ಮುಸ್ಲಿಂ ವಿದ್ಯಾರ್ಥಿಗೆ ಥಳಿಸುವಂತೆ ಮಾಡಿದ ಶಿಕ್ಷಕಿ ವಿರುದ್ಧ ಹಿಂದೂ ಮಕ್ಕಳ ಪೋಷಕರು ದೂರು ದಾಖಲಿಸಬೇಕು: ರವೀಶ್‌ ಕುಮಾರ್‌

Update: 2023-08-26 15:33 GMT

 ರವೀಶ್ ಕುಮಾರ್ | Photo: Twitter \ @ravishndtv

ಹೊಸದಿಲ್ಲಿ: ಮುಸ್ಲಿಂ ಸಹಪಾಠಿಗೆ ಕಪಾಳಮೋಕ್ಷ ಮಾಡಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ ಉತ್ತರ ಪ್ರದೇಶದ ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಆಗ್ರಹಿಸಿದ್ದಾರೆ

ಘಟನೆ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ ಅವರು, ಮಕ್ಕಳಲ್ಲಿ ಕೋಮು ದ್ವೇಷವನ್ನು ಉತ್ತೇಜಿಸುವ ಇಂತಹ ಘಟನೆಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

“ಶಿಕ್ಷಕಿ ತೃಪ್ತಿ ತ್ಯಾಗಿ ಅವರ ಒತ್ತಾಯಕ್ಕೆ ಮಣಿದು ತನ್ನದೇ ವಯಸ್ಸಿನ ಮುಸ್ಲಿಂ ವಿದ್ಯಾರ್ಥಿಯನ್ನು ಥಳಿಸಿದ ಮಗುವಿನ ಪೋಷಕರು, ಮುಂದೆ ಬಂದು ತಮ್ಮ ಅಮಾಯಕ ಮಗುವನ್ನು ಹಿಂದೂ ಹೆಸರಿನಲ್ಲಿ ದಂಗೆಕೋರನನ್ನಾಗಿ ಮಾಡುತ್ತಿದ್ದಾರೆ ಎಂದು ಶಿಕ್ಷಕಿ ವಿರುದ್ಧ ದೂರು ದಾಖಲಿಸಬೇಕು” ಎಂದು ಕರೆ ನೀಡಿದ್ದಾರೆ.

"ಕೋಮುವಾದವು ಮಕ್ಕಳನ್ನು ಮಾನವ ಬಾಂಬ್‌ಗಳನ್ನಾಗಿ ಮಾಡುತ್ತದೆ. ಹಲ್ಲೆಗೊಳಗಾದ ಮಗು ಈ ಆಘಾತದೊಂದಿಗೆ ತನ್ನ ಜೀವನವನ್ನು ಹೇಗೆ ಕಳೆಯುತ್ತದೆ ಎಂಬುದು ಯೋಚಿಸಬೇಕಾದ ವಿಷಯ. ನಮ್ಮೆಲ್ಲರ ಪ್ರೀತಿ ಅವನನ್ನು ತಲುಪಲಿ" ಎಂದು ಅವರು ಹೇಳಿದ್ದಾರೆ.

“ಯಾರ ಮನಸ್ಸಿನಲ್ಲಿ ಶಿಕ್ಷಕಿ ದ್ವೇಷದ ವಿಷವನ್ನು ತುಂಬಿದ್ದಾರೋ ಆ ಮಗುವಿಗೆ ನಮ್ಮೆಲ್ಲರ ಪ್ರೀತಿ ತಲುಪಲಿ, ದಂಗೆಕೋರನಾಗದೆ, ಆ ಮಗು ಕೂಡಾ ದ್ವೇಷದಿಂದ ಹೊರಬರಲಿ" ಎಂದು ರವೀಶ್‌ ಟ್ವೀಟ್‌ ಮಾಡಿದ್ದಾರೆ.

"ಪೋಷಕರು ತಮ್ಮ ಮಕ್ಕಳನ್ನು ಮುಸ್ಲಿಂ ವಿರೋಧಿ ಭಾವನೆಯ ಸೋಗಿನಲ್ಲಿ ದ್ವೇಷದ ಪ್ರತಿನಿಧಿಗಳನ್ನಾಗಿ ರೂಪಿಸುವ ಕಪಟ ಪ್ರಯತ್ನಗಳ ಬಗ್ಗೆ ಎಚ್ಚರದಿಂದಿರಬೇಕು ಮತ್ತು ಜಾಗೃತರಾಗಿರಬೇಕು." ಎಂದು ಅವರು ಹೇಳಿದ್ದಾರೆ.

"ವಿಭಜನೆಯ ವಿಷಯದ ಸೃಷ್ಟಿಕರ್ತರು ಸತತವಾಗಿ ಮುಸ್ಲಿಂ-ವಿರೋಧಿ ನಿರೂಪಣೆಗಳ ಮೂಲಕ ನಮ್ಮ ಮೇಲೆ ದಾಳಿ ಮಾಡಿದ್ದಾರೆ. ಆದಾಗ್ಯೂ, ಅವರ ಜೀವನವು‌ ಐಷಾರಾಮಿ ಕಾರುಗಳೊಂದಿಗೆ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತಿದೆ. ದ್ವೇಷವನ್ನು ಪ್ರಚಾರ ಮಾಡುವ ಈ ಭಯಾನಕ ವ್ಯವಹಾರವು ಗಣನೀಯ ಆರ್ಥಿಕ ಲಾಭವನ್ನು ಉಂಟುಮಾಡಿದೆ” ಎಂದು ಅವರು ಮಾಧ್ಯಮಗಳಲ್ಲಿ ದ್ವೇಷ ಹರಡುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News