‘ಮೇಡ್ ಇನ್ ಇಂಡಿಯಾ’ ವಿಷಯಗಳನ್ನು ಹೊಂದಿರುವ 6ನೇ ತರಗತಿಯ ನೂತನ ಎನ್‌ಸಿಇಆರ್‌ಟಿ ಇಂಗ್ಲಿಷ್ ಪಠ್ಯಪುಸ್ತಕ

Update: 2024-07-04 13:07 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿಗೆ(ಎನ್‌ಸಿಎಫ್) ಅನುಗುಣವಾಗಿ ಎನ್‌ಸಿಇಆರ್‌ಟಿ ರೂಪಿಸಿರುವ ‘ಪೂರ್ವಿ’ಶೀರ್ಷಿಕೆಯ ಆರನೇ ತರಗತಿಯ ನೂತನ ಇಂಗ್ಲಿಷ್ ಪಠ್ಯಪುಸ್ತಕವು ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಪ್ರಾಚೀನ ಜ್ಞಾನದೊಂದಿಗೆ ಭಾರತೀಯತೆಯನ್ನು ಮೈಗೂಡಿಸಿಕೊಂಡಿರುವ ಹೆಚ್ಚಿನ ಅಧ್ಯಾಯಗಳೊಂದಿಗೆ ಪರಿಷ್ಕೃತ ವಿಷಯಗಳನ್ನು ಒಳಗೊಂಡಿದೆ.

ಹಳೆಯ ಪುಸ್ತಕವು ಉದಾಹರಣೆಗೆ ‘ಪ್ಯಾಟ್ರಿಕ್’, ‘ಮಿಸೆಸ್ ಬೀಮ್’ ನಂತಹ ಭಾರತೀಯೇತರ ಪಾತ್ರಗಳಿದ್ದ ಭಾರತೀಯರಲ್ಲದ ಲೇಖಕರ ಕಥೆಗಳನ್ನು ಹೊಂದಿದ್ದರೆ ಹೊಸ ಪಠ್ಯಪುಸ್ತಕವು ಭಾರತೀಯೇತರ ಲೇಖಕರ ಐದು ಪದ್ಯಗಳನ್ನು ಹೊರತುಪಡಿಸಿ ಹೆಚ್ಚಿನ ವಿಷಯಗಳನ್ನು ಭಾರತೀಯ ಪಾತ್ರಗಳೊಂದಿಗೆ ಭಾರತೀಯ ಹಿನ್ನೆಲೆಯಲ್ಲಿ ಹೊಂದಿದೆ. ಇವುಗಳಲ್ಲಿ ಒಂಭತ್ತು ಗದ್ಯ ತುಣುಕುಗಳು ಒಳಗೊಂಡಿವೆ.

ಇದಕ್ಕೆ ವ್ಯತಿರಿಕ್ತವಾಗಿ ಹಳೆಯ ಪುಸ್ತಕವು ಎಂಟು ಪದ್ಯಗಳನ್ನು ಮತ್ತು ಎಂಟು ಗದ್ಯ ತುಣುಕುಗಳನ್ನು ಹೊಂದಿದ್ದು,ಈ ಪೈಕಿ ಅನುಕ್ರಮವಾಗಿ ಏಳು ಮತ್ತು ಐದು ಭಾರತೀಯೇತರ ಲೇಖಕರದಾಗಿದ್ದವು ಮತ್ತು ವಿದೇಶಿ ಹಿನ್ನೆಲೆಯನ್ನು ಹೊಂದಿದ್ದವು.

ಇದು ಮೇಲ್ನೋಟಕ್ಕೆ ‘ಭಾರತೀಯ ಮತ್ತು ಸ್ಥಳೀಯ ಸನ್ನಿವೇಶ ಮತ್ತು ನೀತಿಗಳಲ್ಲಿ ಬೇರೂರಿರುವ’ಪಠ್ಯಕ್ರಮವನ್ನು ಪ್ರತಿಪಾದಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ಕ್ಕೆ ಅನುಗುಣವಾಗಿದೆ. ವಿದೇಶಿ ಲೇಖಕರ ಗದ್ಯದ ಬದಲಿಗೆ ಸುಧಾ ಮೂರ್ತಿ ಮತ್ತು ಎಸ್.ಐ.ಫಾರೂಕಿ ಅವರ ಗದ್ಯಗಳನ್ನು ಸೇರಿಸಲಾಗಿದೆ. ಯೋಗ ಮತ್ತು ಅದರ ಪ್ರಯೋಜನಗಳ ಕುರಿತು ಮೂರು ಪುಟಗಳ ವಿಭಾಗದೊಂದಿಗೆ ‘ಆರೋಗ್ಯ ಮತ್ತು ಸ್ವಾಸ್ಥ್ಯ’ ಕುರಿತು ನೂತನ ಅಧ್ಯಾಯವನ್ನೂ ಪುಸ್ತಕವು ಒಳಗೊಂಡಿದೆ.

ಅಲ್ಲದೆ ‘ಸಂಸ್ಕೃತಿ ಮತ್ತು ಸಂಪ್ರದಾಯ’ ಶೀರ್ಷಿಕೆಯ ಅಧ್ಯಾಯದಲ್ಲಿ ಮೊದಲ ಬಾರಿಗೆ ‘ಇಂಡಿಯಾ’ ಬದಲಿಗೆ ‘ಭಾರತ’ ಪದವನ್ನು ಬಳಸಲಾಗಿದೆ. ಈ ಅಧ್ಯಾಯದಲ್ಲಿ ‘ಭಾರತ ’ ಪದವನ್ನು 19 ಮತ್ತು ‘ಇಂಡಿಯಾ’ಪದವನ್ನು ಏಳು ಸಲ ಉಲ್ಲೇಖಿಸಲಾಗಿದೆ.

‘ನರ್ಚರಿಂಗ್ ನೇಚರ್’ ಅಧ್ಯಾಯದಲ್ಲಿ ನಿಸರ್ಗ ಚಿಕಿತ್ಸೆಗಳು ಮತ್ತು ಸಂಬಾರ ಪದಾರ್ಥಗಳ ಪ್ರಯೋಜನಗಳನ್ನು ವಿವರಿಸಲಾಗಿದೆ.

ಈ ಬದಲಾವಣೆಗಳ ಕುರಿತು ಸುದ್ದಿಸಂಸ್ಥೆಯ ಪ್ರಶ್ನೆಗೆ ಉತ್ತರಿಸಿದ ಎನ್‌ಸಿಇಆರ್‌ಟಿ ವಕ್ತಾರರು,ಎನ್‌ಸಿಎಫ್ 2023 ಮತ್ತು ಎನ್‌ಇಪಿ 2020,ಕಲಿಕೆಯನ್ನು ವಿದ್ಯಾರ್ಥಿಗಳ ಸುತ್ತಲಿನ ಪರಿಸರಕ್ಕೆ ತಳುಕು ಹಾಕಲು ಒತ್ತು ನೀಡಿವೆ,ಇದರಿಂದ ವಿದ್ಯಾರ್ಥಿಗಳು ತಾವು ಓದಿದ್ದಕ್ಕೂ ತಮ್ಮ ಪರಿಸರಕ್ಕೂ ಸಂಬಂಧವನ್ನು ಕಲ್ಪಿಸಬಹುದು ಎಂದು ಹೇಳಿದರು.

ಹಳೆಯ ಎನ್‌ಸಿಇಆರ್‌ಟಿ ಇಂಗ್ಲಿಷ್ ಪಠ್ಯಪುಸ್ತಕ ‘ಹನಿಸಕಲ್’ ಎಂಟು ಅಧ್ಯಾಯಗಳನ್ನು ಒಳಗೊಂಡಿದ್ದು, ಹೆಚ್ಚಿನವು ಪಾಶ್ಚಾತ್ಯ ಲೇಖಕರ ಕಥೆಗಳಾಗಿದ್ದವು. ಮುನ್ಶಿ ಪ್ರೇಮಚಂದ್ ಮತ್ತು ರಸ್ಕಿನ್ ಬಾಂಡ್ ಅವರ ಕಥೆಗಳೂ ಅದರಲ್ಲಿದ್ದವು.

ಎನ್‌ಸಿಇಆರ್‌ಟಿ ಆರಂಭದಲ್ಲಿ ಮೂರು ಮತ್ತು ಆರನೇ ತರಗತಿಗಳಿಗಾಗಿ ಮಾತ್ರ ಎನ್‌ಸಿಎಫ್ 2023 ಆಧಾರಿತ ನೂತನ ಪಠ್ಯಪುಸ್ತಕಗಳನ್ನು ಈ ವರ್ಷ ಬಿಡುಗಡೆಗೊಳಿಸಲು ಉದ್ದೇಶಿಸಿತ್ತು. 3ನೇ ತರಗತಿಯ ಪಠ್ಯಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೆ 6ನೇ ತರಗತಿಯ ಪಠ್ಯಪುಸ್ತಕಗಳು ವಿಳಂಬಗೊಂಡಿವೆ.

ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯ ಕುಲಾಧಿಪತಿ ಎಂ.ಸಿ.ಪಂತ್ ನೇತೃತ್ವದ 19 ಸದಸ್ಯರ ಸಮಿತಿಯ ಮೇಲ್ವಿಚಾರಣೆಯಡಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ರೂಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News