ಉಚ್ಚಾಟನೆ ವಿರುದ್ಧ ಮೊಯಿತ್ರಾ ಅರ್ಜಿ: ಲೋಕಸಭಾ ಕಾರ್ಯದರ್ಶಿಯ ಉತ್ತರ ಕೋರಿದ ಸುಪ್ರೀಂ

Update: 2024-01-03 16:16 GMT

 ಮಹುವಾ ಮೊಯಿತ್ರಾ | Photo: PTI 

ಹೊಸದಿಲ್ಲಿ: ಲೋಕಸಭೆಯಿಂದ ತನ್ನ ಉಚ್ಚಾಟನೆಯನ್ನು ಪ್ರಶ್ನಿಸಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಲೋಕಸಭೆಯ ಮಹಾ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದೆ.

ಸದನ ಕಲಾಪಗಳಿಗೆ ಹಾಜರಾಗಲು ತನಗೆ ಅವಕಾಶ ನೀಡುವಂತೆ ಮೊಯಿತ್ರಾರ ಮಧ್ಯಂತರ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ದೀಪಂಕರ ದತ್ತಾ ಅವರ ಪೀಠವು, ಹಾಗೆ ಮಾಡಿದರೆ ಮುಖ್ಯ ಅರ್ಜಿಯನ್ನು ಪುರಸ್ಕರಿಸಿದಂತಾಗುತ್ತದೆ ಎಂದು ಹೇಳಿತು. ಮಧ್ಯಂತರ ಪರಿಹಾರದ ನಿಮ್ಮ ಮನವಿಯನ್ನು ನಾವು ಮಾರ್ಚ್ ನಲ್ಲಿ ಪರಿಗಣಿಸುತ್ತೇವೆ ಎಂದು ನ್ಯಾಯಮೂರ್ತಿ ಖನ್ನಾ ಮೊಯಿತ್ರಾ ಪರ ಹಿರಿಯ ನ್ಯಾಯವಾದಿ ಅಭಿಷೇಕ ಸಿಂಗ್ವಿಯವರಿಗೆ ತಿಳಿಸಿದರು.

ಮೊಯಿತ್ರಾ ತನ್ನ ಅರ್ಜಿಯಲ್ಲಿ ಕಕ್ಷಿಗಳನ್ನಾಗಿ ಮಾಡಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಲೋಕಸಭೆಯ ನೀತಿ ಸಮಿತಿಗೆ ಯಾವುದೇ ನೋಟಿಸನ್ನು ಹೊರಡಿಸಲು ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯವು, ತಾನು ಲೋಕಸಭೆಯ ಮಹಾ ಕಾರ್ಯದರ್ಶಿಗಳಿಂದ ಮಾತ್ರ ಉತ್ತರವನ್ನು ಕೋರುವುದಾಗಿ ಸ್ಪಷ್ಟಪಡಿಸಿತು.

ಲೋಕಸಭಾ ಮಹಾ ಕಾರ್ಯದರ್ಶಿಗಳ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ವಿಧ್ಯುಕ್ತ ನೋಟಸನ್ನು ಹೊರಡಿಸದಂತೆ ನ್ಯಾಯಾಲಯವನ್ನು ಕೋರಿಕೊಂಡರು. ಮೊಯಿತ್ರಾರ ಅರ್ಜಿಗೆ ಉತ್ತರವನ್ನು ತಾನು ಸಲ್ಲಿಸುವುದಾಗಿ ಅವರು ತಿಳಿಸಿದರು.

ದೇಶದ ಸಾರ್ವಭೌಮ ಅಂಗಗಳಲ್ಲಿ ಒಂದಾಗಿರುವ ಸಂಸತ್ತಿನಲ್ಲಿ ಶಿಸ್ತಿನ ಆಂತರಿಕ ವಿಷಯದಲ್ಲಿ ನ್ಯಾಯಾಲಯವು ಮಧ್ಯೆ ಪ್ರವೇಶಿಸಬಾರದು ಎಂದೂ ಮೆಹ್ತಾ ಹೇಳಿದರು. ಬಳಿಕ ತನ್ನ ಆದೇಶವನ್ನು ಹೊರಡಿಸಿದ ಸರ್ವೋಚ್ಚ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್ 11ರಿಂದ ಆರಂಭಗೊಳ್ಳುವ ವಾರಕ್ಕೆ ಪಟ್ಟಿ ಮಾಡಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News