ರಾಜ್ಯಪಾಲರ ಪುತ್ರ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದ ಒಡಿಶಾ ರಾಜಭವನದ ಸಿಬ್ಬಂದಿಯ ವರ್ಗಾವಣೆ

Update: 2024-07-16 10:14 GMT

ರಾಜ್ಯಪಾಲ ರಘುಬರ್ ದಾಸ್‌ (Photo: ANI)

ಭುವನೇಶ್ವರ: ರಾಜ್ಯಪಾಲ ರಘುಬರ್ ದಾಸ್‌ರ ಪುತ್ರ ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಕಳೆದ ವಾರ ಆರೋಪಿಸಿದ್ದ ಒಡಿಶಾ ರಾಜಭವನದ ಸಿಬ್ಬಂದಿಯೋರ್ವರನ್ನು ಗೃಹ ಇಲಾಖೆಗೆ ವರ್ಗಾಯಿಸಲಾಗಿದೆ.

ರಾಜಭವನದ ಕಾರ್ಯಾಲಯದ ಗೃಹಕೃತ್ಯ ವಿಭಾಗದ ಸಹಾಯಕ ವಿಭಾಗಾಧಿಕಾರಿಯನ್ನಾಗಿ ಬೈಕುಂಠ ಪ್ರಧಾನ್ (47) ಅವರನ್ನು ನಿಯೋಜಿಸಲಾಗಿತ್ತು. ಪುರಿಯಲ್ಲಿನ ರಾಜಭವನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಪತಿ ದ್ರೌಪದಿ ಮರ್ಮು ಭೇಟಿಯ ಸಿದ್ಧತಾ ಕಾರ್ಯದ ಮೇಲುಸ್ತುವಾರಿ ಕಾರ್ಯಕ್ಕೆ ನಿಯೋಜಿತನಾಗಿದ್ದ ತನ್ನ ಮೇಲೆ ರಾಜ್ಯಪಾಲ ರಘುಬರ್ ದಾಸ್‌ರ ಪುತ್ರ ಲಲಿತ್ ಕುಮಾರ್ ಹಾಗೂ ಇನ್ನೂ ಐವರು ದೈಹಿಕ ಹಲ್ಲೆ ನಡೆಸಿ, ನನ್ನ ಕೆನ್ನೆಗೆ ಹೊಡೆದರು ಹಾಗೂ ನನ್ನ ಹೊಟ್ಟೆಗೆ ಒದ್ದರು ಎಂದು ಅವರು ಕಳೆದ ವಾರ ಆರೋಪಿಸಿದ್ದರು. ಪುರಿ ರೈಲ್ವೆ ನಿಲ್ದಾಣದಿಂದ ರಾಜಭವನಕ್ಕೆ ತಮ್ಮನ್ನು ಕರೆ ತರಲು ಐಷಾರಾಮಿ ಕಾರನ್ನು ಕಳಿಸಲಿಲ್ಲ ಎಂಬ ಕಾರಣಕ್ಕೆ ಬೈಕುಂಠ ಪ್ರಧಾನ್ ಮೇಲೆ ಅವರು ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಸೋಮವಾರ ಆದೇಶವೊಂದನ್ನು ಹೊರಡಿಸಿರುವ ರಾಜ್ಯ ಗೃಹ ಇಲಾಖೆ, "ರಾಜಭವನದ ಕಾರ್ಯಾಲಯದಲ್ಲಿ ನಿಯೋಜನೆಗೊಂಡಿರುವ ಬೈಕುಂಠ ಪ್ರಧಾನ್ ಅವರನ್ನು ಗೃಹ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗೆ ತಕ್ಷಣದಿಂದಲೇ ವರ್ಗಾಯಿಸಲಾಗಿದೆ" ಎಂದು ಹೇಳಿದೆ.

ಶನಿವಾರ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿಯೊಂದಿಗೆ ನಡೆದಿದ್ದ ಸಭೆಯಲ್ಲಿ ತಮ್ಮನ್ನು ರಾಜಭವನದಿಂದ ವರ್ಗಾಯಿಸುವಂತೆ ಬೈಕುಂಠ ಪ್ರಧಾನ್ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News