'ನ್ಯೂಸ್ ಕ್ಲಿಕ್'ನ ಪ್ರಬೀರ್ ಪುರಕಾಯಸ್ತ, ಅಮಿತ್ ಚಕ್ರವರ್ತಿ ಬಂಧನ, ರಿಮಾಂಡ್

Update: 2023-10-19 17:27 GMT

ಹೊಸದಿಲ್ಲಿ: ಯುಎಪಿಎ ಅಡಿ ತಮ್ಮ ಬಂಧನ ಹಾಗೂ ರಿಮಾಂಡ್ ಪ್ರಶ್ನಿಸಿ ‘ನ್ಯೂಸ್ ಕ್ಲಿಕ್’ ಸಂಸ್ಥಾಪಕ ಪ್ರಬೀರ್ ಪುರಕಾಯಸ್ತ ಹಾಗೂ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಪಿ.ಕೆ. ಮಿಶ್ರಾ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ನ ಪೀಠ ಗುರುವಾರ ದಿಲ್ಲಿ ಪೊಲೀಸರಿಗೆ ನೋಟಿಸು ಜಾರಿ ಮಾಡಿದೆ. ಈ ಪ್ರಕರಣದ ವಿಚಾರಣೆ ಅಕ್ಟೋಬರ್ 30ರಂದು ನಡೆಯಲಿದೆ. ಆರಂಭದಲ್ಲಿ ನ್ಯಾಯಾಲಯ ವಿಚಾರಣೆಗೆ ಮೂರು ವಾರಗಳ ಬಳಿಕ ದಿನಾಂಕ ನೀಡಿತ್ತು.

ಆದರೆ, ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ತಮ್ಮ ಕಕ್ಷಿದಾರರಾಗಿರುವ ಪುರಕಾಯಸ್ತರಿಗೆ 70 ವರ್ಷವಾಗಿದೆ ಹಾಗೂ ಈಗಾಗಲೇ ಅವರು ಹಲವು ದಿನಗಳಿಂದ ರಿಮಾಂಡ್ ನಲ್ಲಿ ಇದ್ದಾರೆ ಎಂದು ನ್ಯಾಯಾಲಯದ ಗಮನ ಸೆಳೆದರು. ಅಲ್ಲದೆ, ಪ್ರಕರಣವನ್ನು ದಸರಾ ರಜೆಯ ನಂತರ ತಕ್ಷಣ ವಿಚಾರಣೆಗೆ ಪಟ್ಟಿ ಮಾಡುವಂತೆ ಆಗ್ರಹಿಸಿದರು. ಚಕ್ರವರ್ತಿ ಅವರ ಪರವಾಗಿ ಹಿರಿಯ ವಕೀಲ ದೇವದತ್ತ್ ಕಾಮತ್ ಅವರು ಹಾಜರಾಗಿದ್ದರು. ಈ ಪ್ರಕರಣ ಆರಂಭದಲ್ಲಿ ಅಕ್ಟೋಬರ್ 18ರಂದು ನ್ಯಾಯಾಲಯದ ಮುಂದೆ ಬಂದಿತ್ತು. ಆದರೆ, ಪೀಠ ಪೊಲೀಸರಿಗೆ ನೋಟೀಸು ನೀಡಬೇಕಾಗಿದೆ ಎಂದು ಸೂಚಿಸಿ ವಿಚಾರಣೆಯನ್ನು ಒಂದು ದಿನ ಮುಂದೂಡಿತ್ತು.

ಯುಎಪಿಎ ಅಡಿಯಲ್ಲಿ ಪುರಕಾಯಸ್ತ ಹಾಗೂ ಚಕ್ರವರ್ತಿ ಅವರ ಬಂಧನ, ಬಳಿಕ ಪೊಲೀಸ್ ರಿಮಾಂಡ್ ನಲ್ಲಿ ಮಧ್ಯಪ್ರವೇಶಿಸಲು ದಿಲ್ಲಿ ಹೈಕೋರ್ಟ್‌ ನಿರಾಕರಿಸಿದ ಬಳಿಕ ಈ ಪ್ರಕರಣ ಸುಪ್ರೀಂ ಕೋರ್ಟ್ ನ ಮೆಟ್ಟಿಲೇರಿತ್ತು. ಆಗಸ್ಟ್ 17ರಂದು ದಾಖಲಾದ ಎಫ್ಐಆರ್ ಗೆ ಅನುಗುಣವಾಗಿ ದಿಲ್ಲಿ ಪೊಲೀಸ್ ವಿಶೇಷ ಘಟಕ ಅಕ್ಟೋಬರ್ 3ರಂದು ಪುರಕಾಯಸ್ತ ಹಾಗೂ ಚಕ್ರವರ್ತಿಯನ್ನು ಬಂಧಿಸಿತ್ತು. ಎಫ್ಐಆರ್ ನಲ್ಲಿ ದಿಲ್ಲಿ ಪೊಲೀಸರು ಪುರಕಾಯಸ್ತ, ಇನ್ನೊಂದು ಭಯೋತ್ಪಾದನಾ ಪ್ರಕರಣದಲ್ಲಿ ಗೃಹ ಬಂಧನದಲ್ಲಿ ಇರುವ ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಾಖಾ ಹಾಗೂ ಅಮೆರಿಕ ಮೂಲದ ಉದ್ಯಮಿ ನೆವಿಲ್ಲೆ ರಾಯ್ ಸಿಂಗಂ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News