ಪಿಯಾನೋ ವಾದಕ ಡೇನಿಯಲ್, ಶಾಂತಿ ಕಾರ್ಯಕರ್ತ ಅಬು ಅವ್ವಾದ್ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಗೆ ಆಯ್ಕೆ

Update: 2023-12-14 17:28 GMT

ಡೇನಿಯಲ್ ಬ್ಯಾರೆನ್ಬೋಯಿಮ್, ಅಲಿ ಅಬು ಅವ್ವಾದ್ | Photo: hindustantimes.com

ಹೊಸದಿಲ್ಲಿ: ಇಸ್ರೇಲ್-ಫೆಲೆಸ್ತೀನ್ ಬಿಕ್ಕಟ್ಟಿಗೆ ಅಹಿಂಸಾತ್ಮಕ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳಿಗಾಗಿ ಅರ್ಜೆಂಟಿನಾ ಸಂಜಾತ ಖ್ಯಾತ ಪಿಯಾನೋ ವಾದಕ ಹಾಗೂ ವಾದ್ಯಗೋಷ್ಠಿಗಳ ನಿರ್ವಾಹಕ ಡೇನಿಯಲ್ ಬ್ಯಾರೆನ್ಬೋಯಿಮ್ ಮತ್ತು ಫೆಲಸ್ತೀನ್ನ ಶಾಂತಿ ಕಾರ್ಯಕರ್ತ ಅಲಿ ಅಬು ಅವ್ವಾದ್ ಅವರನ್ನು ಶಾಂತಿ, ನಿಶ್ಶಸ್ತ್ರೀಕರಣ ಮತ್ತು ಅಭಿವೃದ್ಧಿಗಾಗಿ ಈ ವರ್ಷದ ಇಂದಿರಾ ಗಾಂಧಿ ಪ್ರಶಸ್ತಿಗೆ ಜಂಟಿಯಾಗಿ ಆಯ್ಕೆ ಮಾಡಲಾಗಿದೆ.

ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶ ಟಿ.ಎಸ್.ಠಾಕೂರ್ ನೇತೃತ್ವದ ಶಾಂತಿ, ನಿಶ್ಶಸ್ತ್ರೀಕರಣ ಮತ್ತು ಅಭಿವೃದ್ಧಿಗಾಗಿ ಇಂದಿರಾ ಗಾಂಧಿ ಪ್ರಶಸ್ತಿಯ ಜ್ಯೂರಿಗಳ ಸಮಿತಿಯು 2023ರ ಪ್ರಶಸ್ತಿಯನ್ನು ಬ್ಯಾರೆನ್ಬೋಯಿಮ್ ಮತ್ತು ಅವ್ವಾದ್ ಅವರಿಗೆ ಘೋಷಿಸಿದೆ. ಶಾಂತಿಯ ಪ್ರತಿಪಾದಕರಾಗಿರುವ ಇವರಿಬ್ಬರೂ ಸಂಗೀತ, ಮಾತುಕತೆ ಮತ್ತು ಜನರ ಸಹಭಾಗಿತ್ವದ ಮೂಲಕ ಇಸ್ರೇಲಿ ಮತ್ತು ಫೆಲೆಸ್ತೀನಿ ಜನತೆಯ ನಡುವೆ ಸಾಮರಸ್ಯವನ್ನು ಉತ್ತೇಜಿಸಲು ತಮ್ಮ ಬದುಕುಗಳನ್ನೇ ಮುಡುಪಾಗಿರಿಸಿದ್ದಾರೆ ಎಂದು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಹೇಳಿಕೆಯಲ್ಲಿ ತಿಳಿಸಿದೆ.

ಪಿಯಾನೋ ವಾದನದ ಜೊತೆಗೆ ವಿಶ್ವದ ಕೆಲವು ಪ್ರಮುಖ ವಾದ್ಯಗೋಷ್ಠಿಗಳನ್ನು ನಿರ್ವಹಿಸುವ ಮೂಲಕ ಖ್ಯಾತಿಯನ್ನು ಪಡೆದಿರುವ ಬ್ಯಾರೆನ್ಬೋಯಿಮ್ ಅವರು ಸಂಗೀತ ಕ್ಷೇತ್ರದಲ್ಲಿ ಸಾಧನೆಗಳ ಜೊತೆಗೆ ಪಶ್ಚಿಮ ಏಶ್ಯಾದಲ್ಲಿ ಸಾಮರಸ್ಯವನ್ನು ಬೆಸೆಯಲು ತನ್ನ ಸಂಗೀತವನ್ನು ಸಾಧನವನ್ನಾಗಿ ಮಾಡಿಕೊಂಡು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಫೆಲೆಸ್ತೀನಿ ವಿದ್ವಾಂಸ ಎಡ್ವರ್ಡ್ ಸೈದ್ ಅವರೊಂದಿಗಿನ ಗೆಳೆತನ ಮತ್ತು ಸಹಭಾಗಿತ್ವವು ಪರಸ್ಪರ ಗೌರವ ಮತ್ತು ಮಾತುಕತೆಯ ಮೂಲಕ ಇಸ್ರೇಲ್-ಫೆಲೆಸ್ತೀನ್ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳುವ ಅವರ ಪರಿಕಲ್ಪನೆಗೆ ರೂಪ ನೀಡಿತ್ತು.

1972ರಲ್ಲ ರಾಜಕೀಯ ಸಕ್ರಿಯವಾಗಿದ್ದ ನಿರಾಶ್ರಿತ ಕುಟುಂಬದಲ್ಲಿ ಜನಿಸಿದ್ದ ಅವ್ವಾದ್ ಮಧ್ಯಪ್ರಾಚ್ಯದಲ್ಲಿನ ಪ್ರಸಕ್ತ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಲು ಅವಿರತವಾಗಿ ಪ್ರಯತ್ನಿಸುತ್ತಿದ್ದಾರೆ. ಮೂರು ವರ್ಷಗಳ ಕಾಲ ಜೈಲಿನಲ್ಲಿದ್ದಾಗ ಪರಸ್ಪರ ಭೇಟಿಯಾಗಲು ಸಾಧ್ಯವಾಗದೆ ಅಲಿ ಮತ್ತು ಅವರ ತಾಯಿ 17 ದಿನಗಳ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು. ಇದರ ಪರಿಣಾಮವಾಗಿ ತಾಯಿ-ಮಗನ ಭೇಟಿಗೆ ಅನುಮತಿ ಲಭಿಸಿತ್ತು. ಈ ಅಹಿಂಸಾ ಮಾರ್ಗವನ್ನು ಮತ್ತು ಗಾಂಧಿ ತತ್ತ್ವಗಳನ್ನು ಸ್ವಾತಂತ್ರ್ಯ ಮತ್ತು ಘನತೆಯ ತನ್ನ ಗುರಿಸಾಧನೆಗಾಗಿ ಅಳವಡಿಸಿಕೊಂಡಿರುವ ಅವ್ವಾದ್, 2014ರಲ್ಲಿ ಸ್ಥಳೀಯ ಫೆಲೆಸ್ತೀನ್-ಇಸ್ರೇಲ್ ಉಪಕ್ರಮ ‘ರೂಟ್ಸ್ ’ನ ಸಹಸ್ಥಾಪಕರಾಗಿ ಉಭಯ ಸಮುದಾಯಗಳ ನಡುವೆ ಶಾಂತಸೌಹಾರ್ದ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News