ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸಾಧ್ಯತೆಯನ್ನು ತಳ್ಳಿ ಹಾಕಿದ ಮಾಯಾವತಿ
ಹೊಸದಿಲ್ಲಿ: ಲೊಕಸಭಾ ಚುನಾವಣೆಯಲ್ಲಿ ಯಾವುದೇ ಚುನಾವಣಾಪೂರ್ವ ಮೈತ್ರಿ ಸಾಧ್ಯತೆಯನ್ನು ತಳ್ಳಿ ಹಾಕಿರುವ ಬಿಎಸ್‌ಪಿ ವರಿಷ್ಠೆ ಮಾಯಾವತಿ, ತಮ್ನ ಪಕ್ಷ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪುನರುಚ್ಚರಿಸಿದ್ದಾರೆ.
"ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್‌ಪಿ ಪದೇ ಪದೇ ಸ್ಪಷ್ಟೀಕರಣ ನೀಡುತ್ತಿದ್ದರೂ, ಮೈತ್ರಿಯ ಬಗ್ಗೆ ವದಂತಿಗಳನ್ನು ಹರಡಲಾಗುತ್ತಿದೆ. ಇದರಿಂದ ಕೆಲವು ಪಕ್ಷಗಳಿಗೆ ಬಿಎಸ್‌ಪಿ ಇಲ್ಲದೆ ನೆಮ್ಮದಿ ಇಲ್ಲ ಎಂಬುದು ರುಜುವಾತಾಗಿದೆ. ನಮಗೆ ನಮ್ಮ ಜನರ ಕಲ್ಯಾಣವೇ ಮೊದಲ ಆದ್ಯತೆ" ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಾಯಾವತಿ ಪೋಸ್ಟ್ ಮಾಡಿದ್ದಾರೆ.
"ಹೀಗಾಗಿ ಸರ್ವಜನ ಸಮಾಜದ ಹಿತಾಸಕ್ತಿ ಹಾಗೂ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಬಡವರು, ದಮನಿತರು ಹಾಗೂ ನಿರ್ಲಕ್ಷಿತ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ ಇರುವ ನಮ್ಮ ಜನರ ತನು, ಮನ ಹಾಗೂ ಧನದ ಬಲದೊಂದಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಲಾಗಿದೆ. ಜನರು ವದಂತಿಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು" ಎಂದೂ ಅವರು ಹೇಳಿದ್ದಾರೆ.
ಈ ಹಿಂದೆ ಕೂಡಾ ಮುಂಬರುವ ಲೋಕಸಭಾ ಚುನಾವಣೆ ಕುರಿತು ತಮ್ಮ ಪಕ್ಷದ ನಿಲುವನ್ನು ಪುನರುಚ್ಚರಿಸಿದ್ದ ಮಾಯಾವತಿ, ತಮ್ಮ ಪಕ್ಷವು ಸಾರ್ವತ್ರಿಕ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದ್ದರು.