ಎಫ್ಐಆರ್‌ ನಲ್ಲಿಯ ಆರೋಪಗಳಿಗೆ ನ್ಯೂಸ್ ಕ್ಲಿಕ್‌ ತಿರಸ್ಕಾರ

Update: 2023-10-07 15:56 GMT

ಹೊಸದಿಲ್ಲಿ : ದಿಲ್ಲಿ ಪೋಲಿಸರು ಎಫ್ಐಆರ್‌ ನಲ್ಲಿ ತನ್ನ ವಿರುದ್ಧ ಹೊರಿಸಿರುವ ಆರೋಪಗಳನ್ನು ತಿರಸ್ಕರಿಸಿರುವ ಸುದ್ದಿ ಜಾಲತಾಣ ನ್ಯೂಸ್ ಕ್ಲಿಕ್‌,ಅವು ಅಸಮರ್ಥನೀಯ ಮತ್ತು ಸುಳ್ಳು ಆರೋಪಗಳಾಗಿವೆ ಎಂದು ಹೇಳಿದೆ. ತನ್ನ ವಿರುದ್ಧದ ಕಾನೂನು ಕ್ರಮಗಳು ಭಾರತದಲ್ಲಿ ಮುಕ್ತ ಮತ್ತು ಸ್ವತಂತ್ರ ಪತ್ರಿಕಾ ರಂಗದ ಉಸಿರುಗಟ್ಟಿಸುವ ನಿರ್ಲಜ್ಜ ಪ್ರಯತ್ನವಾಗಿದೆ ಎಂದು ಅದು ಕಿಡಿಕಾರಿದೆ.

ಯುಎಪಿಎ ಅಡಿ ನ್ಯೂಸ್ ಕ್ಲಿಕ್‌ ವಿರುದ್ಧ ದಾಖಲಿಸಿರುವ ಎಫ್ಐಆರ್‌ ನಲ್ಲಿ ದಿಲ್ಲಿ ಪೊಲೀಸರು, ಭಾರತದ ಸಾರ್ವಭೌಮತೆಗೆ ಅಡ್ಡಿಯನ್ನುಂಟು ಮಾಡಲು ಮತ್ತು ಭಾರತದ ವಿರುದ್ಧ ಅಸಂತೋಷವನ್ನು ಹುಟ್ಟುಹಾಕಲು ವ್ಯಾಪಕ ಕ್ರಿಮಿನಲ್ ಸಂಚಿನ ಭಾಗವಾಗಿ ಚೀನಾದಿಂದ ದೊಡ್ಡ ಪ್ರಮಾಣದಲ್ಲಿ ಹಣವನ್ನು ಬಳಸು ಮಾರ್ಗದಿಂದ ಮತ್ತು ರಹಸ್ಯವಾಗಿ ರವಾನಿಸಲಾಗಿತ್ತು. ದೇಶಿಯ ನೀತಿಗಳು ಮತ್ತು ಭಾರತದ ಅಭಿವೃದ್ಧಿ ಯೋಜನೆಗಳನ್ನು ಟೀಕಿಸುವ ಹಾಗೂ ಚೀನಿ ಸರಕಾರದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಉತ್ತೇಜಿಸುವ, ಪ್ರವರ್ತಿಸುವ ಮತ್ತು ಸಮರ್ಥಿಸುವ ಪಾವತಿ ಸುದ್ದಿಗಳನ್ನು ಉದ್ದೇಶಪೂರ್ವಕವಾಗಿ ಪ್ರಚಾರ ಮಾಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾದ ಪ್ರಚಾರ ವಿಭಾಗದ ಸಕ್ರಿಯ ಸದಸ್ಯ ಹಾಗೂ ಅಮೆರಿಕದ ಬಿಲಿಯಾಧೀಶ ನೆವಿಲ್ಲೆ ರಾಯ್ ಸಿಂಘಂ ಅವರಿಂದ ಕಪಟ ಮಾರ್ಗದಿಂದ ವಿದೇಶಿ ನಿಧಿಗಳನ್ನು ಹರಿಸಲಾಗಿತ್ತು ಎಂದು ಎಫ್ಐಆರ್ ಪ್ರತಿಪಾದಿಸಿದೆ.

ಶುಕ್ರವಾರ ರಾತ್ರಿ ಘಿನಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ನ್ಯೂಸ್ ಕ್ಲಿಕ್‌, ಚೀನಾದಿಂದ ಅಥವಾ ಚೀನಿ ಸಂಸ್ಥೆಗಳಿಂದ ಯಾವುದೇ ಹಣ ಅಥವಾ ನಿರ್ದೇಶನವನ್ನು ತಾನು ಸ್ವೀಕರಿಸಿಲ್ಲ. ಅಲ್ಲದೆ ತಾನೆಂದೂ ಯಾವುದೇ ರೀತಿಯಲ್ಲಿ ಹಿಂಸಾಚಾರ, ಪ್ರತ್ಯೇಕತೆ ಅಥವಾ ಯಾವುದೇ ಕಾನೂನುಬಾಹಿರ ಕೃತಗಳನ್ನು ಉತ್ತೇಜಿಸುವ ಕೆಲಸವನ್ನು ಮಾಡಿಲ್ಲ ಎಂದು ತಿಳಿಸಿದೆ.

‘ಆನ್ ಲೈನ್ ನಲ್ಲಿ ಮುಕ್ತವಾಗಿ ಲಭ್ಯವಿರುವ ನ್ಯೂಸ್ ಕ್ಲಿಕ್ ನ ವರದಿಗಾರಿಕೆಯ ಅವಲೋಕನವು ನ್ಯೂಸ್ ಕ್ಲಿಕ್ ನ ಹೇಳಿಕೆಗಳ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಸಾಕು ’ ಎಂದೂ ಅದು ಹೇಳಿದೆ.

ತನಗೆ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯಿದೆ ಮತ್ತು ತನ್ನ ನಿಲುವು ಎತ್ತಿಹಿಡಿಯಲ್ಪಡುವ ವಿಶ್ವಾಸವಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ನ್ಯೂಸ್ ಕ್ಲಿಕ್ ಸ್ಥಾಪಕ ಹಾಗೂ ಪ್ರಧಾನ ಸಂಪಾದಕ ಪ್ರಬೀರ ಪುರಕಾಯಸ್ಥ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಸೋಮವಾರ ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.

ಎಫ್ಐಆರ್‌ ನಲ್ಲಿಯ ಆರೋಪಗಳು ಅಸಮರ್ಥನೀಯ ಮತ್ತು ಸುಳ್ಳು ಆಗಿರುವುದಲ್ಲದೆ,ಆಗಾಗ್ಗೆ ಈ ಆರೋಪಗಳನ್ನು ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಕಾನೂನು ಜಾರಿ ಸಂಸ್ಥೆಗಳು ತನಿಖೆಗಳನ್ನು ನಡೆಸಿದ್ದರೂ ಯಾವುದೇ ದೋಷಾರೋಪ ಪಟ್ಟಿ ಅಥವಾ ದೂರುಗಳನ್ನು ದಾಖಲಿಸಲು ಸಾಧ್ಯವಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿರುವ ನ್ಯೂಸ್ ಕ್ಲಿಕ್‌,ಈ ತನಿಖೆಗಳಲ್ಲಿ ಪುರಕಾಯಸ್ಥ ಅವರಿಗೆ ಮಧ್ಯಂತರ ರಕ್ಷಣೆಯನ್ನು ಮಂಜೂರು ಮಾಡಲಾಗಿತ್ತು. ಇದನ್ನು ಬುಡಮೇಲುಗೊಳಿಸುವ ಮತ್ತು ಯುಎಪಿಎ ಅಡಿ ಕಾನೂನು ಬಾಹಿರ ಬಂಧನಗಳನ್ನು ನಡೆಸುವ ಏಕೈಕ ಉದ್ದೇಶದಿಂದ ಇತ್ತೀಚಿನ ಎಫ್ಐ ಆರ್ ನ್ನು ದಾಖಲಿಸಲಾಗಿದೆ ಎಂದು ಹೇಳಿದೆ.

ಈ ನಡುವೆ ದಿಲ್ಲಿ ಪೋಲಿಸರು ಸೋಮವಾರ ನ್ಯೂಸ್ ಕ್ಲಿಕ್ ನ ಹಿರಿಯ ಪತ್ರಕರ್ತರು ಸೇರಿದಂತೆ ಎಫ್ಐಆರ್‌ ನಲ್ಲಿ ಹೆಸರಿಸಿರುವ 10 ಜನರನ್ನು ಪ್ರಶ್ನಿಸುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News