ಫೋರ್ಬ್ಸ್ ಪಟ್ಟಿಯಲ್ಲಿ ಮತ್ತೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮುಖೇಶ್ ಅಂಬಾನಿ
ಹೊಸದಿಲ್ಲಿ : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ 100 ಮಂದಿಯ 2023 ಫೋರ್ಬ್ಸ್ ಪಟ್ಟಿಯಲ್ಲಿ ತಮ್ಮ ಅಗ್ರ ಸ್ಥಾನವನ್ನು ಮರುಪಡೆದುಕೊಂಡಿದ್ದಾರೆ. ಈ ಪಟ್ಟಿಯ ಪ್ರಕಾರ ಅಂಬಾನಿ ಅವರ ಒಟ್ಟು ಸಂಪತ್ತಿನ ಮೌಲ್ಯ 92 ಬಿಲಿಯನ್ ಡಾಲರ್ ಆಗಿದೆ.
ಕಳೆದ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಆದರೆ ಕಳೆದ ವರ್ಷದ ಹಿಂಡೆನ್‌ಬರ್ಗ್ ವರದಿ ಅವರ ಕಂಪೆನಿಗಳ ವಿರುದ್ಧ ಅವ್ಯವಹಾರ ಆರೋಪ ಹೊರಿಸಿದ ನಂತರ ಅವುಗಳ ಮೌಲ್ಯ ಕುಸಿತದಿಂದ ಅದಾನಿ ಅವರ ಒಟ್ಟು ಸಂಪತ್ತಿನ ಮೌಲ್ಯ 68 ಬಿಲಯನ್ ಡಾಲರ್‌ಗೆ ಇಳಿಕೆಯಾಗಿ ಈಗ ಅವರು ಫೋರ್ಬ್ಸ್ ಪಟ್ಟಿಯಲ್ಲಿ ಎರಡನೇ ಅತ್ಯಂತ ಶ್ರೀಮಂತ ಭಾರತೀಯರಾಗಿದ್ದಾರೆ.
ಭಾರತದ 100 ಶ್ರೀಮಂತರ ಒಟ್ಟು ಆಸ್ತಿ ಮೌಲ್ಯ 2023ರಲ್ಲಿ 799 ಬಿಲಿಯನ್ ಡಾಲರ್ ಆಗಿದೆ.
ಎಚ್‌ಸಿಎಲ್ ಸಂಸ್ಥೆಯ ಶಿವ್ ನಾಡರ್ ಅವರು ತಮ್ಮ 29.3 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಮೂರನೇ ಸ್ಥಾನ ಪಡೆದಿದ್ದರೆ, ಜಿಂದಾಲ್ ಗ್ರೂಪಿನ ಸಾವಿತ್ರಿ ಜಿಂದಾಲ್ ತಮ್ಮ 24 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಉಳಿದಂತೆ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ರಾಧಾಕಿಶನ್ ದಮಾನಿ (23 ಬಿಲಿಯನ್ ಡಾಲರ್), 6ನೇ ಸ್ಥಾನದಲ್ಲಿ ಸೈರಸ್ ಪೂನಾವಾಲ (20.7 ಬಿಲಿಯನ್ ಡಾಲರ್), ಏಳನೇ ಸ್ಥಾನದಲ್ಲಿ ಹಿಂದುಜಾ ಕುಟುಂಬ (20 ಬಿಲಿಯನ್ ಡಾಲರ್), ಎಂಟನೇ ಸ್ಥಾನದಲ್ಲಿ ದಿಲೀಪ್ ಸಾಂಘ್ವಿ (19 ಬಿಲಿಯನ್ ಡಾಲರ್), ಒಂಬತ್ತನೇ ಸ್ಥಾನದಲ್ಲಿ ಕುಮಾರ್ ಬಿರ್ಲಾ (17.5 ಬಿಲಿಯನ್ ಡಾಲರ್) ಮತ್ತು 10ನೇ ಸ್ಥಾನದಲ್ಲಿ ಶಪೂರ್ ಮಿಸ್ತ್ರಿ ಮತ್ತು ಕುಟುಂಬ (16.9 ಬಿಲಿಯನ್ ಡಾಲರ್) ಇದೆ.