2026 ಮಾರ್ಚ್‌ನೊಳಗೆ ನಕ್ಸಲ್ ತೀವ್ರವಾದವನ್ನು ಸಂಪೂರ್ಣ ತೊಲಗಿಸಲಾಗುವುದು : ಕೇಂದ್ರ ಸಚಿವ ಅಮಿತ್ ಶಾ

Update: 2024-10-07 16:56 GMT

ಕೇಂದ್ರ ಸಚಿವ ಅಮಿತ್ ಶಾ | PC : PTI 

ಹೊಸದಿಲ್ಲಿ : ನಕ್ಸಲ್ ತೀವ್ರವಾದಿಗಳ ವಿರುದ್ಧ ಸಾರಿರುವ ಸಮರವು ಅಂತಿಮ ಘಟ್ಟದಲ್ಲಿದ್ದು, 2026ರ ಮಾರ್ಚ್ ನೊಳಗೆ ದೇಶದಲ್ಲಿ ನಕ್ಸಲ್ ಪಿಡುಗನ್ನು ಸಂಪೂರ್ಣವಾಗಿ ತೊಡೆದುಹಾಕಲು ಸರಕಾರವು ದೃಢಸಂಕಲ್ಪ ಮಾಡಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.

ಅವರು ನಕ್ಸಲ್ ಪೀಡಿತ ರಾಜ್ಯಗಳ ಎಂಟು ಮುಖ್ಯಮಂತ್ರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಕ್ಸಲ್ ಬಾಧಿತ ರಾಜ್ಯಗಳ ಭದ್ರತೆ ಹಾಗೂ ಅಭಿವೃದ್ಧಿ ಕುರಿತಾಗಿ ಸಭೆಯನ್ನು ಕರೆಯಲಾಗಿತ್ತು. ಒಂದು ವೇಳೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಟ್ಟಕಡೆಯ ವ್ಯಕ್ತಿಗೆ ಅಭಿವೃದ್ಧಿಯ ಫಲವು ತಲುಪಿದಲ್ಲಿ, ಎಡಪಂಥೀಯ ಸಿದ್ಧಾಂತ ಪ್ರೇರಿತ ಹಿಂಸಾಚಾರವು ಸಂಪೂರ್ಣವಾಗಿ ಕೊನೆಗೊಳ್ಳಲಿದೆಯೆಂದು ಅವರು ಹೇಳಿದರು.

ಎಡಪಂಥೀಯ ತೀವ್ರವಾದದ ವಿರುದ್ಧ ಹೋರಾಡಬೇಕಾದರೆ, ನಕ್ಸಲ್‌ಪೀಡಿತ ಕಾನೂನಿನ ಪ್ರಭುತ್ವ ಸ್ಥಾಪಿಸುವುದು ಅತ್ಯಗತ್ಯವಾಗಿದೆ. ಕಳೆದ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಎಡಪಂಥೀಯ ಸಿದ್ಧಾಂತ ಪ್ರೇರಿತ ತೀವ್ರವಾದಕ್ಕೆ ಬಲಿಯಾದವರ ಸಂಖ್ಯೆ 100ಕ್ಕೂ ಕಡಿಮೆ ಎಂದವರು ಹೇಳಿದರು.

ಎಡಪಂಥೀಯ ತೀವ್ರವಾದದ ವಿರುದ್ಧ ನಡೆಯುತ್ತಿರುವ ಸಮರವು ಈ ಅಂತಿಮಹಂತದಲ್ಲಿದೆಯೆಂದು ಹೇಳಿ ಶಾ ಅವರು, 2026ರ ಮಾರ್ಚ್‌ನೊಳಗೆ ದೇಶವು ದಶಕಗಳಷ್ಟು ಹಳೆಯ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಲಿದೆ ಎಡಪಂಥೀಯ ತೀವ್ರವಾದವು ಈಗ ಚತ್ತೀಸ್‌ಗಡ ರಾಜ್ಯಕ್ಕೆ ಮಾತ್ರವೇ ಸೀಮಿತವಾಗಿದೆ.

ಚತ್ತೀಸ್‌ಗಡದಲ್ಲಿ ಈ ವರ್ಷದ ಜನವರಿಯಿಂದ 194 ನಕ್ಸಲ್ ಉಗ್ರರು ಸಾವನ್ನಪ್ಪಿದ್ದಾರೆ, 801 ಮಂದಿ ಶಸ್ತ್ರಾಸ್ತ್ರ ತ್ಯಜಿಸಿದ್ದಾರೆ ಹಾಗೂ742 ಮಂದಿ ಶರಣಾಗತರಾಗಿದ್ದಾರೆ ಎಂದು ಶಾ ತಿಳಿಸಿದರು. ನಕ್ಸಲ್ ನಿಗ್ರಹ ಕಾರ್ಯಾಚರಣೆಗಳಿಗೆ ಬಿಎಸ್‌ಎಫ್ ಹಾಗೂ ವಾಯುಪಡೆಯ ತಲಾ 6 ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ ಎಂದವರುಹೇಳಿತದರು.

ನಕ್ಸಲ್ ಸಂಘಟನೆಗಳ ಜೊತೆ ನಂಟು ಹೊಂದಿರುವ ಎಲ್ಲಾ ಯುವಜನರು ಹಿಂಸೆಯನ್ನು ತೊರೆದು ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದರು. ನಕ್ಸಲ್‌ವಾದದಿಂದ ಯಾರಿಗೂ ಪ್ರಯೋಜನವಿಲ್ಲವೆಂದವರು ತಿಳಿಸಿದರು.

ನಕ್ಸಲ್ ಪೀಡಿತ ರಾಜ್ಯಗಳ ಅಭಿವೃದ್ಧಿಗಾಗಿ ಭದ್ರತಾ ಸಂಬಂಧಿತ ವೆಚ್ಚ (ಎಸ್‌ಆರ್‌ಇ)ಗಳಿಗಾಗಿನ ಅನುದಾನವನ್ನು ಮೂರು ಪಟ್ಟು ಹೆಚ್ಚಿಸಲಾಗುವುದು ಎಂದು ಅಮಿತಾ ಶಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News