್ತಿಯಾಗಿದ್ದಾರೆ ಎಂದು ಶೇ.32ರಷ್ಟು ಜನರು ಹೇಳುವ ಮೂಲಕ ರಾಹುಲ್ ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಅನುಮೋದನೆಯನ್ನು ಪಡೆದುಕೊಂಡಿದ್ದಾರೆ ಎಂದಿದೆ.

ಪ್ರಧಾನಿಯಾಗಲು ವಿರೋಧ ಪಕ್ಷಗಳ ನಾಯಕರ ಪೈಕಿ ರಾಹುಲ್ ಅತ್ಯಂತ ಸೂಕ್ತ ಅಭ್ಯರ್ಥಿ ಎಂದು ಶೇ.24ರಷ್ಟು ಜನರು ಅಭಿಪ್ರಾಯಿಸಿದ್ದಾರೆ. ಜನವರಿಯಲ್ಲಿ ಈ ಸಂಖ್ಯೆ ಶೇ,13ರಷ್ಟಿದ್ದು,ಆಗ ಅವರು ಮೂರನೇ ಆಯ್ಕೆಯಾಗಿದ್ದರು.

2019ರಲ್ಲಿ ಕಾಂಗ್ರಸ್‌ನ ಹೀನಾಯ ಸೋಲಿನ ಬಳಿಕ ರಾಹುಲ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದರು. ಆದರೂ ತನ್ನ ಐದು ತಿಂಗಳ ಅವಧಿಯ ಭಾರತ ಜೋಡೊ ಯಾತ್ರೆಯ ಬಳಿಕ ಅವರು ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದಾರೆ.

ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು ಬಿಜೆಪಿಯು ದುರ್ಬಲವಾಗಿರುವ ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಸದೃಢ ನೆಲೆಯನ್ನು ಹೊಂದಿರುವ ಪ್ರಬಲ ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News