ಗಣರಾಜ್ಯೋತ್ಸವ ಪರೇಡ್ ನಲ್ಲಿ ಆತ್ಮನಿರ್ಭರ, ನಾರಿ ಶಕ್ತಿಯನ್ನು ಪ್ರಸ್ತುತ ಪಡಿಸಲಿರುವ ನೌಕಾಪಡೆ
ಹೊಸದಿಲ್ಲಿ: ಕೆಂಪು ಸಮುದ್ರದಲ್ಲಿ ಉಲ್ಬಣಿಸುತ್ತಿರುವ ಪ್ರಕ್ಷುಬ್ಧತೆ ಕುರಿತು ಜಾಗತಿಕ ಕಳವಳ ವ್ಯಕ್ತವಾಗುತ್ತಿರುವ ಬೆನ್ನಿಗೇ, ಭಾರತೀಯ ನೌಕಾಪಡೆಯು ತನ್ನ ಸಾಗರ ವ್ಯಾಪ್ತಿಯಲ್ಲಿ ದೇಶದ ವ್ಯೂಹಾತ್ಮಕ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿನ ಸೇನಾ ಪಾರಮ್ಯ ಹಾಗೂ ದೃಢ ನಿರ್ಧಾರವನ್ನು ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪ್ರಸ್ತುತ ಪಡಿಸಲಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಜನವರಿ 26ರಂದು ಕರ್ತವ್ಯ ಪಥದಲ್ಲಿ ನಡೆಯಲಿರುವ ಪರೇಡ್ ನಲ್ಲಿ ಮಹಿಳೆಯರಿಗೆ ಎಲ್ಲ ಪಾತ್ರಗಳು ಹಾಗೂ ಶ್ರೇಯಾಂಕಗಳಲ್ಲಿ ಹೆಚ್ಚಿನ ಅವಕಾಶ ನೀಡುವ ದೃಷ್ಟಿಕೋನದೊಂದಿಗೆ ಮಹಿಳಾ ಶಕ್ತಿಯೆಡೆಗಿನ ತನ್ನ ಬದ್ಧತೆಯ ಕುರಿತ ಸ್ತಬ್ಧ ಚಿತ್ರವನ್ನೂ ನೌಕಾಪಡೆಯು ಪ್ರದರ್ಶಿಸಲಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ನೌಕಾಪಡೆಯ ತಂಡವು ಲೆಫ್ಟಿನೆಂಟ್ ಮುದಿತ ಗೋಯಲ್, ಲೆಫ್ಟಿನೆಂಟ್ ಶ್ರಾವಣಿ ಸುಪ್ರಿಯ ಹಾಗೂ ಲೆಫ್ಟಿನೆಂಟ್ ದೇವಿಕಾ ಎಚ್ ಅವರನ್ನೊಳಗೊಂಡ ಮೂವರು ತುಕಡಿ ಕಮಾಂಡರ್ ಗಳನ್ನು ಹೊಂದಿರಲಿದೆ.
ಇದೇ ಪ್ರಥಮ ಬಾರಿಗೆ ಚಾರಿತ್ರಿಕ ಕರ್ತವ್ಯ ಪಥದಲ್ಲಿ ಲಿಂಗ ತಾಟಸ್ಥ್ಯದ ಕುರಿತು ತನ್ನ ಬದ್ಧತೆಯನ್ನು ಪ್ರತಿಫಲಿಸುವ ನೌಕಾಪಡೆಯ 144 ಪುರುಷ ಮತ್ತು ಮಹಿಳೆಯರ ಸಮ್ಮಿಶ್ರ ತಂಡವು ಪಥ ಸಂಚಲನ ನಡೆಸಲಿದೆ.
ನೌಕಾಪಡೆಯ ಸ್ತಬ್ಧ ಚಿತ್ರವು ವಿಮಾನ ವಾಹಕ ಐಎನ್ಎಸ್ ವಿಕ್ರಾಂತ್, ಅದರ ಅತ್ಯುತ್ತಮ ಸಾಮರ್ಥ್ಯದ ದಿಲ್ಲಿ, ಕೋಲ್ಕತ್ತಾ, ಶಿವಾಲಿಕ್ ಬೆಂಗಾವಲು ಹಡಗುಗಳು ಹಾಗೂ ಕಲವರಿ ದರ್ಜೆಯ ಜಲಾಂತರ್ಗಾಮಿ ನೌಕೆಯೊಂದಿಗೆ ಹಗುರ ಯುದ್ಧ ವಿಮಾನಗಳು ಮತ್ತು ಸುಧಾರಿತ ಲಘು ಹೆಲಿಕಾಪ್ಟರ್ ಗಳನ್ನೊಳಗೊಂಡ ಸ್ವದೇಶಿ ನೌಕಾ ಯುದ್ಧ ಸಮೂಹದ ಪ್ರತಿಕೃತಿಯನ್ನು ಹೊಂದಿರಲಿದೆ.
ಇದರೊಂದಿಗೆ ಮಲ್ಟಿ ಬ್ಯಾಂಡ್ ಸೇನಾ ಸಂಪರ್ಕ ಉಪಗ್ರಹ ಜಿಸ್ಯಾಟ್-7 ಹಾಗೂ ರುಕ್ಮಣಿ ಉಪಗ್ರಹದ ಪ್ರತಿಕೃತಿಯನ್ನೂ ಈ ಸ್ತಬ್ಧಚಿತ್ರ ಒಳಗೊಂಡಿರಲಿದೆ.