“ನನ್ನ ಕಣ್ಣುಗಳು ತುಂಬಿ ಬಂದವು”: ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ ಸ್ಮೃತಿ ಮಂದಾನ ಭಾವುಕ ಮಾತು
ಹ್ಯಾಂಗ್ ಝೌ: ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಚಿನ್ನದ ಪದಕ ಜಯಿಸಿದ ಬಗ್ಗೆ ತೀರಾ ರೋಮಾಂಚಿತರಾಗಿದ್ದ ಆಟಗಾರ್ತಿ ಸ್ಮೃತಿ ಮಂದಾನ, “ರಾಷ್ಟ್ರಗೀತೆ ಹಾಡುವಾಗ ನನ್ನ ಕಣ್ಣುಗಳಲ್ಲಿ ನೀರು ತುಂಬಿತ್ತು” ಎಂದು ಭಾವುಕವಾಗಿ ಹೇಳಿಕೊಂಡಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ಮೃತಿ ಮಂದಾನ, “ಇದು ನನಗೆ ತುಂಬಾ ವಿಶೇಷ ಕ್ಷಣವಾಗಿದ್ದು, ವಿವಿಧ ಪಂದ್ಯಾವಳಿಗಳ ಏಶ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡದ ಪದಕದ ಮೊತ್ತವು ಹೆಚ್ಚಲು ನಾನೂ ಕಾಣಿಕೆ ನೀಡಿರುವುದಕ್ಕೆ ತುಂಬಾ ಸಂತೋಷವಾಗಿದೆ. ಇದು ನಿಜಕ್ಕೂ ತುಂಬಾ ವಿಶೇಷವಾಗಿದೆ. ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಾಗ ನಾವು ಪಂದ್ಯವಾಡುತ್ತಿದ್ದೆವು. ಪಂದ್ಯದ ಗೆಲುವಿನ ನಂತರ ರಾಷ್ಟ್ರಗೀತೆ ಹಾಡುವಾಗ ರಾಷ್ಟ್ರ ಧ್ವಜವು ಮೇಲೇರಿದಾಗ ತುಂಬಾ ವಿಶೇಷವೆನಿಸಿತು ಹಾಗೂ ನನ್ನ ಕಣ್ಣಾಲಿಗಳು ತುಂಬಿ ಬಂದಿದ್ದವು. ಭಾರತದ ಪದಕ ಮೊತ್ತಕ್ಕೆ ನಾವೂ ಕೂಡಾ ಕಾಣಿಕೆ ನೀಡಿರುವುದರಿಂದ ತುಂಬಾ ಖುಷಿಯಾಗಿದೆ. ಚಿನ್ನವೆಂದೂ ಚಿನ್ನವೆ.. ಇಂದು ನಾವು ನಮ್ಮ ಅತ್ಯುತ್ತಮವನ್ನು ಪಡೆದಿರುವುದಕ್ಕೆ ತುಂಬಾ ಸಂತೋಷವಾಗಿದೆ” ಎಂದು ANI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
ಇದಕ್ಕೂ ಮುನ್ನ, ಇಂದು ಹ್ಯಾಂಗ್ ಝೌನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಭಾರತ ತಂಡವು 117 ರನ್ ಗಳ ಸಾಧಾರಣ ಗುರಿಯನ್ನು ನೀಡಿತ್ತು. ಆದರೆ, ಈ ಗುರಿಯನ್ನು ಟೈಟಸ್ ಸಂಧು ಅವರ ವೇಗದ ಬೌಲಿಂಗ್ ಹಾಗೂ ದೀಪ್ತಿ ಶರ್ಮ ಹಾಗೂ ದೇವಿಕಾ ವೈದ್ಯ ಅವರ ಅಮೋಘ ಬೌಲಿಂಗ್ ನೆರವಿನಿಂದ ಕಾಪಾಡಿಕೊಳ್ಳುವಲ್ಲಿ ಭಾರತ ತಂಡವು ಯಶಸ್ವಿಯಾಯಿತು. ಅಂತಿಮವಾಗಿ, ಭಾರತ ತಂಡವು ಶ್ರೀಲಂಕಾ ತಂಡವನ್ನು 19 ರನ್ ಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತು.