ಸಹಮತದ ಸಂಬಂಧಗಳಲ್ಲಿ ಹದಿಹರೆಯದವರ ವಿರುದ್ಧ ಪೊಕ್ಸೊ ಕಾಯ್ದೆಯ ದುರ್ಬಳಕೆಯಾಗುತ್ತಿದೆ: ಅಲಹಾಬಾದ್ ಹೈಕೋರ್ಟ್

Update: 2024-07-05 11:03 GMT

ಅಲಹಾಬಾದ್ ಹೈಕೋರ್ಟ್ |  PC : PTI 

ಹೊಸದಿಲ್ಲಿ: ಸಹಮತದ ಪ್ರಣಯ ಸಂಬಂಧಗಳಲ್ಲಿ ಹದಿಹರೆಯದವರ ವಿರುದ್ಧ ಪೊಕ್ಸೊ ಕಾಯ್ದೆಯ ದುರ್ಬಳಕೆಯಾಗುತ್ತಿದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಹೇಳಿದೆ.

ಕಳೆದ ವರ್ಷ ದೂರುದಾರರ ಅಪ್ರಾಪ್ತ ವಯಸ್ಕ ಪುತ್ರಿಗೆ ಆಮಿಷವನ್ನೊಡ್ಡಿ ಲೈಂಗಿಕವಾಗಿ ಬಳಸಿಕೊಂಡ ಆರೋಪಿ ಸತೀಶ್ ಎಂಬಾತನಿಗೆ ಜಾಮೀನು ಮಂಜೂರು ಮಾಡಿದ ಸಂದರ್ಭದಲ್ಲಿ ನ್ಯಾ.ಕೃಷ್ಣ ಪಹಲ್ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

18ರ ಹರೆಯದ ಯುವತಿಯು ಸ್ವಯಂ ಪೋಲಿಸರಿಗೆ ನೀಡಿರುವ ಹೇಳಿಕೆಯಲ್ಲಿ ತಾನು ಆರೋಪಿಯೊಂದಿಗೆ ಸಹಮತದ ಸಂಬಂಧವನ್ನು ಹೊಂದಿದ್ದೇನೆ ಎಂದು ತಿಳಿಸಿದ್ದಾಳೆ,‌ ಹೀಗಾಗಿ ಸತೀಶನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆತನ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಸತೀಶ್ ಮತ್ತು ಬಾಲಕಿ ಗುಜರಾತಿನ ಸೂರತ್‌ನಲ್ಲಿ ಮದುವೆಯಾಗಲು ಉತ್ತರ ಪ್ರದೇಶದ ದೇವರಿಯಾದಿಂದ ಪರಾರಿಯಾಗಿದ್ದರು. ಆ ಸಮಯದಲ್ಲಿ ಬಾಲಕಿ ಗರ್ಭಿಣಿಯಾಗಿದ್ದಳು. ಜ.5ರಂದು ಸತೀಶನನ್ನು ಬಂಧಿಸಲಾಗಿತ್ತು.

ಸತೀಶ್ ಗೆ ಜಾಮೀನು ಮಂಜೂರು ಮಾಡುವಾಗ ಉಚ್ಚ ನ್ಯಾಯಾಲಯವು ಸೂಕ್ತ ನ್ಯಾಯ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಇಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕು ಮತ್ತು ಎಚ್ಚರಿಕೆಯ ನ್ಯಾಯಾಂಗ ಪರಿಗಣನೆ ಅಗತ್ಯವಾಗುತ್ತದೆ ಎಂದು ಹೇಳಿತು. ನಿಜವಾದ ಲೈಂಗಿಕ ಶೋಷಣೆ ಪ್ರಕರಣಗಳು ಮತ್ತು ಸಹಮತದ ಸಂಬಂಧಗಳನ್ನು ಒಳಗೊಂಡಿರುವ ಪ್ರಕರಣಗಳ ನಡುವೆ ವ್ಯತ್ಯಾಸವನ್ನು ಕಂಡುಕೊಳ್ಳುವುದು ನಿರ್ಣಾಯಕವಾಗಿದೆ ಎಂದೂ ನ್ಯಾಯಾಲಯವು ಹೇಳಿತು.

ಹದಿಹರೆಯದವರಿಗೆ ಪೊಕ್ಸೊ ಕಾಯ್ದೆಯನ್ನು ಅನ್ವಯಿಸುವ ಬಗ್ಗೆ ಈ ನ್ಯಾಯಾಲಯವು ಆಗಾಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ. 18 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸುವುದು ಪೊಕ್ಸೊ ಕಾಯ್ದೆಯ ಮುಖ್ಯ ಉದ್ದೇಶವಾಗಿದ್ದರೂ ವಿಶೇಷವಾಗಿ ಹದಿಹರೆಯದವರ ನಡುವಿನ ಸಹಮತದ ಪ್ರೇಮ ಸಂಬಂಧಗಳಲ್ಲಿ ಅದನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣಗಳಿವೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿತು.

ಪೊಕ್ಸೊ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸುವಾಗ ಪರಿಗಣಿಸಬೇಕಾದ ಕೆಲವು ಸಲಹೆಗಳನ್ನು ತೀರ್ಪು ಒಳಗೊಂಡಿದೆ.

ಸಂತ್ರಸ್ತೆಯ ಹೇಳಿಕೆಯ ಸೂಕ್ತ ಪರಿಗಣನೆ ಅಗತ್ಯವಾಗಿದೆ. ಸಂಬಂಧವು ಸಹಮತದ್ದಾಗಿದ್ದರೆ ಮತ್ತು ಪರಸ್ಪರ ಪ್ರೀತಿಯನ್ನು ಆಧರಿಸಿದ್ದರೆ ಜಾಮೀನು ಮತ್ತು ಕಾನೂನು ಕ್ರಮಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲಿ ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯವು ಹೇಳಿತು.

ಸಂಬಂಧದ ಸಹಮತದ ಸ್ವರೂಪವನ್ನು ನಿರ್ಲಕ್ಷಿಸುವುದು ತಪ್ಪು ಜೈಲುಶಿಕ್ಷೆಯಂತಹ ಅನ್ಯಾಯಗಳಿಗೆ ಕಾರಣವಾಗಬಹುದು ಎಂದು ಉಚ್ಚ ನ್ಯಾಯಾಲಯವು ಹೇಳಿತು.

ಸಂತ್ರಸ್ತೆ ಮತ್ತು ತಮ್ಮಿಬ್ಬರ ಮಗುವನ್ನು ನೋಡಿಕೊಳ್ಳಬೇಕು ಎಂಬ ಷರತ್ತಿನಲ್ಲಿ ನ್ಯಾಯಾಲಯವು ಆರೋಪಿಗೆ ಜಾಮೀನು ಮಂಜೂರು ಮಾಡಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News