ರಾಹುಲ್‌ರ ಜಾತಿಯನ್ನು ಕೇಳುವುದರಲ್ಲಿ ತಪ್ಪಿಲ್ಲ: ಕೇಂದ್ರ ಸಚಿವ ರಿಜಿಜು

Update: 2024-07-31 16:38 GMT

ರಾಹುಲ್‌ಗಾಂಧಿ ,  ಕಿರಣ್ ರಿಜಿಜು |PTI

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು ಜಾತಿ ಆಧಾರದಲ್ಲಿ ದೇಶವನ್ನು ವಿಭಜಿಸಲು ಯತ್ನಿಸುತ್ತಿರುವುದರಿಂದ ಅವರ ಜಾತಿಯನ್ನು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲವೆಂದು ಕೇಂದ್ರ ಸಚಿವ ಕಿರಣ್ ರಿಜಿಜು ಬುಧವಾರ ತಿಳಿಸಿದ್ದಾರೆ.

‘‘ಜನರ ಜಾತಿಯನ್ನು ಕೇಳುವ ಮೂಲಕ ಕಾಂಗ್ರೆಸ್ ಪಕ್ಷವು ದೇಶವನ್ನು ವಿಭಜಿಸಲು ಯತ್ನಿಸುತ್ತಿದೆ. ಆದರೆ ರಾಹುಲ್‌ರ ಜಾತಿಯ ಬಗ್ಗೆ ಮಾತನಾಡಿದಾಗ ಅಷ್ಟೊಂದು ಪ್ರತಿಭಟನೆಯಾಗುತ್ತದೆ ಎಂದು ರಿಜಿಜು ಹೇಳಿದರು.

ಸಂಸತ್ ಭವನದ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು ದಿನಬೆಳಗಾದರೆ ಜಾತಿ ಬಗ್ಗೆ ಮಾತನಾಡುತ್ತದೆ. ಅವರು (ರಾಹುಲ್) ಮಾಧ್ಯಮಮಂದಿಯನ್ನು ಭೇಟಿಯಾದಾಗ ಅವರ ಜಾತಿಯನ್ನು ಕೇಳುತ್ತಾರೆ, ಸಶಸ್ತ್ರ ಪಡೆ ಸಿಬ್ಬಂದಿಯ ಜಾತಿ ಕೇಳುತ್ತಾರೆ, ಭಾರತ್‌ಜೋಡೋ ಯಾತ್ರಾದಲ್ಲಿ ಜನರ ಜಾತಿಯನ್ನು ಕೇಳುತ್ತಾರೆ. ಅವರು (ರಾಹುಲ್) ಜನರ ಜಾತಿಯನ್ನು ಕೇಳಬಹುದು. ಆದರೆ ಅವರ (ರಾಹುಲ್) ಜಾತಿಯನ್ನು ಯಾರು ಕೂಡಾ ಕೇಳಬಾರದು ಎಂದರೆ ಏನರ್ಥ?. ಅಖಿಲೇಶ್ ಯಾದವ್ ಕೂಡಾ ರಾಹುಲ್‌ರನ್ನು ಬೆಂಬಲಿಸಿದ್ದಾರೆ. ಇವರು ದೇಶ ಹಾಗೂ ಸಂಸತ್‌ಗೆ ಮಿಗಿಲಾದವರೇನು ಎಂದು ಸಚಿವ ರಿಜಿಜು ವ್ಯಂಗ್ಯವಾಡಿದ್ದಾರೆ.

ಬಜೆಟ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂದರ್ಭ ಸಂಸದ ಅನುರಾಗ್ ಠಾಕೂರ್ ಲೋಕಸಭೆಯ ಪ್ರತಿಪಕ್ಷ ರಾಹುಲ್‌ಗಾಂಧಿ ಅವರು ಜಾತಿಗಣತಿ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿರುವುದನ್ನು ಪ್ರಸ್ತಾವಿಸುತ್ತಾ ತಮ್ಮ ಜಾತಿ ಯಾವುದೆಂದು ತಿಳಿಯದವರು ಜಾತಿಗಣತಿ ಬಗ್ಗೆ ಮಾತನಾಡುತ್ತಿದ್ದಾರೆಂದು ಟೀಕಿಸಿದ್ದುದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News