ಮುಸ್ಲಿಂ ಕೋಟಾ: ಕರ್ನಾಟಕ ಮುಖ್ಯ ಕಾರ್ಯದರ್ಶಿಗೆ ಸಮನ್ಸ್

Update: 2024-04-26 05:08 GMT

ಹೊಸದಿಲ್ಲಿ: ಕರ್ನಾಟಕದಲ್ಲಿ ಯಾವ ಆಧಾರದಲ್ಲಿ ಇಡೀ ಮುಸ್ಲಿಂ ಸಮುದಾಯವನ್ನು ಒಬಿಸಿ ವರ್ಗದಲ್ಲಿ ಸೇರಿಸಲಾಗಿದೆ ಎನ್ನುವ ಬಗ್ಗೆ ವಿವರಣೆ ನೀಡಲು ಹಾಜರಾಗುವಂತೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹಂಸರಾಜ್ ಅಹೀರ್, ಕರ್ನಾಟಕ ಮುಖ್ಯ ಕಾರ್ಯದರ್ಶಿಯವರಿಗೆ ಸಮನ್ಸ್ ನೀಡಿದ್ದಾರೆ. 

ಕಾಂಗ್ರೆಸ್ ಪಕ್ಷ ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಸಿದು ತಮ್ಮ ವೋಟ್ ಬ್ಯಾಂಕ್‍ಗಳಿಗೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಪಾದಿಸಿದ್ದಾರೆ. 

"ಇದು ಭಾರತದ ಇಸ್ಲಾಮೀಕರಣದ ಹತಾಶ ಪ್ರಯತ್ನ ಮತ್ತು ದೇಶವನ್ನು ವಿಭಜನೆಗೆ ತಳ್ಳುವ ಪ್ರಯತ್ನ. ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಕೂಡಾ ಇಂಥ ಪ್ರಯತ್ನ ನಡೆದಿತ್ತು. ಇದಕ್ಕೆ ಬಿಜೆಪಿ ತೀವ್ರ ಪ್ರತಿಭಟನೆ ನಡೆಸಿತ್ತು. ಆದ್ದರಿಂದ ನ್ಯಾಯಮೂರ್ತಿ ವರ್ಮಾ ಸಮಿತಿ ವರದಿಯಾಗಲೀ ಅಥವಾ ಸಾಚಾರ್ ಸಮಿತಿ ವರದಿಯಾಗಳಿ, ಇದು ಇತರ ಹಿಂದುಳಿದ ವರ್ಗಗಳ, ಎಸ್ಸಿ,ಎಸ್ಟಿ ಮೀಸಲಾತಿಯನ್ನು ಲೂಟಿ ಮಾಡುವ ಕಾಂಗ್ರೆಸ್ ಪ್ರಯತ್ನ ಎಂದು ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಆಪಾದಿಸಿದ್ದಾರೆ.

ಎನ್‍ಸಿಬಿಸಿ ಅಧ್ಯಕ್ಷರು ಕರ್ನಾಟಕ ಮುಖ್ಯ ಕಾರ್ಯದರ್ಶಿಯವರಿಗೆ ಸಮನ್ಸ್ ನೀಡಿದ್ದು, ಮುಸ್ಲಿಂ ಸಮುದಾಯವನ್ನು ಯಾವ ಆಧಾರದಲ್ಲಿ ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗ ಎಂದು ಪರಿಗಣಿಸಿ ಶೇಕಡ 4ರ ಮೀಸಲಾತಿಯನ್ನು 2ಬಿ ವರ್ಗದ ಅಡಿಯಲ್ಲಿ ನೀಡಲಾಗಿದೆ ಎಂಬ ಬಗ್ಗೆ ವಿವರವಾದ ವರದಿ ನೀಡಬೇಕು ಎಂದು ಸೂಚಿಸಿದ್ದಾರೆ. ರಾಜ್ಯ ಸರ್ಕಾರ 17 ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಂ ಪಂಗಡಗಳಿಗೆ ವರ್ಗ 1ರ ಅಡಿಯಲ್ಲಿ ಮತ್ತು 19 ವರ್ಗಗಳನ್ನು 2ಎ ಅಡಿಯಲ್ಲಿ ಮೀಸಲಾತಿ ನೀಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News