ನ್ಯೂಸ್ ಕ್ಲಿಕ್ ಪ್ರಕರಣ ; ಎಫ್ಐಆರ್ ಪ್ರತಿಗಾಗಿ ಪುರಕಾಯಸ್ಥ ಮನವಿಗೆ ಪೋಲಿಸರ ವಿರೋಧ
ಹೊಸದಿಲ್ಲಿ: ಸುದ್ದಿ ಜಾಲತಾಣ ನ್ಯೂಸ್ ಕ್ಲಿಕ್ ಪ್ರಧಾನ ಸಂಪಾದಕ ಪ್ರಬೀರ ಪುರಕಾಯಸ್ಥ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಎಫ್ಐಆರ್ ಪ್ರತಿಗಳನ್ನು ಕೋರಿ ಇಲ್ಲಿಯ ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿಗಳನ್ನು ದಿಲ್ಲಿ ಪೊಲೀಸರು ಗುರುವಾರ ವಿರೋಧಿಸಿದರು.
ಚೀನಾದಿಂದ ದೇಣಿಗೆಗಳನ್ನು ಸ್ವೀಕರಿಸಿದ್ದ ಆರೋಪದಲ್ಲಿ ಪುರಕಾಯಸ್ಥ ಮತ್ತು ಚಕ್ರವರ್ತಿ ಅವರನ್ನು ದಿಲ್ಲಿ ಪೊಲೀಸ್ ವಿಶೇಷ ಘಟಕವು ಮಂಗಳವಾರ ಬಂಧಿಸಿತ್ತು.
ಗುರುವಾರದ ವಿಚಾರಣೆ ಸಂದರ್ಭ ವಿಶೇಷ ಸರಕಾರಿ ಅಭಿಯೋಜಕ ಅತುಲ್ ಶ್ರೀವಾಸ್ತವ ಅವರು,ಆರೋಪಿಗಳು ಸರ್ವೋಚ್ಚ ನ್ಯಾಯಾಲಯವು ಸೂಚಿಸಿರುವಂತೆ ಕಾರ್ಯವಿಧಾನವನ್ನು ಹಂತ ಹಂತವಾಗಿ ಅನುಸರಿಸಬೇಕು ಎಂದು ನ್ಯಾಯಾಲಯಕ್ಕೆ ನಿವೇದಿಸಿದರು.
ಅರ್ಜಿದಾರರು ಮೊದಲು ಪೊಲೀಸ್ ಆಯುಕ್ತರ ಕಚೇರಿಯನ್ನು ಸಂಪರ್ಕಿಸಬೇಕು ಮತ್ತು ಅದು ದೂರನ್ನು ಪುನರ್ಪರಿಶೀಲಿಸಲು ಸಮಿತಿಯೊಂದನ್ನು ರಚಿಸುತ್ತದೆ. ಆಗಲೂ ಎಫ್ಐಆರ್ ಪ್ರತಿ ಲಭ್ಯವಾಗದಿದ್ದರೆ ಅರ್ಜಿದಾರರು ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ಬಂಧಿತರ ಅರ್ಜಿಯನ್ನು ‘ಅಕಾಲಿಕ’ ಎಂದು ಬಣ್ಣಿಸಿದ ಶ್ರೀವಾಸ್ತವ,‘ಏಕೆಂದರೆ ಪೋಲಿಸರು ಈಗಾಗಲೇ ಬಂಧನಕ್ಕೆ ಮತ್ತು ಹೆಚ್ಚಿನ ಕಸ್ಟಡಿಗೆ ಕಾರಣಗಳನ್ನು ಒದಗಿಸಿದ್ದಾರೆ. ನಾವು ನಿಬಂಧನೆಗಳನ್ನು ಈಗಾಗಲೇ ಅನುಸರಿಸಿದ್ದೇವೆ ’ಎಂದು ವಾದಿಸಿದರು.
ಎಫ್ಐಆರ್ ಪ್ರತಿಯನ್ನು ಪಡೆಯುವುದು ತನ್ನ ಕಕ್ಷಿದಾರರ ಹಕ್ಕು ಆಗಿದೆ ಎಂದು ಹೇಳಿದ ಪುರಕಾಯಸ್ಥ ಪರ ವಕೀಲ ಅರ್ಷದೀಪ ಸಿಂಗ್,‘ವಿಷಯವು ಸೂಕ್ಷ್ಮವಾಗಿದೆ ಎಂದು ಪೊಲೀಸರು ಹೇಳಿದರೂ ಎಫ್ಐಆರ್ ಪ್ರತಿಯನ್ನು ಒದಗಿಸಲು ಯಾವುದೇ ನಿಷೇಧವಿಲ್ಲ. ಎಫ್ಐಆರ್ ನ್ಯಾಯಾಲಯದ ಮುಂದಿದೆ ಮತ್ತು ಅದನ್ನು ನನ್ನ ಕಕ್ಷಿದಾರರಿಗೆ ಒದಗಿಸಲು ನಿರ್ಬಂಧವಿಲ್ಲ. ನನ್ನ ಕಕ್ಷಿದಾರರ ಕಾನೂನು ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ’ಎಂದು ವಾದಿಸಿದರು.
ಸರ್ವೋಚ್ಚ ನ್ಯಾಯಾಲಯ ಮತ್ತು ದಿಲ್ಲಿ ಉಚ್ಚ ನ್ಯಾಯಾಲಯಗಳ ತೀರ್ಪುಗಳನ್ನು ಉಲ್ಲೇಖಿಸಿದ ಚಕ್ರವರ್ತಿ ಪರ ವಕೀಲರು,ಯುಎಪಿಎ ಅಡಿ ಆರೋಪಗಳು ಗಂಭೀರವಾಗಿದ್ದರೂ ಸಹ ಆರೋಪಿಗಳಿಗೆ ಎಫ್ಐಆರ್ ಪ್ರತಿಗಳನ್ನು ಒದಗಿಸದಿರಲು ಪ್ರಾಸಿಕ್ಯೂಷನ್ಗೆ ಯಾವುದೇ ಶಾಸನಬದ್ಧ ಕಾರಣವಿಲ್ಲ ಎಂದು ಪ್ರತಿಪಾದಿಸಿದರು.