75 ಕೋಟಿ ಭಾರತೀಯರ ʼಆಧಾರ್ʼ ಸಹಿತ ವೈಯುಕ್ತಿಕ ಮಾಹಿತಿ ಮಾರಾಟಕ್ಕಿದೆ!
ಹೊಸದಿಲ್ಲಿ : ಸುಮಾರು 75 ಕೋಟಿ ಭಾರತೀಯರ ಆಧಾರ್ ವಿವರಗಳು ಮತ್ತು ಮೊಬೈಲ್ ಫೋನ್ ಸಂಖ್ಯೆಗಳಂತಹ ವೈಯಕ್ತಿಕ ಡೇಟಾವನ್ನು ಆನ್ಲೈನ್ನಲ್ಲಿ ಮಾರಾಟಕ್ಕೆ ಇರಿಸಲಾಗಿದೆ ಎಂದು ಡಿಜಿಟಲ್ ಅಪಾಯ ವಿಶ್ಲೇಷಣೆ ಕಂಪನಿ ಕ್ಲೌಡ್ಸೆಕ್ ಬುಧವಾರ ವರದಿಯಲ್ಲಿ ತಿಳಿಸಿದೆ ಎಂದು scroll.in ವರದಿ ಮಾಡಿದೆ.
ಮಂಗಳವಾರದಂದು ಸಮಗ್ರ ಮೊಬೈಲ್ ನೆಟ್ವರ್ಕ್ ಗ್ರಾಹಕ ಡೇಟಾಬೇಸ್ನ ಮಾರಾಟವನ್ನು ಉತ್ತೇಜಿಸುವ "ಭೂಗತ ವೇದಿಕೆ" ಯಲ್ಲಿ ಸೈಬೋಡೆವಿಲ್ ಎಂಬ ಹ್ಯಾಕರ್ ಮಾರಾಟ ಕುರಿತ ಪೋಸ್ಟ್ ಮಾಡಿರುವುದನ್ನು ಡಿಜಿಟಲ್ ಅಪಾಯ ಸಂರಕ್ಷಣಾ ವೇದಿಕೆ ಕಂಡುಹಿಡಿದಿದೆ ಎಂದು ಕಂಪನಿ ಹೇಳಿದೆ.
ಟೆಲಿಗ್ರಾಮ್ನಲ್ಲಿ ಜನವರಿ 14 ರಂದು UNIT8200 ಎಂಬ ಹೆಸರಿನ ಇನ್ನೊಬ್ಬ ಹ್ಯಾಕರ್ ಕೂಡ ಇದೇ ರೀತಿಯ ಪೋಸ್ಟ್ ಮಾಡಿದ್ದಾನೆ ಎಂದು ಅದು ಹೇಳಿದೆ.
ಮೊಬೈಲ್ ಬಳಕೆದಾರರ ಹೆಸರು, ಅವರ ಫೋನ್ ಸಂಖ್ಯೆಗಳು, ವಿಳಾಸಗಳು, ಆಧಾರ್ ವಿವರಗಳು ಮತ್ತು ಅವರ ಕುಟುಂಬ ಸದಸ್ಯರ ಹೆಸರುಗಳನ್ನು ಈ ಮಾಹಿತಿ ಹೊಂದಿದೆ ಎಂದು ಆರೋಪಿಸಲಾಗಿದೆ.
ಮಾಹಿತಿಯನ್ನು ಉಲ್ಲಂಘಿಸಿದ ನಿಖರವಾದ ಮಾರ್ಗವು ಸ್ಪಷ್ಟವಾಗಿಲ್ಲ ಎಂದು ಕಂಪೆನಿ ಹೇಳಿದೆ. ಆದರೆ ಹ್ಯಾಕರ್ ಗಳು ಸರ್ಕಾರಿ ಡೇಟಾಬೇಸ್ಗಳು ಅಥವಾ ದೂರಸಂಪರ್ಕ ವ್ಯವಸ್ಥೆಗಳಲ್ಲಿನ ದುರ್ಬಲತೆಗಳನ್ನು ಬಳಸಿಕೊಂಡಿರುವ ಸಾಧ್ಯತೆ ಹೆಚ್ಚಿದೆ ಎಂದು ಕಂಪೆನಿ ಹೇಳಿದೆ.