ನರೇಗಾ ವೇತನಗಳ ಪರಿಷ್ಕರಣೆ: ಹರ್ಯಾಣದಲ್ಲಿ ಗರಿಷ್ಠ ದಿನಗೂಲಿ, ಉತ್ತರ ಪ್ರದೇಶದಲ್ಲಿ ಕನಿಷ್ಠ
ಹೊಸದಿಲ್ಲಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು 2024-25ನೇ ವಿತ್ತವರ್ಷಕ್ಕಾಗಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ)ಯಡಿ ಪರಿಷ್ಕೃತ ವೇತನಗಳನ್ನು ಪ್ರಕಟಿಸಿದ್ದು, ಅವು ಸೋಮವಾರ (ಎ.1)ದಿಂದ ಜಾರಿಗೆ ಬರಲಿವೆ.
ಕಾಯ್ದೆಯ ವ್ಯಾಪ್ತಿಗೊಳಪಟ್ಟಿರುವ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವೇತನಗಳನ್ನು ಹೆಚ್ಚಿಸಲಾಗಿದೆ, ಆದರೆ ಮೊತ್ತಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.
ಕಾಯ್ದೆಯು ವಿಶೇಷ ಅಧಿಸೂಚಿತ ದಿನಗೂಲಿಗಳಲ್ಲಿ ಗ್ರಾಮೀಣ ಕುಟುಂಬಗಳಿಗೆ ನೂರು ದಿನಗಳ ಉದ್ಯೋಗದ ಖಾತರಿಯನ್ನು ನೀಡುತ್ತದೆ.
ಹರ್ಯಾಣ ದೇಶದಲ್ಲಿ ಅತ್ಯಧಿಕ ನರೇಗಾ ವೇತನವನ್ನು ನೀಡುವ ರಾಜ್ಯವಾಗಿ ಮುಂದುವರಿದಿದೆ. ರಾಜ್ಯದಲ್ಲಿ ಪರಿಷ್ಕೃತ ದಿನಗೂಲಿಯು 374 ರೂ.ಗಳಾಗಿದ್ದು, ಕಳೆದ ವರ್ಷದ 357 ರೂ.ಗಳಿಗೆ ಹೋಲಿಸಿದರೆ ಶೇ.4.8ರಷ್ಟು ಹೆಚ್ಚಳವಾಗಿದೆ.
ಇತ್ತೀಚಿನ ಪರಿಷ್ಕರಣೆಯಂತೆ ಗೋವಾ (356 ರೂ.) ಮತ್ತು ಕರ್ನಾಟಕ (349 ರೂ.) ನಂತರದ ಸ್ಥಾನಗಳಲ್ಲಿವೆ.
ಸಿಕ್ಕಿಮ್‌ನ ಗ್ನಾಥಾಂಗ್,ಲಾಚುಂಗ್ ಮತ್ತು ಲಾಚೆನ್ ಗ್ರಾಮ ಪಂಚಾಯತ್‌ಗಳಲ್ಲಿ ನರೇಗಾ ವೇತನ ದಿನವೊಂದಕ್ಕೆ 374 ರೂ.ಗಳಾಗಿದ್ದರೆ ರಾಜ್ಯದ ಇತರ ಭಾಗಗಳಿಗೆ ದಿನಕ್ಕೆ 249 ರೂ.ಆಗಿದೆ.
ಸೋಮವಾರದಿಂದ ನಾಗಾಲ್ಯಾಂಡ್,ಅರುಣಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶಗಳ ಅನುಸೂಚಿತವಲ್ಲದ ಪ್ರದೇಶಗಳು ಅನುಕ್ರಮವಾಗಿ 234 ರೂ.,234 ರೂ. ಮತ್ತು 236 ರೂ.ಗಳ ಕನಿಷ್ಠ ನರೇಗಾ ವೇತನಗಳನ್ನು ಹೊಂದಿರಲಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಗೋವಾದಲ್ಲಿ ದಿನವೊಂದಕ್ಕೆ 34 ರೂ.ಗಳ ಗರಿಷ್ಠ ಏರಿಕೆಯನ್ನು ಮಾಡಲಾಗಿದೆ. ಕಳೆದ ವರ್ಷ 322 ರೂ.ಗಳ ದಿನಗೂಲಿ ನೀಡುತ್ತಿದ್ದ ಅದು ಎ.1ರಿಂದ 356 ರೂ.ಗಳ (ಶೇ.10.56ರಷ್ಟು ಹೆಚ್ಚಳ) ದಿನಗೂಲಿಯನ್ನು ನೀಡಲಿದೆ. ಕರ್ನಾಟಕ (33 ರೂ.ಏರಿಕೆ),ಆಂಧ್ರಪ್ರದೇಶ ಮತ್ತು ತೆಲಂಗಾಣ (ತಲಾ 28 ರೂ.ಏರಿಕೆ ) ನಂತರದ ಸ್ಥಾನಗಳಲ್ಲಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಮೂರು ರಾಜ್ಯಗಳಲ್ಲಿ ನರೇಗಾ ದಿನಗೂಲಿಯಲ್ಲಿ ಅನುಕ್ರಮವಾಗಿ ಶೇ.10.44,ಶೇ.10.29 ಮತ್ತು ಶೇ.10.29ರಷ್ಟು ಏರಿಕೆಯಾಗಿದೆ.
ಉತ್ತರ ಪ್ರದೇಶ, ಉತ್ತರಾಖಂಡ (ತಲಾ 7ರೂ. ಏರಿಕೆ) ಮತ್ತು ನಾಗಾಲ್ಯಾಂಡ್ (10 ರೂ.ಏರಿಕೆ) ಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅತ್ಯಂತ ಕಡಿಮೆ ಹೆಚ್ಚಳವಾಗಿದೆ.
ಶೇಕಡಾವಾರು ಲೆಕ್ಕದಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಕಳೆದ ವರ್ಷಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ಏರಿಕೆ (ತಲಾ ಶೇ.3.04)ಯನ್ನು ಕಂಡಿವೆ. ಇವುಗಳಿಗಿಂತ ಮೇಲಿನ ಸ್ಥಾನದಲ್ಲಿರುವ ಲಕ್ಷದ್ವೀಪದಲ್ಲಿ ಶೇ.3.62ರಷ್ಟು ವೇತನ ಹೆಚ್ಚಳವಾಗಿದೆ.
2024-25ನೇ ಸಾಲಿಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಾಸರಿ ವೇತನವು ದಿನವೊಂದಕ್ಕೆ 284 ರೂ.ಗಳಾಗಿದ್ದು,ಕಳೆದ ವರ್ಷ ಅದು 267 ರೂ.ಆಗಿತ್ತು.
ಗ್ರಾಹಕ ಬೆಲೆ ಸೂಚ್ಯಂಕದ ಕೃಷಿ ಕಾರ್ಮಿಕ ಆಯಾಮ (ಸಿಪಿಐ-ಎಎಲ್)ದಲ್ಲಿ ಬದಲಾವಣೆಗಳನ್ನು ಆಧರಿಸಿ ಪ್ರತಿವರ್ಷ ನರೇಗಾ ವೇತನಗಳನ್ನು ಪರಿಷ್ಕರಿಸಲಾಗುತ್ತದೆ.
ಈ ವರ್ಷದ ಫೆಬ್ರವರಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಕುರಿತ ಸಂಸದೀಯ ಸ್ಥಾಯಿ ಸಮಿತಿಯು, 2010-11ರ ಸಿಪಿಐ-ಎಎಲ್ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ವೇತನ ಪರಿಷ್ಕರಣೆ ಪದ್ಧತಿಯು ಈಗಿನ ಹಣದುಬ್ಬರ ಮತ್ತು ಜೀವನವೆಚ್ಚಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ತನ್ನ ವರದಿಯಲ್ಲಿ ಹೇಳಿತ್ತು. ಭಾರತದಲ್ಲಿ ಅಗತ್ಯಾಧಾರಿತ ಕನಿಷ್ಠ ವೇತನವನ್ನು ದಿನಕ್ಕೆ 375 ರೂ.ಗಳಿಗೆ ನಿಗದಿಪಡಿಸಬೇಕೆಂದು 2019ರಲ್ಲಿ ಶಿಫಾರಸು ಮಾಡಿದ್ದ ತಜ್ಞರ ಸಮಿತಿಯೊಂದರ ವರದಿಯನ್ನು ಉಲ್ಲೇಖಿಸಿದ್ದ ಸ್ಥಾಯಿ ಸಮಿತಿಯು,ಅದರಂತೆ ನರೇಗಾ ವೇತನಗಳನ್ನು ಪರಿಷ್ಕರಿಸುವಂತೆ ಸಲಹೆ ನೀಡಿತ್ತು.
ಆದರೆ ಪರಿಷ್ಕೃತ ವೇತನಗಳಂತೆ ಯಾವುದೇ ರಾಜ್ಯವು 374 ರೂ.ಗಿಂತ ಹೆಚ್ಚಿನ ದಿನಗೂಲಿಯನ್ನು ನೀಡುವುದಿಲ್ಲ.