ವೈದ್ಯೆಯ ಅತ್ಯಾಚಾರ, ಹತ್ಯೆ ಪ್ರಕರಣ | ಸಂಜಯ್ ರಾಯ್ ಏಕೈಕ ಆರೋಪಿ ; ಆರೋಪ ಪಟ್ಟಿಯಲ್ಲಿ ಸಿಬಿಐ ಪ್ರತಿಪಾದನೆ
ಕೋಲ್ಕತಾ : ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಕುರಿತು ಸಿಬಿಐ ತನ್ನ ಮೊದಲ ಆರೋಪ ಪಟ್ಟಿ ಸಲ್ಲಿಸಿದೆ. ಅದರಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆಗೆ ಸಂಜಯ್ ರಾಯ್ ಮಾತ್ರವೇ ಕಾರಣ ಎಂದು ಪ್ರತಿಪಾದಿಸಿದೆ.
ಪಶ್ಚಿಮ ಬಂಗಾಳದ ಸಿಯಾಲ್ದಹ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಸಿಬಿಐ ಸಂಜಯ್ ರಾಯ್ ಅನ್ನು ಏಕೈಕ ಆರೋಪಿ ಎಂದು ಗುರುತಿಸಿದೆ. ಅಲ್ಲದೆ, ಸಾಮೂಹಿಕ ಅತ್ಯಾಚಾರದ ಸಾಧ್ಯತೆಯನ್ನು ತಳ್ಳಿ ಹಾಕಿದೆ.
ಸಿಬಿಐ ತನ್ನ ತನಿಖೆಯಲ್ಲಿ ಸುಮಾರು 100 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದೆ ಹಾಗೂ 12 ಸುಳ್ಳು ಪತ್ತೆ ಪರೀಕ್ಷೆಗಳನ್ನು ನಡೆಸಿದೆ.
ಘಟನೆ ನಡೆದ ದಿನದ ಬಳಿಕ ಆಗಸ್ಟ್ 10ರಂದು ಕೋಲ್ಕತ್ತಾ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಸಂಜಯ್ ರಾಯ್, ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಆರೋಪಿಸಿದ್ದ. ಆದರೆ, ಈ ಪ್ರಕರಣದಲ್ಲಿ ಸಿಬಿಐ ಸಂಜಯ್ ರಾಯ್ ಅನ್ನು ಪ್ರಧಾನ ಶಂಕಿತ ಎಂದು ಪರಿಗಣಿಸಿತ್ತು.
33 ವರ್ಷದ ಸಂಜಯ್ ರಾಯ್‌ನನ್ನು ಆರಂಭದಲ್ಲಿ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಯಿಂದ ಗುರುತಿಸಲಾಗಿತ್ತು. ತುರ್ತು ನಿಗಾ ಕಟ್ಟಡದಲ್ಲಿರುವ ಮೂರನೇ ಮಹಡಿಯ ಸೆಮಿನಾರ್ ಹಾಲ್‌ನಲ್ಲಿದ್ದ ವೈದ್ಯೆಯ ಮೃತದೇಹದ ಬಳಿ ಆತನ ಬ್ಲೂಟೂಥ್ ಇಯರ್ ಫೋನ್ ಪತ್ತೆಯಾದ ಬಳಿಕ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ಸಂತ್ರಸ್ತೆಯ ಉಗುರುಗಳಲ್ಲಿ ಪತ್ತೆಯಾದ ರಕ್ತ ಹಾಗೂ ಚರ್ಮ ಸೇರಿದಂತೆ ವಿಧಿ ವಿಜ್ಞಾನದ ಸಾಕ್ಷ್ಯಗಳು ಕೂಡ ರಾಯ್‌ಯ ಡಿಎನ್‌ಎಗೆ ಹೋಲಿಕೆಯಾಗಿತ್ತು. ಇದು ಆತನೇ ಆರೋಪಿ ಎಂಬುದನ್ನು ದೃಢಪಡಿಸಿತ್ತು.