ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತನ್ನ ವೆಬ್‌ಸೈಟ್‌ನಿಂದ ತೆಗೆದುಹಾಕಿದ ಎಸ್ಬಿಐ
ಹೊಸದಿಲ್ಲಿ: ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ. ರಾಜಕೀಯ ಪಕ್ಷಗಳು ಪಡೆದಿರುವ ಎಲೆಕ್ಟೋರಲ್ ಬಾಂಡ್‌ಗಳ ಕುರಿತ ಮಾಹಿತಿ ಸಲ್ಲಿಸಲು ಜೂನ್ 30ರ ತನಕ ಸಮಯಾವಕಾಶ ಕೋರಿ ಬ್ಯಾಂಕ್ ಸುಪ್ರೀಂ ಕೋರ್ಟಿಗೆ ಬ್ಯಾಂಕ್ ಅಪೀಲು ಸಲ್ಲಿಸಿದ ನಡುವೆ ಈ ಬೆಳವಣಿಗೆ ನಡೆದಿದೆ ಎಂದು thewire.in ವರದಿ ಮಾಡಿದೆ.
ʼಆಪರೇಟಿಂಗ್ ಗೈಡ್‌ಲೈನ್ಸ್ ಫಾರ್ ಡೋನರ್ಸ್ʼ ಮತ್ತು ʼಫ್ರೀಕ್ವೆಂಟ್ಲಿ ಆಸ್ಕ್ಡ್ ಕ್ವೆಶ್ಚನ್ಸ್ʼಗೆ ಸಂಬಂಧಿಸಿದ ಲಿಂಕ್‌ಗಳು ಅಥವಾ ವೆಬ್‌ಪುಟಗಳು ಈಗ ಕಾಣಿಸುತ್ತಿಲ್ಲ.
ಮೊದಲ ಲಿಂಕ್ ಅಥವಾ ವೆಬ್‌ಪುಟದಲ್ಲಿ ಚುನಾವಣಾ ಬಾಂಡ್‌ಗಳ ಖರೀದಿ ಕುರಿತ ಕೆಲ ಮಾಹಿತಿ ಇದ್ದರೆ ಎಫ್‌ಎಕ್ಯು ಪುಟದಲ್ಲಿ ಬಾಂಡ್‌ಗಳ ಕುರಿತು ಮೂಲಭೂತ ಮಾಹಿತಿ, ಕೆವೈಸಿ ಅಗತ್ಯತೆಗಳು ಇತ್ಯಾದಿ ಇದ್ದವು.
ಫೆಬ್ರವರಿ 15ರಂದು ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಘೋಷಿಸಿ ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸಿತ್ತಲ್ಲದೆ ಎಪ್ರಿಲ್ 12, 2019ರಿಂದ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ಸಲ್ಲಿಸುವಂತೆ ಎಸ್ಬಿಐಗೆ ಸೂಚಿಸಿತ್ತು.
ಎಡಿಆರ್ ಮತ್ತು ಕಾಮನ್ ಕಾಸ್ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಲಾಗಿತ್ತು.
ಆದರೆ ಚುನಾವಣಾ ಬಾಂಡ್‌ಗಳ ಕುರಿತು ಮಾಹಿತಿಯನ್ನು ಸಲ್ಲಿಸದೇ ಇದ್ದ ಎಸ್‌ಬಿಐ ಮಾರ್ಚ್ 4ರಂದು ಸುಪ್ರೀಂ ಕೋರ್ಟ್ ಕದ ತಟ್ಟಿ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಲು ಜೂನ್ 30ರ ತನಕ ಸಮಯಾವಕಾಶ ವಿಸ್ತರಿಸಬೇಕೆಂದು ಕೋರಿತ್ತು.
ಎಪ್ರಿಲ್ 12, 2019ರಿಂದ ಫೆಬ್ರವರಿ 15, 2024ರ ನಡುವೆ 22,217 ಚುನಾವಣಾ ಬಾಂಡ್ ಗಳನ್ನು ಮಾರಾಟ ಮಾಡಲಾಗಿದೆ. ಈ ಬಾಂಡ್ಗಳ ಖರೀದಿ ಕುರಿತ ಮಾಹಿತಿ ಕೇಂದ್ರೀಕೃತವಾಗಿ ಇರಿಸಲಾಗಿಲ್ಲ,” ಎಂದು ಎಸ್ಬಿಐ ಹೇಳಿತ್ತು.