ಬಿಸಿಲಾಘಾತಕ್ಕೆ ಉತ್ತರ ಭಾರತ ತತ್ತರ | ದಿಲ್ಲಿಯಲ್ಲಿ ಉಷ್ಣಮಾರುತಕ್ಕೆ ಬಲಿಯಾದವರ ಸಂಖ್ಯೆ 20ಕ್ಕೇರಿಕೆ
ಹೊಸದಿಲ್ಲಿ: ಬಿಸಿಲ ಝಳದಿಂದ ಉತ್ತರ ಭಾರತದ ಜನತೆಗೆ ತತ್ತರಿಸಿದ್ದು, ಹಲವೆಡೆ ಬಿಸಿಲಾಘಾತದಿಂದ ಜನರು ಮೃತಪಟ್ಟಿರುವ ಬಗ್ಗೆ ವರದಿಯಾಗಿವೆ. ಅಲ್ಲದೆ ಹಲವಾರು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜಧಾನಿ ದಿಲ್ಲಿಯೊಂದರಲ್ಲಿಯೇ ಈ ಬೇಸಿಗೆಯಲ್ಲಿ ಕನಿಷ್ಠ 20 ಮಂದಿ ಬಿಸಿಲಾಘಾತಕ್ಕೆ ಬಲಿಯಾಗಿದ್ದಾರೆ ಬಿಸಿಲಾಘಾತ ಮತ್ತಿತರ ತಾಪಮಾನ ಸಂಬಂಧಿ ಆರೋಗ್ಯ ಸಮಸ್ಯೆಗಳಿಂದ ಜನರು ತಮ್ಮನ್ನು ರಕ್ಷಿಸಿಕೊಳ್ಳಲು ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆಗೊಳಿಸಿದೆ.
ಮೇ 27ರಿಂದೀಚೆಗೆ ತಾಪಮಾನಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗಾಗಿ 45 ಮಂದಿ ದಿಲ್ಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಪಮಾನ ಸಂಬಂಧಿಸಿ ಸಮಸ್ಯೆಗಳಿಂದಾಗಿ ಆನಂತರ 9 ಮಂದಿ ಮೃತಪಟ್ಟಿದ್ದು, ಕಳೆದ ಎರಡು ದಿನಗಳಲ್ಲಿ ಇನ್ನೂ ಏಳು ಮಂದಿ ಮೃತಪಟ್ಟಿದ್ದಾರೆಂದು ಆಸ್ಪತ್ರೆವರದಿ ಮಾಡಿದೆ. ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಬುಧವಾರ ಐದು ಮಂದಿ ಸೇರಿದಂತೆ ಒಟ್ಟು 9 ಮಂದಿ ಹಾಗೂ ಲೋಕನಾಯಕ ಆಸ್ಪತ್ರೆಯಲ್ಲಿ ಕಳೆದ ಏಳು ದಿನಗಳಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.
ದಿಲ್ಲಿ ಸೇರಿದಂತೆ ಉತ್ತರಭಾರದತದ ಹಲವೆಡೆ ಬಿಸಿಲಾಘಾತದ ಪ್ರಕರಣಗಳು ಉಲ್ಬಣಗೊಂಡಿರುವಂತೆಯೇ ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಸರಕಾರದ ಸ್ವಾಮ್ಯದಲ್ಲಿರುವ ಆಸ್ಪತ್ರೆಗಳಿಗೆ ಸಲಹಾಸೂಚಿಯೊಂದನ್ನು ಬಿಡುಗಡೆಗೊಳಿಸಿದೆ. ಬಿಸಿಲಾಘಾತದಿಂದ ಬಾಧಿತರಾದ ರೋಗಿಗಳ ಚಿಕಿತ್ಸೆಗೆ ಆದ್ಯತೆ ನೀಡುವಂತೆ ಸೂಚಿಸಿದೆ.
ಪರಿಸ್ಥಿತಿಯ ಪರಾಮರ್ಶೆ ನಡೆಸಿರುವ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಕೇಂದ್ರ ಸರಕಾರ ಸ್ವಾಮ್ಯದ ಆಸ್ಪತ್ರೆಗಳಲ್ಲಿ ವಿಶೇಷ ಬಿಸಿಲಾಘಾತ ಚಿಕಿತ್ಸಾ ಘಟಕಗಳನ್ನ ಸ್ಥಾಪಿಸುವಂತೆ ಸೂಚಿಸಿದ್ದಾರೆ.
ಬಿಸಿಲಿನಲ್ಲಿ ಅದರಲ್ಲೂ ವಿಶೇಷವಾಗಿ ಮಧ್ಯಾಹ್ನದಿಂದ ಅಪರಾಹ್ನ 3:00 ಗಂಟೆಯವರೆಗೆ ಹೊರಹೋಗದಂತೆ ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆಗಳಿಸಿರುವ ಮಾರ್ಗದರ್ಶಿ ಸೂತ್ರದಲ್ಲಿ ಜನತೆಗೆ ಸೂಚನೆ ನೀಡಿದೆ. ಬಾಯಾರಿಕೆಯಾಗದಿದ್ದರೂ ಜನರು ಸಾಧ್ಯವಾದಷ್ಟು ನೀರು ಕುಡಿಯಬೇಕು ಹಾಗೂ ಪ್ರಯಾಣಿಸುವಾಗ ತಮ್ಮೊಂದಿಗೆ ನೀರನ್ನು ಒಯ್ಯಬೇಕು ಎಂದು ಸೂಚಿಸಿದೆ. ಅಲ್ಕೋಹಾಲ್, ಚಹಾ,ಕಾಫಿ ಹಾಗೂ ಲಘುಪಾನೀಯಗಳ ಸೇವನೆಯಿಂದ ದೇಹವು ನಿರ್ಜಲೀಕರವಾಗುವ ಕಾರಣ ಅವುಗಳನ್ನು ಸೇವಿಸದಂತೆ ಸೂಚಿಸಿದೆ. ಓಆರ್‌ಎಸ್, ಮಜ್ಜಿಗೆ, ಗಂಜಿ ನೀರು, ಲಿಂಬೆ ನೀರು ಹಾಗೂ ಬೆಣ್ಣೆಯನ್ನು ಸೇವಿಸಬೇಕೆಂದು ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ.
ಜನರು ತಾಪಮಾನದಿಂದ ಪಾರಾಗಲು ಜನರು ಹೊರಗೆ ಹೋಗುವಾಗ ಲಘುವಾದ ಬಣ್ಣವುಳ್ಳ ಸಡಿಲ ಹಾಗೂ ತೆಳ್ಳಗಿನ ಹತ್ತಿ ಬಟ್ಟೆಗಳನ್ನು ಧರಿಸಬೇಕು ಮತ್ತು ಕೂಲಿಂಗ್‌ಗ್ಲಾಸ್ ಧರಿಸಬೇಕು ಮತ್ತು ತಣ್ಣೀರಿನಲ್ಲಿ ಆಗಾಗ್ಗೆ ಸ್ನಾನಮಾಡಬೇಕೆಂದು ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ.