ಉತ್ತರಾಖಂಡ: ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಇನ್ನು ಕೇವಲ 12 ಮೀಟರ್‌ ದೂರ ಬಾಕಿ

Update: 2023-11-22 12:47 GMT

Photo: NDTV 

ಹೊಸದಿಲ್ಲಿ: ಉತ್ತರಾಖಂಡದ ಸಿಲ್ಕ್ಯಾರ ಎಂಬಲ್ಲಿ ಕುಸಿದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯ ಅಂತಿಮ ಕ್ಷಣಗಳನ್ನು ತಲುಪುತ್ತಿದ್ದು ರಕ್ಷಣಾ ಕಾರ್ಯಕರ್ತರು ಹಾಗೂ ಸುರಂಗದಲ್ಲಿ ಕಲ್ಲು ಬಂಡೆಗಳಾಚೆ ಸಿಲುಕಿರುವ ಕಾರ್ಮಿಕರ ನಡುವೆ ಈಗ ಸುಮಾರು 12 ಮೀಟರ್‌ ಅಂತರವಷ್ಟೇ ಬಾಕಿ ಉಳಿದಿದೆ, ಮುಂದಿನ 24 ಗಂಟೆಗಳೊಳಗೆ ದೊಡ್ಡ ಸುದ್ದಿ ನಿರೀಕ್ಷಿಸಬಹುದು ಎಂಬ ಮಾಹಿತಿ ಅಧಿಕಾರಿಗಳಿಂದ ಬಂದಿದೆ.

ಮಧ್ಯ ರಾತ್ರಿ 12.45ಕ್ಕೆ ಚಾಲನೆಯಾದ ಡ್ರಿಲ್ಲಿಂಗ್‌ ಯಂತ್ರ ಇಲ್ಲಿಯ ತನಕ 39 ಮೀಟರ್‌ ತನಕ ಡ್ರಿಲ್‌ ಮಾಡಿದೆ. ಕಾರ್ಮಿಕರು ನೆಲದಡಿ 57 ಮೀಟರ್‌ ಆಳದಲ್ಲಿ ಸಿಲುಕಿದ್ದಾರೆಂದು ಶಂಕಿಸಲಾಗಿದೆ. ಆದ್ದರಿಂದ ಅವರನ್ನು ತಲುಪಲು ಇನ್ನು 18 ಮೀಟರ್‌ ದೂರವಷ್ಟೇ ಇದೆ ಎಂದು ಉತ್ತರಾಖಂಡ ರಸ್ತೆ ಮತ್ತು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿ ಮಹಮೂದ್‌ ಅಹ್ಮದ್‌ ಹೇಳಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಆರಂಭಗೊಂಡು ಇಂದಿಗೆ 11ನೇ ದಿನ ತಲುಪಿದೆ. ಸುರಂಗದೊಳಗೆ ಸಿಲುಕಿರುವ ಕಾರ್ಮಿಕರಿಗೆ ಹೊರಬರಲು ಡ್ರಿಲ್‌ ಮಾಡಿದ ತೂತುಗಳಿಗೆ ಪೈಪುಗಳನ್ನು ವೆಲ್ಡ್‌ ಮಾಡುವ ಕೆಲಸಕ್ಕೆ ಬಹಳಷ್ಟು ಸಮಯ ತಗಲುತ್ತಿದೆ.

ಮೂರು ಸೆಕ್ಷನ್‌ಗಳಲ್ಲಿ 18 ಮೀಟರ್‌ ಉದ್ದದ ಪೈಪ್‌ಗಳನ್ನು ಇರಿಸಲು 15 ಗಂಟೆಗಳೇ ತಗಲಿವೆ. ಹೆಚ್ಚುವರಿ 800ಎಂಎಂ ಪೈಪ್‌ ಅನ್ನೂ ಸುರಂಗದೊಳಗೆ 21 ಮೀಟರಿನಷ್ಟು ದೂರ ತಳ್ಳಲಾಗಿದೆ. ಇನ್ನು ಯಾವುದೇ ಅಡೆತಡೆಯಿಲ್ಲದೇ ಇದ್ದಲ್ಲಿ ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆಯೊಳಗೆ ದೊಡ್ಡ ಸುದ್ದಿ ಬರಲಿದೆ ಎಂಬುದು ಅಧಿಕಾರಿಗಳ ನಿರೀಕ್ಷೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News