ಕರ್ನಾಟಕ-ತಮಿಳುನಾಡು ನಡುವಿನ ಪೆನ್ನಯ್ಯರ್ ನದಿ ನೀರು ವಿವಾದ: ವಿಚಾರಣೆಯಿಂದ ಹಿಂದೆಸರಿದ ಸುಪ್ರೀಂಕೋರ್ಟ್ ನ್ಯಾಯಪೀಠ
ಹೊಸದಿಲ್ಲಿ: ಪೆನ್ನಯ್ಯರ್ ನದಿಯಲ್ಲಿ ನಿರ್ಮಾಣ ಕಾಮಗಾರಿಗಳನ್ನು ನಡೆಸುವ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ಎಮ್.ಎಮ್. ಸುಂದರೇಶ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠವೊಂದು ಬುಧವಾರ ಹಿಂದೆ ಸರಿದಿದೆ. ನ್ಯಾಯಮೂರ್ತಿ ಬೋಪಣ್ಣ ಕರ್ನಾಟಕದವರಾಗಿದ್ದರೆ, ನ್ಯಾಯಮೂರ್ತಿ ಸುಂದರೇಶ್ ತಮಿಳುನಾಡಿನವರು.
ಕರ್ನಾಟಕದ ವಿರುದ್ಧ ತಮಿಳುನಾಡು ಸಲ್ಲಿಸಿದ ಮೊಕದ್ದಮೆಯನ್ನು ಈ ಪೀಠವು ಮುಖ್ಯ ನ್ಯಾಯಾಧೀಶರಿಗೆ ಹಿಂದಿರುಗಿಸಿತು. ಇನ್ನು ಮುಖ್ಯ ನ್ಯಾಯಾಧೀಶರು ಈ ಮೊಕದ್ದಮೆಯ ವಿಚಾರಣೆಗೆ ಇನ್ನೊಂದು ನ್ಯಾಯಪೀಠವನ್ನು ರಚಿಸುತ್ತಾರೆ.
ಕಾವೇರಿ ಹುಟ್ಟು ಮಡಿಕೇರಿಗೆ ಸೇರಿದ್ದಾಗಿ ನ್ಯಾ. ಬೋಪಣ್ಣ ಹೇಳಿದ್ದಾರೆ. 1956ರ ಅಂತರ್ ರಾಜ್ಯ ಜಲ ವಿವಾದಗಳ ಕಾಯ್ದೆಯಡಿ ಪೆನ್ನಯ್ಯರ್ ಜಲ ವಿವಾದ ನ್ಯಾಯಮಂಡಳಿಯನ್ನು ರಚಿಸುವ ಪ್ರಸ್ತಾವವೊಂದನ್ನು ಕೇಂದ್ರ ಸರಕಾರದ ಪರಿಶೀಲನೆ ಮತ್ತು ಅನುಮೋದನೆಗಾಗಿ ಸಂಪುಟ ಕಾರ್ಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಜಲ ಶಕ್ತಿ ಸಚಿವಾಲಯವು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿದಾವಿತ್ನಲ್ಲಿ ತಿಳಿಸಿದೆ.
‘‘ಈ ವಿಷಯದಲ್ಲಿ ಅಂತಿಮ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟವು ಇನ್ನಷ್ಟೇ ತೆಗೆದುಕೊಳ್ಳಬೇಕಾಗಿದೆ’’ ಎಂದು ಸಚಿವಾಲಯ ತಿಳಿಸಿದೆ.
ಕರ್ನಾಟಕವು ಪೆನ್ನಯ್ಯರ್ ನದಿಯಲ್ಲಿ ಚೆಕ್ ಡ್ಯಾಮ್ಗಳನ್ನು ನಿರ್ಮಿಸುವುದನ್ನು ಮತ್ತು ಇತರ ನಿರ್ಮಾಣ ಕಾಮಗಾರಿಗಳನ್ನು ನಡೆಸುವುದನ್ನು ಆಕ್ಷೇಪಿಸಿ ತಮಿಳುನಾಡು 2018ರಲ್ಲಿ ಸುಪ್ರೀಂ ಕೋರ್ಟ್ಗೆ ಹೋಗಿತ್ತು. ತಮಿಳುನಾಡು ಜನರ ಹಿತಾಸಕ್ತಿಗೆ ವಿರುದ್ಧವಾಗಿ ಪೆನ್ನಯ್ಯರ್ ನದಿಯ ನೀರನ್ನು ಬಳಸಲು ಕರ್ನಾಟಕಕ್ಕೆ ಹಕ್ಕಿಲ್ಲ ಎಂದು ಅದು ವಾದಿಸಿತ್ತು. ಹಲವು ರಾಜ್ಯಗಳ ಮೂಲಕ ಹರಿಯುವ ನದಿಯು ರಾಷ್ಟ್ರೀಯ ಸಂಪತ್ತಾಗಿದೆ ಹಾಗೂ ಅದರ ನೀರಿನ ಸಂಪೂರ್ಣ ಒಡೆತನ ತನಗೆ ಸೇರಿದ್ದೆಂದು ಯಾವುದೇ ಒಂದು ರಾಜ್ಯ ಹೇಳಿಕೊಳ್ಳುವಂತಿಲ್ಲ ಎಂದು ತಮಿಳುನಾಡು ಹೇಳಿತ್ತು.