ಮತೀಯ ದ್ವೇಷ ಹರಡುವ ಕಾರ್ಯಕ್ರಮ ಪ್ರಸಾರ ಮಾಡಿದ ʼಟೈಮ್ಸ್‌ ನೌʼ, ʼನ್ಯೂಸ್‌ 18ʼಗೆ ದಂಡ, ಆಜ್‌ತಕ್‌ಗೆ ಎಚ್ಚರಿಕೆ ನೀಡಿದ ಎನ್‌ಬಿಡಿಎಸ್‌ಎ

Update: 2024-03-01 11:25 IST
ಮತೀಯ ದ್ವೇಷ ಹರಡುವ ಕಾರ್ಯಕ್ರಮ ಪ್ರಸಾರ ಮಾಡಿದ ʼಟೈಮ್ಸ್‌ ನೌʼ, ʼನ್ಯೂಸ್‌ 18ʼಗೆ ದಂಡ, ಆಜ್‌ತಕ್‌ಗೆ ಎಚ್ಚರಿಕೆ ನೀಡಿದ ಎನ್‌ಬಿಡಿಎಸ್‌ಎ

ಹಿಮಾಂಶು ದೀಕ್ಷಿತ್‌,ಸುಧೀರ್‌ ಚೌಧರಿ,ಅಮನ್‌ ಚೋಪ್ರಾ,ಅಮೀಶ್‌ ದೇವಗನ್‌ (Photo credit: thewire.in)

  • whatsapp icon

ಹೊಸದಿಲ್ಲಿ: ಹಗೆತನ ಮತ್ತು ಕೋಮು ದ್ವೇಷ ಹರಡುವ ಶೋಗಳನ್ನು ತೆಗೆದುಹಾಕುವಂತೆ ನ್ಯೂಸ್‌ ಬ್ರಾಡ್‌ಕಾಸ್ಟಿಂಗ್‌ ಎಂಡ್‌ ಡಿಜಿಟಲ್‌ ಸ್ಟಾಂಡರ್ಡ್ಸ್‌ ಅಥಾರಿಟಿ (ಎನ್‌ಬಿಡಿಎಸ್‌ಎ) ಹಲವು ಟಿವಿ ವಾಹಿನಿಗಳಿಗೆ ಸೂಚನೆ ನೀಡಿದೆ. ಈ ಪ್ರಾಧಿಕಾರದ ಅಧ್ಯಕ್ಷತೆಯನ್ನು ಪ್ರಸ್ತುತ ನಿವೃತ್ತ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಎ.ಕೆ. ಸಿಕ್ರಿ ವಹಿಸಿದ್ದಾರೆ.

ʼಟೈಮ್ಸ್‌ ನೌ ನವಭಾರತ್‌ʼ ಹಾಗೂ ʼನ್ಯೂಸ್‌ 18ʼ ಇಂಡಿಯಾಗೆ ಕ್ರಮವಾಗಿ ರೂ. 1 ಲಕ್ಷ ಮತ್ತು ರೂ. 50,000 ದಂಡ ವಿಧಿಸಲಾಗಿದೆ ಹಾಗೂ ಆಜ್‌ ತಕ್‌ಗೆ ಎಚ್ಚರಿಕೆ ನೀಡಲಾಗಿದೆ.

ಎಲ್ಲಾ ಮೂರು ವಾಹಿನಿಗಳಿಗೆ ಮತೀಯ ದ್ವೇಷ ಹರಡುವಂತಹ ನಿರ್ದಿಷ್ಟ ಕಾರ್ಯಕ್ರಮಗಳ ಆನ್‌ಲೈನ್‌ ಆವೃತ್ತಿಗಳನ್ನು ತೆಗೆದುಹಾಕುವಂತೆ ಆದೇಶಿಸಲಾಗಿದೆ.

ಸಾಮಾಜಿಕ ಹೋರಾಟಗಾರ ಇಂದ್ರಜಿತ್‌ ಘೋರ್ಪಡೆ ಅವರು ದಾಖಲಿಸಿದ ದೂರುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಟೈಮ್ಸ್‌ ಗ್ರೂಪ್‌ನ ಭಾಗವಾಗಿರುವ ಟೈಮ್ಸ್‌ ನೌ ನವಭಾರತ್‌ ಕಾರ್ಯಕ್ರಮದಲ್ಲಿ ನಿರೂಪಕ ಹಿಮಾಂಶು ದೀಕ್ಷಿತ್‌ ಅವರು ಮುಸ್ಲಿಂ ಸಮುದಾಯವನ್ನು ಗುರಿ ಮಾಡಿದ್ದೇ ಅಲ್ಲದೆ ಅಂತರ-ಧರ್ಮೀಯ ವಿವಾಹಗಳನ್ನು ʼಲವ್‌ ಜಿಹಾದ್‌ʼ ಎಂದು ಬಣ್ಣಿಸಿದ್ದರು.

ಇನ್ನೊಂದೆಡೆ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಒಡೆತನದ ನ್ಯೂಸ್‌18 ಇಂಡಿಯಾಗೆ ಕನಿಷ್ಠ ಮೂರು ಶೋಗಳಿಗೆ ದಂಡ ವಿಧಿಸಲಾಗಿದೆ. ಇವುಗಳ ಪೈಕಿ ಎರಡು ಶೋಗಳ ನಿರೂಪಕ ಅಮನ್‌ ಚೋಪ್ರಾ ಆಗಿದ್ದರೆ ಇನ್ನೊಂದು ಶೋದ ನಿರೂಪಕ ಅಮೀಶ್‌ ದೇವಗನ್‌ ಆಗಿದ್ದರು. ಈ ಶೋಗಳು ಶ್ರದ್ಧಾ ವಾಕರ್‌ ಕೊಲೆ ಪ್ರಕರಣವನ್ನು ʼಲವ್‌ ಜಿಹಾದ್‌ʼ ಎಂದು ಬಣ್ಣಿಸಿ ಅದಕ್ಕೆ ಮತೀಯ ಬಣ್ಣ ನೀಡಿದ್ದವು ಎಂದು ಆರೋಪಿಸಲಾಗಿತ್ತು.

ʼಇಂಡಿಯಾ ಟುಡೆʼ ಸಮೂಹದ ʼಆಜ್‌ ತಕ್‌ʼನಲ್ಲಿ ಸುಧೀರ್‌ ಚೌಧರಿ ಅವರು ನಿರೂಪಕರಾಗಿದ್ದ ಆಗಿದ್ದ ಕಾರ್ಯಕ್ರಮದಲ್ಲಿ ರಾಮ ನವಮಿ ಸಂದರ್ಭದ ಹಿಂಸಾಚಾರ ಕುರಿತಂತೆ ಒಂದು ನಿರ್ದಿಷ್ಟ ಸಮುದಾಯವನ್ನು ದೂಷಿಸಲಾಗಿತ್ತು.

ಕಾರ್ಯಕ್ರಮ ಪ್ರಸಾರ ಮಾಡುವಾಗ ನಿಷ್ಪಕ್ಷಪಾತತನ, ತಟಸ್ಥ ನಿಲುವು ಹಾಗು ನಿಖರತೆಯನ್ನು ಕಾಪಾಡಬೇಕೆಂಬ ನೀತಿ ಸಂಹಿತ ಮತ್ತು ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದರು.

ʼಲವ್‌ ಜಿಹಾದ್‌ʼ ಎಂಬ ಪದವನ್ನು ಗಂಭೀರ ಅವಲೋಕನದ ನಂತರ ಬಳಸಬೇಕು ಇಲ್ಲದೇ ಹೋದಲ್ಲಿ ಅದು ದೇಶದ ಜಾತ್ಯತೀತ ಪರಿಕಲ್ಪನೆಗೆ ಮಾರಕವಾಗಬಹುದು ಎಂದು ಎನ್‌ಬಿಡಿಎಸ್‌ಎ ಹೇಳಿದೆ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News