ನ್ಯೂಸ್‌ಕ್ಲಿಕ್ ಸಂಪಾದಕ, ಎಚ್‌ಆರ್ ಮುಖ್ಯಸ್ಥನಿಗೆ ಡಿ.1ರವರೆಗೆ ನ್ಯಾಯಾಂಗ ಕಸ್ಟಡಿ

Update: 2023-11-02 14:54 GMT

ಸಂಪಾದಕ ಪ್ರಬೀರ್ ಪುರಕಾಯಸ್ಥ ( Photo- PTI)

ಹೊಸದಿಲ್ಲಿ: ಚೀನಾ ಪರವಾಗಿ ಪ್ರಚಾರ ಮಾಡಲು ‘ನ್ಯೂಸ್‌ಕ್ಲಿಕ್’ ಸುದ್ದಿಜಾಲತಾಣವು ಭಾರೀ ಮೊತ್ತದ ಹಣ ಪಡೆದಿದಿದೆಯೆಂಬ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ವೆಬ್‌ಸೈಟ್‌ನ ಸಂಪಾದಕ ಪ್ರಬೀರ್ ಪುರಕಾಯಸ್ಥ ಹಾಗೂ ಅದರ ಮಾನವಸಂಪನ್ಮೂಲ (ಎಚ್.ಆರ್.)ವಿಭಾಗದ ವರಿಷ್ಠ ಅಮಿತ್ ಚಕ್ರವರ್ತಿ ಅವರಿಗೆ ದಿಲ್ಲಿ ನ್ಯಾಯಾಲಯವು ಡಿಸೆಂಬರ್ 1ರವರೆಗೆ ನ್ಯಾಯಾಂಗ ಕಸ್ಟಡಿ ವಿಧಿಸಿದೆ.

ದಿಲ್ಲಿ ಪೊಲೀಸರ ಕಸ್ಟಡಿ ವಿಚಾರಣೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನೂ ವಿಶೇಷ ನ್ಯಾಯಾಧೀಶೆ ಹರದೀಪ್ ಕೌರ್ ಅವರು ಗುರುವಾರ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ್ದಾರೆ.

ದಿಲ್ಲಿ ಪೊಲೀಸರ ವಿಶೇಷ ದಳವು ಪುರಕಾಯಸ್ಥ ಹಾಗೂ ಚಕ್ರವರ್ತಿ ಅವರನ್ನು ಅಕ್ಟೋಬರ್ 3ರಂದು ಬಂಧಿಸಿತ್ತು.ಆಕ್ಟೋಬರ್ 10ರಂದು ಅವರನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿತ್ತು. ಆದರೆ ನ್ಯಾಯಾಲಯವು ಅಕ್ಟೋಬರ್ 25ರಂದು ನೀಡಿದ ಆದೇಶದಲ್ಲಿ ಪೊಲೀಸರು ಆರೋಪಿಗಳನ್ನು ಹೊಸತಾಗಿ ಕಸ್ಟಡಿ ವಿಚಾರಣೆಗೆ ಒಳಪಡಿಸಬೇಕೆಂದು ಸೂಚಿಸಿತ್ತು.

ಭಾರತದ ಸಾರ್ವಭೌಮತೆಗೆ ಭಂಗ ತರಲು ಹಾಗೂ ದೇಶದ ವಿರುದ್ಧ ಅಸಮಾಧಾನವನ್ನು ಸೃಷ್ಟಿಸುವ ದುರುದ್ದೇಶದಿಂದ ನ್ಯೂಸ್‌ಕ್ಲಿಕ್ ಸುದ್ದಿಜಾಲತಾಣಕ್ಕೆ ಚೀನಾದಿಂದ ಭಾರೀ ಮೊತ್ತದ ಹಣವು ಹರಿದುಬರುತ್ತಿತ್ತೆಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಕ್ರಿಯೆಗೆ ಧಕ್ಕೆ ತರಲು ಪುರಕಾಯಸ್ಥ ಅವರು ಪೀಪಲ್ಸ್ ಅಲಾಯನ್ಸ್ ಫಾರ್ ಡೆಮಾಕ್ರಸಿ ಆ್ಯಂಡ್ ಸೆಕ್ಯುಲರಿಸಂ (ಪ್ಯಾಡ್ಸ್) ಜೊತೆ ಸಂಚು ಹೂಡಿದ್ದರೆಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ದಿಲ್ಲಿ ಪೊಲೀಸರ ವಿಶೇಷ ದಳವು ಎಫ್‌ಐಆರ್‌ನಲ್ಲಿ ಹೆಸರಿಸಲಾದ ಶಂಕಿತ ಆರೋಪಿಗಳ ವಿರುದ್ಧ ದಿಲ್ಲಿ ಹಾಗೂ ಇತರ ಏಳು ರಾಜ್ಯಗಳ 88 ಸ್ಥಳಗಳಲ್ಲಿ ದಾಳಿ ನಡೆಸಿ, ಹಲವಾರು ದಾಖಲೆಗಳು ಹಾಗೂ ಇಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News