ಅದಾನಿ ಗ್ರೂಪ್ ಬಗ್ಗೆ ವರದಿ ಮಾಡಿದ ಪತ್ರಕರ್ತನ ಫೋನ್‌ಗೆ ಪೆಗಾಸಸ್ ಮೂಲಕ ಕನ್ನ

Update: 2023-11-08 14:41 GMT

ಹೊಸದಿಲ್ಲಿ: ಶೇರುಗಳ ಬೆಲೆಗಳಲ್ಲಿ ಅದಾನಿ ಗ್ರೂಪ್ ಮಾಡುತ್ತಿದೆಯೆನ್ನಲಾದ ಹಸ್ತಕ್ಷೇಪದ ಬಗ್ಗೆ ವರದಿ ಮಾಡಿರುವ ಭಾರತೀಯ ಪತ್ರಕರ್ತರೊಬ್ಬರ ಸ್ಮಾರ್ಟ್‌ಫೋನ್‌ಗೆ ಪೆಗಾಸಸ್ ಬೇಹುಗಾರಿಕಾ ತಂತ್ರಾಂಶದ ಮೂಲಕ ಆಗಸ್ಟ್‌ನಲ್ಲಿ ಕನ್ನ ಹಾಕಲಾಗಿದೆ ಎಂದು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿಗಾರಿಕೆ ಯೋಜನೆಯ ಸಹ ಸಂಸ್ಥಾಪಕ ಡ್ರೂ ಸಲಿವಾನ್ ಮಂಗಳವಾರ ‘ರಾಯ್ಟರ್ಸ್’ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ಈ ಪತ್ರಕರ್ತ ಆನಂದ್ ಮಂಗ್ನಾಲೆ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿಗಾರಿಕೆ ಯೋಜನೆಗಾಗಿ ಕೆಲಸ ಮಾಡುತ್ತಿದ್ದಾರೆ.

ಕನ್ನಗಾರರು ಇಸ್ರೇಲ್‌ನ ಸೈಬರ್ ಬೇಹುಗಾರಿಕಾ ಕಂಪೆನಿ ಎನ್‌ಎಸ್‌ಒ ಸಿದ್ಧಪಡಿಸಿರುವ ಬೇಹುಗಾರಿಕಾ ತಂತ್ರಾಂಶವನ್ನು ಆನಂದ್ ಮಂಗ್ನಾಲೆಯ ಐಪೋನ್‌ನಲ್ಲಿ ಸ್ಥಾಪಿಸಲು ಪ್ರಯತ್ನಿಸಿದ್ದಾರೆ ಎಂದು ಸಲಿವಾನ್ ಆರೋಪಿಸಿದರು.

ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿಗಾರಿಕೆ ಯೋಜನೆಯ ನಡೆಸಿರುವ ಆಂತರಿಕ ವಿಧಿವಿಜ್ಞಾನ ತನಿಖೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಪತ್ರಕರ್ತ ಆನಂದ್‌ರ ಐಫೋನ್ ಮೇಲೆ ನಡೆದ ಸೈಬರ್ ದಾಳಿ ಮತ್ತು ಎನ್‌ಎಸ್‌ಒದ ಪೆಗಾಸಸ್ ಹ್ಯಾಕಿಂಗ್ ಟೂಲ್ ನಡುವೆ ನಂಟಿದೆ ಎನ್ನುವುದು ಬೆಳಕಿಗೆ ಬಂದಿದೆ.

ಕನ್ನಗಾರರು ಪೆಗಾಸಸ್ ತಂತ್ರಾಂಶ ಬಳಿ ಫೋನ್ ಕರೆಗಳನ್ನು ಮುದ್ರಿಸಿಕೊಳ್ಳಬಹುದಾಗಿದೆ, ಸಂದೇಶಗಳನ್ನು ತಡೆಹಿಡಿಯಬಹುದಾಗಿದೆ ಮತ್ತು ಸಂತ್ರಸ್ತರ ಫೋನ್‌ಗಳನ್ನು ಚಲಿಸುವ ಗೂಢಚಾರಿಕೆ ಸಾಧನವಾಗಿ ಬಳಸಿಕೊಳ್ಳಬಹುದಾಗಿದೆ. ಈ ಬೇಹುಗಾರಿಕೆ ತಂತ್ರಾಂಶವನ್ನು ಜಗತ್ತಿನ ಸರಕಾರಗಳಿಗೆ ಮಾತ್ರ ಅದರ ತಯಾರಕ ಕಂಪೆನಿಯು ಮಾರಾಟ ಮಾಡುತ್ತದೆ.

‘‘ವರದಿಗಾರರ ಮೇಲೆ ಸರಕಾರ ನಡೆಸುತ್ತಿರುವ ಈ ಮಾದರಿಯ ಬೇಹುಗಾರಿಕೆಗೆ, ರಾಜಕೀಯ ಕಾರಣವಲ್ಲದೆ ಬೇರೆ ಯಾವುದೇ ಸ್ವೀಕಾರಾರ್ಹ ವಿವರಣೆ ಇರಲು ಸಾಧ್ಯವಿಲ್ಲ’’ ಎಂದು ‘ರಾಯ್ಟರ್ಸ್’ನೊಂದಿಗೆ ಮಾತನಾಡಿದ ಸಲಿವಾನ್ ಹೇಳಿದರು.

‘‘ಸರಕಾರದ ಈ ಕೃತ್ಯ ಅಸ್ವೀಕಾರಾರ್ಹ ಮತ್ತು ಆಕ್ರೋಶಕಾರಕ’’ ಎಂದು ಅವರು ಬಣ್ಣಿಸಿದರು.

ಶೇರುಗಳ ಬೆಲೆಗಳಲ್ಲಿ ಅದಾನಿ ಗುಂಪು ನಡೆಸುತ್ತಿದೆಯೆನ್ನಲಾದ ಹಸ್ತಕ್ಷೇಪದ ಬಗ್ಗೆ ಪತ್ರಕರ್ತರಾದ ರವಿ ನಾಯರ್ ಮತರ್ತು ಆನಂದ್ ಮಂಗ್ನಾಲೆ ಬರೆದ ವರದಿಯೊಂದನ್ನು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿಗಾರಿಕೆ ಯೋಜನೆಯು ಆಗಸ್ಟ್‌ನಲ್ಲಿ ಪ್ರಕಟಿಸಿತ್ತು. ಅದಾನಿ ಗುಂಪಿಗೆ ವಿದೇಶಗಳ ಫಂಡ್‌ಗಳ ಮೂಲಕ ನೂರಾರು ಕೋಟಿ ಡಾಲರ್‌ಗಳನ್ನು ಹರಿಸುತ್ತಿರುವ ಇಬ್ಬರು ಹೂಡಿಕೆದಾರರು ಗುಂಪಿನ ಮಾಲೀಕರೊಂದಿಗೆ ನಿಕಟ ಸಂಬಂಧಗಳನ್ನು ಹೊಂದಿದ್ದಾರೆ ಎಂಬುದಾಗಿ ವರದಿಯು ಆರೋಪಿಸಿತ್ತು.

ಭಾರತೀಯ ಶೇರು ಮಾರುಕಟ್ಟೆ ನಿಯಮಗಳ ಉಲ್ಲಂಘನೆಯಾಗಿರುವ ಸಾಧ್ಯತೆಯಿದೆ ಎಂಬುದಾಗಿಯೂ ವರದಿ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News