ಫಾರ್ಮ್ 12 ಮತ್ತು ಮುದ್ರೆಯಿಲ್ಲದ ಮತಪತ್ರ ಸಲ್ಲಿಸುವಂತೆ ಪೋಲಿಸರಿಗೆ ಸೂಚಿಸಲಾಗಿತ್ತು: ಚುನಾವಣಾ ಆಯೋಗಕ್ಕೆ ಹರ್ಯಾಣ ಪೋಲಿಸ್ ಸಂಘದ ದೂರು

Update: 2024-05-30 10:05 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ತಮ್ಮ ಸಾವಿರಾರು ಮತಗಳನ್ನು ತಮ್ಮಿಂದ ‘ಕದಿಯಲಾಗಿದೆ’ ಮತ್ತು ತಾವು ಮುಕ್ತ ಹಾಗೂ ನ್ಯಾಯಸಮ್ಮತ ಮತದಾನದಿಂದ ವಂಚಿತರಾಗಿದ್ದೇವೆ ಎಂದು ಹರ್ಯಾಣ ಪೋಲಿಸ್ ಸಂಘಟನೆ (ಎಚ್‌ಪಿಎಸ್)ಯು ಹೇಳಿದೆ. ಲೋಕಸಭಾ ಚುನಾವಣೆಗಳ ಆರನೇ ಹಂತದಲ್ಲಿ ಮೇ 25ರಂದು ಹರ್ಯಾಣದಲ್ಲಿ ಮತದಾನ ನಡೆದಿತ್ತು.

50,000ಕ್ಕೂ ಅಧಿಕ ಹಾಲಿ ಮತ್ತು ಮಾಜಿ ಪೋಲಿಸ್ ಅಧಿಕಾರಿಗಳು ಸದಸ್ಯರಾಗಿರುವ ಎಚ್‌ಪಿಎಸ್ ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಮತದಾನದ ದಿನದಂದು ಕರ್ತವ್ಯಕ್ಕೆ ನಿಯೋಜಿತ ಪೋಲಿಸ್ ಸಿಬ್ಬಂದಿಗಳು ಸಾಮಾನ್ಯವಾಗಿ ಅಂಚೆ ಮತದಾನ ವ್ಯವಸ್ಥೆಯ ಮೂಲಕ ತಮ್ಮ ಮತಗಳನ್ನು ಚಲಾಯಿಸುತ್ತಾರೆ. ‘ನಮ್ಮ ಅಂಚೆ ಮತಪತ್ರಗಳಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳು ಮತ್ತು ಆಡಳಿತ ಹಸ್ತಕ್ಷೇಪ ಮಾಡಿರುವ ಆತಂಕವಿದೆ ’ಎಂದು ಎಚ್‌ಪಿಎಸ್ ಅಧ್ಯಕ್ಷ ದಿಲಾವರ ಸಿಂಗ್ ಅವರು The Wire ಸುದ್ದಿಸಂಸ್ಥೆಗೆ ತಿಳಿಸಿದರು.

‘ನಿಯಮದಂತೆ ನಾವು ಫಾರ್ಮ್ 12ರಲ್ಲಿ ನಮ್ಮ ವಿವರಗಳನ್ನು ಭರ್ತಿ ಮಾಡಬೇಕು ಮತ್ತು ಚುನಾವಣಾ ಅಭ್ಯರ್ಥಿಗಳು ಅಥವಾ ಚುನಾವಣಾ ಏಜೆಂಟರ ಉಪಸ್ಥಿತಿಯಲ್ಲಿ ನಮ್ಮ ಮತಗಳನ್ನು ಚಲಾಯಿಸಬೇಕು’ ಎಂದು ತಿಳಿಸಿದ ಸಿಂಗ್, ‘ಆದರೆ ನಾವೇ ಖುದ್ದಾಗಿ ನಮ್ಮ ಮತಗಳನ್ನು ಚಲಾಯಿಸಲು ಅವಕಾಶ ನೀಡುವ ಬದಲು ಪೋಲಿಸರನ್ನು ಆಯಾ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಅಥವಾ ಜಿಲ್ಲಾ ಪೋಲಿಸ್ ಕೇಂದ್ರ ಕಚೇರಿಗೆ ಕರೆಸಲಾಗಿತ್ತು ಮತ್ತು ವಿವರಗಳೊಂದಿಗೆ ಅವರ ಫಾರ್ಮ್ 12 ಮತ್ತು ಮುದ್ರೆಯಿಲ್ಲದ ಮತಪತ್ರಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು’ ಎಂದು ಆರೋಪಿಸಿದರು.

ಫಾರ್ಮ್ 12 ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳು ಅಂಚೆ ಮತದಾನ ವ್ಯವಸ್ಥೆಯ ಮೂಲಕ ತಮ್ಮ ಮತಗಳನ್ನು ಚಲಾಯಿಸಲು ವಿಧ್ಯುಕ್ತ ಅರ್ಜಿ ನಮೂನೆಯಾಗಿದೆ.

ಎಚ್‌ಪಿಎಸ್ ರಾಜ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ,ಪೋಲಿಸ್ ಸಿಬ್ಬಂದಿಗಳ ಮತಗಳನ್ನು ‘ದೋಚಲಾಗಿದೆ’ ಎಂದು ಪ್ರತಿಪಾದಿಸಿದೆ. 2019ರ ಸಾರ್ವತ್ರಿಕ ಚುನಾವಣೆಗಳಲ್ಲಿಯೂ ಹಿರಿಯ ಪೋಲಿಸ್ ಅಧಿಕಾರಿಗಳು ಮತ್ತು ಆಡಳಿತ ಶಾಮೀಲಾಗಿದ್ದರು ಎಂದು ಅದು ದೂರಿನಲ್ಲಿ ಆರೋಪಿಸಿದೆ.

ತಮ್ಮ ಫಾರ್ಮ್‌ಗಳನ್ನು ವಿವರಗಳ ಸಹಿತ ಚುನಾವಣಾ ಕೋಶವಾಗಿಯೂ ಕಾರ್ಯ ನಿರ್ವಹಿಸುವ ಪೋಲಿಸ್ ಕಲ್ಯಾಣ ಇಲಾಖೆಗೆ ಸಲ್ಲಿಸುವಂತೆ ಹರ್ಯಾಣ ಡಿಜಿಪಿ ಕರ್ತವ್ಯದಲ್ಲಿದ್ದ ಎಲ್ಲ ಪೋಲಿಸ್ ಸಿಬ್ಬಂದಿಗಳಿಗೆ ಆದೇಶಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

‘2019ರಲ್ಲಿ ಅಂಚೆ ಮತದಾನದ ಅನುಭವದಿಂದಾಗಿ ಹಲವಾರು ಪೋಲಿಸ್ ಸಿಬ್ಬಂದಿಗಳು ಈ ಸಲ ಮತ ಚಲಾಯಿಸಲು ನಿರಾಕರಿಸಿದ್ದಾರೆ. ನಮ್ಮ ಫಾರ್ಮ್‌ಗಳು,ಆಧಾರ ಕಾರ್ಡ್‌ಗಳು ಮತ್ತು ಮತದಾರರ ಗುರುತು ಚೀಟಿಗಳನ್ನು ಎಸ್‌ಪಿ ಕಚೇರಿಯಲ್ಲಿ ಇರಿಸುವಂತೆ ಮಾಡಲಾಗಿತ್ತು. ಅದು ಮುಕ್ತ ಮತ್ತು ನ್ಯಾಯಸಮ್ಮತ ಮತದಾನವಲ್ಲ. ಈ ಸಲ ರೋಹ್ಟಕ್ ಜಿಲ್ಲೆಯೊಂದರಲ್ಲೇ 2,125 ಪೋಲಿಸರ ಪೈಕಿ ಕೇವಲ 148 ಜನರು ಮತ ಚಲಾಯಿಸಿದ್ದಾರೆ, ಇತರರು ಮತದಾನದಿಂದ ದೂರವುಳಿದಿದ್ದರು. ಎಸ್‌ಪಿ ಕಚೇರಿಯು ತಮ್ಮ ದಾಖಲೆಗಳನ್ನು ಸಂಗ್ರಹಿಸಿ ಅವುಗಳನ್ನು ನಿರ್ವಹಿಸುವಾಗ ಅವರೇಕೆ ಮತ ಚಲಾಯಿಸುತ್ತಾರೆ ’ಎಂದು ಸಿಂಗ್ ಪ್ರಶ್ನಿಸಿದರು.

ಎಚ್‌ಪಿಎಸ್ ತನ್ನ ದೂರು ಮತ್ತು ಪತ್ರಿಕಾ ಪ್ರಕಟಣೆಯೊಂದಿಗೆ ಮಹೇಂದ್ರಗಡ ಜಿಲ್ಲಾ ಪೋಲಿಸ್ ಅಧೀಕ್ಷಕರು ಇತ್ತೀಚಿಗೆ ಹೊರಡಿಸಿದ್ದ ನೋಟಿಸನ್ನು ಲಗತ್ತಿಸಿದೆ. ತಮ್ಮ ವಿವರಗಳೊಂದಿಗೆ ಫಾರ್ಮ್ 12 ಮತ್ತು ವೋಟರ್ ಐಡಿಯ ಪ್ರತಿಗಳನ್ನು ಎಸ್‌ಪಿ ಕಚೇರಿಯಲ್ಲಿಯ ಚುನಾವಣಾ ಕೋಶದಲ್ಲಿ ಠೇವಣಿಯಿರಿಸುವಂತೆ ಈ ನೋಟಿಸ್‌ನಲ್ಲಿ ಪೋಲಿಸ್ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲಾಗಿದೆ.

ಸುದ್ದಿಸಂಸ್ಥೆಯು ಎಸ್‌ಪಿ ಅರ್ಶ್ ವರ್ಮಾ ಅವರನ್ನು ಸಂಪರ್ಕಿಸಿದ್ದು,ಅಂಚೆ ಮತದಾನವನ್ನು ಸಂಪೂರ್ಣ ಗೋಪ್ಯತೆಯೊಂದಿಗೆ ನಡೆಸಲಾಗುತ್ತದೆ. ನೋಡಲ್ ಅಧಿಕಾರಿ ಈ ನೋಟಿಸ್ ಹೊರಡಿಸಿದ್ದು,ಈ ವಿಷಯದಲ್ಲಿ ಅವರು ಯಾವುದೇ ದೂರನ್ನು ಸ್ವೀಕರಿಸಿಲ್ಲ ಎಂದು ಸಮರ್ಥಿಸಿಕೊಂಡರು.

ಈ ನಡುವೆ ರಾಜ್ಯ ಚುನಾವಣಾ ಆಯೋಗದ ನೋಡಲ್ ಅಧಿಕಾರಿ ಮನೀಷ ಲೋಹಾನ್ ಅವರು,‘ಇಂತಹ ಯಾವುದೇ ದೂರಿನ ಬಗ್ಗೆ ನಮಗೆ ಗೊತ್ತಿಲ್ಲ ಮತ್ತು ಈ ವಿಷಯವನ್ನು ನಮ್ಮ ಗಮನಕ್ಕೆ ತಂದ ಬಳಿಕ ಪರಿಶೀಲನೆ ನಡೆಸುತ್ತೇವೆ ’ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News