ಪೇಟೆಂಟ್‌ಗಾಗಿ ಸಲ್ಲಿಸಿರುವ ದಾಖಲೆಗಳಲ್ಲಿ ಕೋವ್ಯಾಕ್ಸಿನ್ ಸಂಶೋಧಕ ಎಂದು ಭಾರತ ಬಯೊಟೆಕ್ ಹೆಸರು,ಐಸಿಎಂಆರ್ ಹೆಸರೇ ಇಲ್ಲ!

Update: 2024-06-22 10:09 GMT

Photo Credit: The Hindu

ಹೊಸದಿಲ್ಲಿ: ಭಾರತದ ಮೊದಲ ದೇಶಿಯ ಕೊರೋನವೈರಸ್ ಲಸಿಕೆ ಕೋವ್ಯಾಕ್ಸಿನ್ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಹೈದರಾಬಾದ್‌ನ ಭಾರತ ಬಯೊಟೆಕ್ ಇಂಟರ್‌ನ್ಯಾಷನಲ್ ಲಿ.(ಬಿಬಿಐಎಲ್)ನ ಜಂಟಿ ಸಹಭಾಗಿತ್ವದ ಯೋಜನೆಯಾಗಿತ್ತು ಮತ್ತು ಅದರ ಬೌದ್ಧಿಕ ಆಸ್ತಿ (ಐಪಿ) ಹಕ್ಕುಗಳನ್ನು ಉಭಯ ಸಂಸ್ಥೆಗಳು ಜಂಟಿಯಾಗಿ ಹಂಚಿಕೊಂಡಿದ್ದವು. ಹಾಗೆಂದು ಸರಕಾರಿ ದಾಖಲೆಯು ಹೇಳುತ್ತದೆ. ಆದಾಗ್ಯೂ ಬಿಬಿಐಎಲ್ ಕೋವ್ಯಾಕ್ಸಿನ್‌ನ ಪೇಟೆಂಟ್‌ಗಾಗಿ ಕೋರಿ ಭಾರತ,ಅಮೆರಿಕ ಮತ್ತು ಯುರೋಪ್‌ನ ಪೇಟೆಂಟ್ ಕಚೇರಿಗಳಲ್ಲಿ ಸಲ್ಲಿಸಿರುವ ದಾಖಲೆಗಳಲ್ಲಿ ಲಸಿಕೆಯನ್ನು ಆವಿಷ್ಕರಿಸಿದ ಹೆಗ್ಗಳಿಕೆಯನ್ನು ತನ್ನ ವಿಜ್ಞಾನಿಗಳು ಮತ್ತು ಉದ್ಯೋಗಿಗಳಿಗೆ ಮಾತ್ರ ನೀಡಿದೆ,ಅದು ಐಸಿಎಂಆರ್ ವಿಜ್ಞಾನಿಗಳನ್ನು ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು thehindu.com ವರದಿ ಮಾಡಿದೆ.

ಸುದ್ದಿಸಂಸ್ಥೆಯು ಈ ದಾಖಲೆಗಳನ್ನು ಪರಿಶೀಲಿಸಿದೆ. ಅವುಗಳಲ್ಲಿ ತೋರಿಸಿರುವಂತೆ ಬಿಬಿಐಎಲ್‌ನ ಅಧ್ಯಕ್ಷ ಹಾಗೂ ಸ್ಥಾಪಕ ಕೃಷ್ಣಮೂರ್ತಿ ಎಲ್ಲಾ ಮತ್ತು ಉದ್ಯೋಗಿ ದೀಪಕ್ ಕುಮಾರ್ ಮಾತ್ರ ನಿಜಕ್ಕೂ ಕೋವ್ಯಾಕ್ಸಿನ್‌ನ ಸಂಶೋಧಕರಾಗಿದ್ದರೆ ಅದು ಐಸಿಎಂಆರ್‌ನ ನೋಡಲ್ ಸಚಿವಾಲಯವಾಗಿರುವ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಸಭೆಯಲ್ಲಿ ನೀಡಿದ್ದ ಹೇಳಿಕೆಗೆ ವಿರುದ್ಧವಾಗುತ್ತದೆ.

ಜುಲೈ 2021ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕೇಳಿದ್ದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಆಗಿನ ಸಹಾಯಕ ಆರೋಗ್ಯ ಸಚಿವೆ ಭಾರತಿ ಪ್ರವೀಣ ಪವಾರ್ ಅವರು,ಐಸಿಎಂಆರ್ ಮತ್ತು ಬಿಬಿಐಎಲ್ ಕೋವ್ಯಾಕ್ಸಿನ್‌ನ ಬೌದ್ಧಿಕ ಆಸ್ತಿ ಹಕ್ಕುಗಳ ಜಂಟಿ ಒಡೆತನವನ್ನು ಹೊಂದಿವೆ ಎಂದು ಸ್ಪಷ್ಟಪಡಿಸಿದ್ದರು. ಒಪ್ಪಂದಕ್ಕನುಗುಣವಾಗಿ ಬಿಬಿಐಎಲ್ ಲಸಿಕೆಯ ನಿವ್ವಳ ಮಾರಾಟ ಮೊತ್ತದ ಶೇ.5ರಷ್ಟನ್ನು ಐಸಿಎಂಆರ್‌ಗೆ ರಾಯಧನವಾಗಿ ಪ್ರತಿ ಆರು ತಿಂಗಳಿಗೆ ಪಾವತಿಸುತ್ತದೆ ಎಂದೂ ಅವರು ತಿಳಿಸಿದ್ದರು.

ತಾನು ಕೋವ್ಯಾಕ್ಸಿನ್ ಅಭಿವೃದ್ಧಿಗಾಗಿ ಬಿಬಿಐಎಲ್‌ಗೆ ಆರ್ಥಿಕ ನೆರವನ್ನು ಒದಗಿಸಿರದಿದ್ದರೂ ತನ್ನ ಅಧೀನದ ಸಂಸ್ಥೆಗಳಲ್ಲೊಂದಾಗಿರುವ ಪುಣೆಯ ಐಸಿಎಂಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ)ಯು ಕೋವ್ಯಾಕ್ಸಿನ್ ಅಭಿವೃದ್ಧಿಗಾಗಿ ಹಣವನ್ನು ವೆಚ್ಚ ಮಾಡಿತ್ತು ಎಂದು ಐಸಿಎಂಆರ್ ಹೇಳಿದೆ. ಅದು 25 ಸ್ಥಳಗಳಲ್ಲಿ ಕೋವ್ಯಾಕ್ಸಿನ್‌ನ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ಗಳಿಗಾಗಿಯೂ ಹಣವನ್ನು ಒದಗಿಸಿತ್ತು. ಒಟ್ಟಾರೆಯಾಗಿ ಲಸಿಕೆಯ ಅಭಿವೃದ್ಧಿಗಾಗಿ ಐಸಿಎಂಆರ್ 35 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಜನವರಿ 2022ಕ್ಕೆ ಇದ್ದಂತೆ ಅದು ಕೋವ್ಯಾಕ್ಸಿನ್‌ಗಾಗಿ ರಾಜಧನವಾಗಿ 171 ಕೋಟಿ ರೂ.ಗಳನ್ನು ಸ್ವೀಕರಿಸಿದೆ.

ಪವಾರ್ ರಾಜ್ಯಸಭೆಯಲ್ಲಿ ನೀಡಿದ್ದ ಉತ್ತರದಲ್ಲಿ ಪೇಟೆಂಟ್ ಹಕ್ಕುಗಳ ಹಂಚಿಕೆಯ ಬಗ್ಗೆ ವಿವರಿಸಿರಲಿಲ್ಲ. ಹಲವಾರು ವರ್ಷಗಳಿಂದ ಸರಕಾರಿ ಸಂಶೋಧನಾ ಸಂಸ್ಥೆಗಳಾದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್) ಮತ್ತು ಐಸಿಎಂಆರ್ ಜೊತೆ ಹಲವು ಸಂಶೋಧನಾ ಸಹಯೋಗಗಳನ್ನು ಹೊಂದಿರುವ ಬಿಬಿಐಎಲ್ ಪೇಟೆಂಟ್ ಅರ್ಜಿಗಳಲ್ಲಿ ಎಲ್ಲ ಸಂಸ್ಥೆಗಳ ವಿಜ್ಞಾನಿಗಳನ್ನು ‘ಸಂಶೋಧಕರು’ ಎಂದು ಪಟ್ಟಿ ಮಾಡಿದೆ.

ಭಾರತ ಬಯೊಟೆಕ್ ಸಲ್ಲಿಸಿರುವ ಪೇಟೆಂಟ್ ಅರ್ಜಿಯು ಕೇವಲ ‘ಪ್ರಕ್ರಿಯೆ ಅಭಿವೃದ್ಧಿ’ ಗಾಗಿದೆ ಮತ್ತು ಲಸಿಕೆ ತಯಾರಿಕೆಗೆ ನಿರ್ದಿಷ್ಟವಾಗಿದೆ. ಅದು ಕಾನ್ಸಾಸ್‌ನ ವೈರೊವ್ಯಾಕ್ಸ್‌ನಿಂದ ಪರವಾನಿಗೆಯಡಿ ಲಸಿಕೆಯಿಂದ ಪ್ರಬಲ ಪ್ರತಿಕ್ರಿಯೆ ಪಡೆಯಲು ಕೋವ್ಯಾಕ್ಸಿನ್‌ಗೆ ಸೇರಿಸಲಾದ ಘಟಕದ ಬಳಕೆಯನ್ನೂ ಒಳಗೊಂಡಿದೆ ಎಂದು ಬಿಬಿಐಎಲ್ ವಕ್ತಾರರು ತಿಳಿಸಿದರು.

ಕೋವ್ಯಾಕ್ಸಿನ್ ಲಸಿಕೆಯ ಅಭಿವೃದ್ಧಿಯ ಎಲ್ಲ ಹಂತಗಳಲ್ಲೂ ಐಸಿಎಂಆರ್ ನಿಕಟವಾಗಿ ಒಳಗೊಂಡಿದ್ದು ತಿಳಿದಿರುವ ವಿಷಯವೇ ಆಗಿದೆ.

ಇದೀಗ ಬಿಬಿಐಎಲ್ ಸಲ್ಲಿಸಿರುವ ಪೇಟೆಂಟ್ ಅರ್ಜಿಯು ಕೆಲವು ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬೌದ್ಧಿಕ ಆಸ್ತಿಯು ಜಂಟಿ ಒಡೆತನದಲ್ಲಿದ್ದರೆ ಪೇಟೆಂಟ್ ಅರ್ಜಿಯಲ್ಲಿ ಎಲ್ಲ ಸಂಶೋಧಕರನ್ನು ನಮೂದಿಸುವ ಅಗತ್ಯವಿದೆ. ಉದಾಹರಣೆಗೆ ಅಮೆರಿಕದಲ್ಲಿ ಎಲ್ಲ ಸಂಶೋಧಕರನ್ನು ನಮೂದಿಸದಿರುವುದು ಪೇಟೆಂಟ್ ನಿರಾಕರಣೆಗೆ ಬಲವಾದ ಕಾರಣವಾಗಿದೆ.

ಹಿಂದೆ ಸಿಎಸ್‌ಐಆರ್‌ನಲ್ಲಿ ಬೌದ್ಧಿಕ ಆಸ್ತಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದ ಡಾ.ಝಾಕಿರ್ ಥಾಮಸ್ ಅವರು,ಬೌದ್ಧಿಕ ಆಸ್ತಿಯು ವಿಶಾಲ ಅರ್ಥವನ್ನು ಹೊಂದಿರುವ ಪದವಾಗಿದ್ದು,ಒಂದು ಮಾತ್ರ ಪೇಟೆಂಟ್ ಆಗಿದೆ. ಜಂಟಿ ಒಡೆತನದ ಅರ್ಥವೇನು ಮತ್ತು ತಾನು ಲಸಿಕೆ ಅಭಿವೃದ್ಧಿಯಲ್ಲಿ ಸಹಭಾಗಿತ್ವ ಹೊಂದಿದ್ದೇನೆಯೇ ಎಂಬ ಕುರಿತು ಐಸಿಎಂಆರ್ ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News