ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಸುಳಿವು ನೀಡಿದವರಿಗೆ ರೂ. 10 ಲಕ್ಷ ಬಹುಮಾನ ಘೋಷಿಸಿದ ಎನ್ಐಎ
ಹೊಸದಿಲ್ಲಿ: ಪಂಜಾಬ್ ಗಾಯಕ ಸಿಧು ಮೂಸೆವಾಲ ಹತ್ಯೆ ಪ್ರಕರಣದ ಸಂಬಂಧ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಬಿಷ್ಣೋಯಿ ಕುರಿತು ಸುಳಿವು ನೀಡಿದವರಿಗೆ ರೂ. 10 ಲಕ್ಷ ಬಹುಮಾನ ನೀಡಲಾಗುವುದು ಎಂದು ರಾಷ್ಟ್ರೀಯ ತನಿಖಾ ದಳ (NIA) ಘೋಷಿಸಿದೆ.
ಮೇ 29, 2022ರಂದು ಪಂಜಾಬ್ ಗಾಯಕ ಸಿಧು ಮೂಸೆವಾಲಾರನ್ನು ಹತ್ಯೆಗೈಯಲು ಅನ್ಮೋಲ್ ಅಲಿಯಾಸ್ ಭಾನು ಹಂತಕರಿಗೆ ಆಯುಧಗಳು ಹಾಗೂ ಸಾಗಾಣಿಕೆ ನೆರವು ಒದಗಿಸಿದ್ದ ಎಂದು ಆರೋಪಿಸಲಾಗಿದೆ. ಆತನ ವಿರುದ್ಧ ಸುಲಿಗೆ ಸೇರಿದಂತೆ ಒಟ್ಟು 18 ಪ್ರಕರಣಗಳು ದಾಖಲಾಗಿವೆ.
2022ರಲ್ಲಿ ಅನ್ಮೋಲ್ ಬಿಷ್ಣೋಯಿ ವಿರುದ್ಧದ ಎರಡು ಎನ್ಐಎ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಆತ ನಕಲಿ ಪಾಸ್ ಪೋರ್ಟ್ ಬಳಸಿ ಭಾರತದಿಂದ ಪರಾರಿಯಾಗಿದ್ದಾನೆ ಎಂಬ ಸಂಗತಿ ತನಿಖೆಯಲ್ಲಿ ತಿಳಿದು ಬಂದಿದೆ.
ಅನ್ಮೋಲ್ ಬಿಷ್ಣೋಯಿ ಸಂಘಟಿತ ಅಪರಾಧಗಳಲ್ಲಿ ಪಾಲ್ಗೊಂಡಿರುವುದರಿಂದ, ಆತನ ಪತ್ತೆಗಾಗಿನ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ, ಆತನನ್ನು ಪತ್ತೆ ಹಚ್ಚಲು ಸಹಾಯವಾಗುವ ಮಾಹಿತಿಗಳನ್ನು ಸಾರ್ವಜನಿಕರು ಹಂಚಿಕೊಳ್ಳಬೇಕು ಎಂದು ಮನವಿ ಮಾಡಿದೆ.
“ನಾವು ವಶಪಡಿಸಿಕೊಂಡಿರುವ ಧ್ವನಿ ಮಾದರಿಗಳೊಂದಿಗೆ ಅನ್ಮೋಲ್ ಬಿಷ್ಣೋಯಿ ಧ್ವನಿ ಮಾದರಿಯನ್ನು ಹೋಲಿಕೆ ಮಾಡಲು ನಾವು ದೇಶಾದ್ಯಂತ ಆತನ ಧ್ವನಿ ಮಾದರಿಗಳನ್ನು ಕಲೆ ಹಾಕುತ್ತಿದ್ದೇವೆ. ನಾವು ಆತನ ವಿರುದ್ಧ ಬಲವಾದ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ ನಂತರ, ಆತನ ವಿರುದ್ಧ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಪಟ್ಟಿ ಮಾಡಿರುವ ಕುಖ್ಯಾತ ಗ್ಯಾಂಗ್ ಸ್ಟರ್ ಗಳ ಪೈಕಿ ಅನ್ಮೋಲ್ ಹೆಸರೂ ಸೇರಿದೆ. ಖ್ಯಾತ ಸಾಮಾಜಿಕ ಮತ್ತು ಧಾರ್ಮಿಕ ನಾಯಕರು, ಸಿನಿಮಾ ತಾರೆಯರು ಹಾಗೂ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಹತ್ಯೆಗೈಯ್ಯುವ ಹಾಗೂ ಸರಣಿ ಭಯೋತ್ಪಾದಕ ದಾಳಿ ನಡೆಸುವ ಕ್ರಿಮಿನಲ್ ಪಿತೂರಿ ನಡೆಸಿದ ಆರೋಪದ ಮೇಲೆ ಕಳೆದ ವರ್ಷ ಲಾರೆನ್ಸ್ ಬಿಷ್ಣೋಯಿ ಹಾಗೂ ಆತನ ಸಹೋದರ ಅನ್ಮೋಲ್ ಬಿಷ್ಣೋಯಿ ಸೇರಿದಂತೆ ಒಟ್ಟು 14 ಮಂದಿಯ ವಿರುದ್ಧ ರಾಷ್ಟ್ರೀಯ ತನಿಖಾ ದಳವು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಇದಲ್ಲದೆ, ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ನಡೆದಿದ್ದ ಗುಂಡಿನ ದಾಳಿಯ ಹೊಣೆಯನ್ನೂ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಅನ್ಮೋಲ್ ಬಿಷ್ಣೋಯಿ ಹೊತ್ತುಕೊಂಡಿದ್ದ.