"ನಿಮ್ಮವರು ಬ್ರಿಟಿಷರಿಗೆ ಬರೆದಿದ್ದು ಪ್ರೇಮ ಪತ್ರ": ಬಿಜೆಪಿಯ ʼಮತ ಜಿಹಾದ್ʼ ಹೇಳಿಕೆಗೆ ಉವೈಸಿ ತಿರುಗೇಟು

Update: 2024-11-11 07:13 GMT

ಅಸದುದ್ದೀನ್ ಉವೈಸಿ (PTI)

ಮಹಾರಾಷ್ಟ್ರ: “ಮತ ಜಿಹಾದ್-ಧರ್ಮಯುದ್ಧ” ಹೇಳಿಕೆಗಳಿಗಾಗಿ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಬಿಜೆಪಿ ಮತ್ತು ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವೀಸ್ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದು, ನಮ್ಮ ಪೂರ್ವಜರು ಬ್ರಿಟಿಷರ ವಿರುದ್ಧ ಜಿಹಾದ್ ಮಾಡಿದ್ದರು. ಆದರೆ ನಿಮ್ಮವರು ಬರೆದದ್ದು ಪ್ರೇಮ ಪತ್ರ ಎಂದು ತಿರುಗೇಟು ನೀಡಿದ್ದಾರೆ. ಇದಲ್ಲದೆ ಪ್ರಧಾನಿ ಮೋದಿಯ “ಏಕ್ ಹೈ ತೊ ಸೇಫ್ ಹೈ” Ek Hai to Safe Hai” ಘೋಷಣೆಯು ವೈವಿಧ್ಯತೆಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಎಐಎಂಐಎಂ ಪಕ್ಷದ ಔರಂಗಾಬಾದ್ ಪೂರ್ವ ಕ್ಷೇತ್ರದ ಅಭ್ಯರ್ಥಿಗಳಾದ ಇಮ್ತಿಯಾಝ್ ಜಲೀಲ್ ಮತ್ತು ಔರಂಗಾಬಾದ್ ಸೆಂಟ್ರಲ್ ಕ್ಷೇತ್ರದ ನಾಸರ್ ಸಿದ್ದಿಕಿ ಅವರನ್ನು ಬೆಂಬಲಿಸಿ ಛತ್ರಪತಿ ಸಂಭಾಜಿನಗರದ ಜಿನ್ಸಿ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉವೈಸಿ, ನಮ್ಮ ಪೂರ್ವಜರು ಬ್ರಿಟಿಷರ ವಿರುದ್ಧ ಜಿಹಾದ್ ಮಾಡಿದ್ದರು, ಫಡ್ನವಿಸ್ ಈಗ ಜಿಹಾದ್ ಬಗ್ಗೆ ನಮಗೆ ಕಲಿಸುತ್ತಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ ಮತ್ತು ದೇವೇಂದ್ರ ಫಡ್ನವಿಸ್ ಮೂವರು ಒಟ್ಟಾದರೂ ಚರ್ಚೆಯಲ್ಲಿ ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಧರ್ಮಯುದ್ಧ-ಜಿಹಾದ್ ಹೇಳಿಕೆ ಚುನಾವಣಾ ನೀತಿಯ ಸಂಹಿತೆ ಉಲ್ಲಂಘನೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಮತ ಜಿಹಾದ್ ಮತ್ತು ಧರ್ಮಯುದ್ಧ ಎಲ್ಲಿಂದ ಬಂತು? ನೀವು ಶಾಸಕರನ್ನು ಖರೀದಿಸಿದ್ದೀರಿ, ನಾವು ನಿಮ್ಮನ್ನು ಕಳ್ಳ ಎಂದು ಕರೆಯಬೇಕೇ? ಫಡ್ನವಿಸ್ ಮತ ಜಿಹಾದ್ ಬಗ್ಗೆ ಮಾತನಾಡುತ್ತಿದ್ದಾರೆ, ಆದ್ರೆ ಅವರ ಹೀರೋಗಳು ಬ್ರಿಟಿಷರಿಗೆ ಪ್ರೇಮ ಪತ್ರಗಳನ್ನು ಬರೆಯುತ್ತಿದ್ದರು ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆ ವೇಳೆ ಮಾಲೆಗಾಂವ್‌ ನಲ್ಲಿ ಮತಗಳು ಬಂದಿರಲಿಲ್ಲ ಎಂಬ ಕಾರಣಕ್ಕೆ, ಅವರು ಮತ ಜಿಹಾದ್ ಎನ್ನುತ್ತಿದ್ದಾರೆ. ಅವರು ಮತಗಳಿಸಲು ಆಗದಿದ್ದರೆ, ಅದನ್ನು ಜಿಹಾದ್ ಎಂದು ಹೇಳುತ್ತಾರೆ. ಆಗಾದ್ರೆ ಬಿಜೆಪಿ ಅಯೋಧ್ಯೆಯಲ್ಲಿ ಸೋತಿದೆ. ಅದು ಹೇಗೆ ಸಾಧ್ಯವಾಯ್ತು ಎಂದು ಪ್ರಶ್ನಿಸಿದ್ದಾರೆ. ಮೋದಿ ಅವರು ‘ಏಕ್ ಹೈ ತೊ ಸೇಫ್ ಹೈ’ ಎಂದು ಹೇಳುತ್ತಾರೆ. ಏಕೆಂದರೆ ಮೋದಿ ಮತ್ತು ಬಿಜೆಪಿ ಈ ದೇಶದ ವೈವಿಧ್ಯತೆಯನ್ನು ಕೊನೆಗೊಳಿಸಲು ಬಯಸುತ್ತಾರೆ. ಮರಾಠ ಸಮುದಾಯಕ್ಕೆ ಮೀಸಲಾತಿ ವಿಚಾರದಲ್ಲಿ ದ್ರೋಹ ಮಾಡಲಾಗಿದೆ. ಹಲವು ಕೈಗಾರಿಕಾ ಯೋಜನೆಗಳು ಗುಜರಾತ್‌ಗೆ ಹೋಗಿವೆ ಆದರೆ ಫಡ್ನವೀಸ್ ಈ ಕೈಗಾರಿಕೆಗಳನ್ನು ತಡೆಯುವ ಧೈರ್ಯ ತೋರಿಸಲಿಲ್ಲ. ಅವರು ನರೇಂದ್ರ ಮೋದಿಗೆ ಭಯ ಪಡುತ್ತಿದ್ದಾರೆಯೇ ಎಂದು ಉವೈಸಿ ಪ್ರಶ್ನಿಸಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಲೋಕಸಭೆ ಚುನಾವಣೆಯಲ್ಲಿ ಧುಲೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಅಲ್ಪ ಅಂತರದ ಸೋಲನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದ ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರದಲ್ಲಿ ಇದೀಗ 'ಮತ ಜಿಹಾದ್' ನಡೆಯುತ್ತಿದೆ. ಅದನ್ನು ಮತದ ಧರ್ಮಯುದ್ಧದ ಮೂಲಕ ಹತ್ತಿಕ್ಕಬೇಕು ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News