ಪ್ರಧಾನಿ ಮೋದಿ-ಮಾಲ್ದೀವ್ಸ್ ಅಧ್ಯಕ್ಷ ಮುಯಿಝ್ಝು ಭೇಟಿ : ದ್ವಿಪಕ್ಷೀಯ ಸಂಬಂಧ ವರ್ಧನೆಗಾಗಿ ವ್ಯಾಪಕ ಮಾತುಕತೆ

Update: 2024-10-07 15:38 GMT

 ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು , ಪ್ರಧಾನಿ ನರೇಂದ್ರ ಮೋದಿ | PC : PTI 

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಇಲ್ಲಿಯ ಹೈದರಾಬಾದ್ ಭವನದಲ್ಲಿ ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಗೊಳಿಸುವ ಬಗ್ಗೆ ವ್ಯಾಪಕ ಚರ್ಚೆಗಳನ್ನು ನಡೆಸಿದರು.

ಕಳೆದ ವರ್ಷ ಮೋದಿಯವರ ಕುರಿತು ಮಾಲ್ದೀವ್ಸ್ ಸಚಿವರ ಟೀಕೆಗಳು ಮತ್ತು ಮುಯಿಝ್ಝು ಚೀನಾ ಪರ ಒಲವು ಹೊಂದಿದ್ದಾರೆ ಎಂಬ ಕಾರಣದಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಹಳಸಿತ್ತು. ಬಳಿಕ ತನ್ನ ಭಾರತ ವಿರೋಧಿ ನಿಲುವನ್ನು ಮೃದುಗೊಳಿಸಿದ್ದ ಮುಯಿಝ್ಝು ಮೋದಿಯವರನ್ನು ಟೀಕಿಸಿದ್ದ ಸಚಿವರನ್ನು ವಜಾ ಮಾಡಿದ್ದರು.

ಮುಯಿಝ್ಝು ಪತ್ನಿ ಸಾಜಿದಾ ಮುಹಮ್ಮದ್ ಅವರ ಜೊತೆಗೆ ನಾಲ್ಕು ದಿನಗಳ ಭೇಟಿಗಾಗಿ ರವಿವಾರ ಸಂಜೆ ಇಲ್ಲಿಗೆ ಆಗಮಿಸಿದ್ದಾರೆ. ಸೋಮವಾರ ಬೆಳಿಗ್ಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಯಿಝ್ಝು ಅವರಿಗೆ ವಿಧ್ಯುಕ್ತ ಸ್ವಾಗತವನ್ನು ಕೋರಿದರು. ಈ ವೇಳೆ ಮೋದಿ ಅವರೂ ಉಪಸ್ಥಿತರಿದ್ದರು.

ಮುಯಿಝ್ಝು ಮಹಾತ್ಮಾ ಗಾಂಧಿಯವರಿಗೆ ಗೌರವ ಸಲ್ಲಿಸಲು ರಾಜಘಾಟ್‌ಗೆ ತೆರಳುವ ಮುನ್ನ ಮೂರು ಸಶಸ್ತ್ರ ಪಡೆಗಳು ಅವರಿಗೆ ಗೌರವ ರಕ್ಷೆಯನ್ನು ನೀಡಿದವು.

ಕಳೆದ ವರ್ಷದ ನವಂಬರ್‌ನಲ್ಲಿ ಮಾಲ್ದೀವ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಭಾರತಕ್ಕೆ ಮುಯಿಝ್ಝು ಅವರ ಮೊದಲ ಭೇಟಿಯಾಗಿದೆ. ಇದಕ್ಕೂ ಮುನ್ನ ಜೂನ್‌ನಲ್ಲಿ ಮೂರನೇ ಅವಧಿಗೆ ಪ್ರಧಾನಿಯಾಗಿ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಅವರು ದಿಲ್ಲಿಗೆ ಭೇಟಿ ನೀಡಿದ್ದರು.

ಕಳೆದ ವರ್ಷ ಅಧ್ಯಕ್ಷೀಯ ಚುನಾವಣೆಯಲ್ಲಿ ‘ಇಂಡಿಯಾ ಔಟ್’ ಅಭಿಯಾನವನ್ನು ಮುಂದಿಟ್ಟುಕೊಂಡು ಗೆದ್ದಿದ್ದ ಮುಯಿಝ್ಝು, ಈ ವರ್ಷದ ಮೇ ತಿಂಗಳೊಳಗೆ ದ್ವೀಪರಾಷ್ಟ್ರದಲ್ಲಿ ನಿಯೋಜಿಸಿದ್ದ ತನ್ನ ಮಿಲಿಟರಿ ಸಿಬ್ಬಂದಿಗಳನ್ನು ಹಿಂದೆಗೆದುಕೊಳ್ಳುವಂತೆ ಭಾರತ ಸರಕಾರಕ್ಕೆ ಸೂಚಿಸಿದ್ದರು.

ಸೋಮವಾರ ಉಭಯ ನಾಯಕರ ಮಾತುಕತೆಗಳ ಸಂದರ್ಭದಲ್ಲಿ ಮಾಲ್ದೀವ್ಸ್ ಗಂಭೀರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ 100 ಮಿಲಿಯನ್‌ ಡಾಲರ್‌ ಅಲ್ಪಾವಧಿ ಸಾಲವನ್ನು ಇನ್ನೊಂದು ವರ್ಷ ಮುಂದುವರಿಸಲು ಭಾರತವು ಒಪ್ಪಿಕೊಂಡಿತು ಹಾಗೂ 400 ಮಿಲಿಯನ್‌ ಡಾಲರ್‌ ಗಳ ಕರೆನ್ಸಿ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿತು.

ಮಾತುಕತೆಗಳ ಬಳಿಕ ಮೋದಿಯವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಯಿಝ್ಝು, 400 ಮಿಲಿಯನ್‌ ಡಾಲರ್‌ ದ್ವಿಪಕ್ಷೀಯ ಕರೆನ್ಸಿ ವಿನಿಮಯ ಒಪ್ಪಂದದ ಜೊತೆಗೆ 30 ಶತಕೋಟಿ ರೂ.ಗಳ ಹಣಕಾಸು ನೆರವು ಒದಗಿಸುವ ಸರಕಾರದ ನಿರ್ಧಾರಕ್ಕಾಗಿ ಮೋದಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ‘ಕರೆನ್ಸಿ ವಿನಿಮಯ ಒಪ್ಪಂದವು ನಾವು ಸದ್ಯಕ್ಕೆ ಎದುರಿಸುತ್ತಿರುವ ವಿದೇಶಿ ವಿನಿಮಯ ಸಮಸ್ಯೆಯನ್ನು ಪರಿಹರಿಸಲು ನೆರವಾಗಲಿದೆ ’ಎಂದು ಅವರು ಹೇಳಿದರು.

ಭಾರತ ಮತ್ತು ಮಾಲ್ದೀವ್ಸ್ ನಡುವಿನ ಸಂಬಂಧಗಳಲ್ಲಿ ‘ಅಭಿವೃದ್ಧಿ ಪಾಲುದಾರಿಕೆ’ಯು ಪ್ರಮುಖ ಆಧಾರಸ್ತಂಭವಾಗಿದೆ ಎಂದು ಬಣ್ಣಿಸಿದ ಮೋದಿ, ಭಾರತವು ಯಾವಾಗಲೂ ಮಾಲ್ದೀವ್ಸ್ ಜನರ ಅಗತ್ಯಗಳಿಗೆ ಆದ್ಯತೆಯನ್ನು ನೀಡಿದೆ ಎಂದು ಹೇಳಿದರು.

ಸೋಮವಾರ ಮೋದಿ ಮತ್ತು ಮುಯಿಝ್ಝು, ಮಾಲ್ದೀವ್ಸ್‌ನಲ್ಲಿ ಆರಂಭಗೊಂಡ ರುಪೇ ಕಾರ್ಡ್ ಪಾವತಿಗಳ ಮೊದಲ ವಹಿವಾಟಿಗೂ ಸಾಕ್ಷಿಯಾದರಲ್ಲದೆ, ಹನಿಮಾಧೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯನ್ನು ವರ್ಚುವಲ್ ಆಗಿ ಉದ್ಘಾಟಿಸಿದರು.

ಭವಿಷ್ಯದಲ್ಲಿ ಭಾರತ ಮತ್ತು ಮಾಲ್ದೀವ್ಸ್ ಯುಪಿಐ ಮೂಲಕ ಸಂಪರ್ಕ ಹೊಂದಲಿವೆ ಎಂದು ಮೋದಿ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಯಿಝ್ಝು ರವಿವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

► ಭಾರತದ ಭದ್ರತೆಗೆ ಧಕ್ಕೆ ತರುವ ಯಾವುದನ್ನೂ ನಮ್ಮ ದೇಶವೆಂದಿಗೂ ಮಾಡುವುದಿಲ್ಲ:ಮುಯಿಝ್ಝು

ಭಾರತದ ಭದ್ರತೆಗೆ ಧಕ್ಕೆ ತರುವ ಯಾವುದೇ ಕೆಲಸವನ್ನು ತನ್ನ ದೇಶವು ಎಂದಿಗೂ ಮಾಡುವುದಿಲ್ಲ ಎಂದು ಮುಯಿಝ್ಝು ಭರವಸೆ ನೀಡಿದ್ದಾರೆ.

ಚೀನಾ ಆಡಳಿತದ ಪರ ಒಲವು ಹೊಂದಿರುವ ಮುಯಿಝ್ಝು,ಚೀನಾದೊಂದಿಗಿನ ತನ್ನ ದೇಶದ ಸಂಬಂಧಗಳು ಭಾರತದ ಭದ್ರತೆಗೆ ಧಕ್ಕೆಯನ್ನುಂಟು ಮಾಡುವುದಿಲ್ಲ ಎಂದು ರವಿವಾರ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.

‘ಭಾರತವು ಮಾಲ್ದೀವ್ಸ್‌ನ ಮೌಲ್ಯಯುತ ಪಾಲುದಾರ ಮತ್ತು ಮಿತ್ರರಾಷ್ಟ್ರವಾಗಿದೆ ಮತ್ತು ನಮ್ಮ ಸಂಬಂಧಗಳು ಪರಸ್ಪರ ಗೌರವ ಮತ್ತು ನಾವು ಹಂಚಿಕೊಂಡಿರುವ ಹಿತಾಸಕ್ತಿಗಳ ಮೇಲೆ ರೂಪುಗೊಂಡಿವೆ. ವಿವಿಧ ಕ್ಷೇತ್ರಗಳಲ್ಲಿ ಇತರ ದೇಶಗಳೊಂದಿಗೆ ನಮ್ಮ ಸಹಕಾರವನ್ನು ಹೆಚ್ಚಿಸಿಕೊಳ್ಳುವಾಗ ನಮ್ಮ ಕ್ರಮಗಳು ನಮ್ಮ ಪ್ರದೇಶದ ಭದ್ರತೆ ಮತ್ತು ಸ್ಥಿರತೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ’ ಎಂದರು.

ಭಾರತ ಮತ್ತು ಮಾಲ್ದೀವ್ಸ್ ನಡುವಿನ ಸಂಬಂಧ ಗಟ್ಟಿಯಾಗಿದ್ದು, ತನ್ನ ಭೇಟಿಯು ಅದನ್ನು ಇನ್ನಷ್ಟು ಬಲಗೊಳಿಸಲಿದೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News