ಪೂಂಛ್ ಹೊಂಚುದಾಳಿ: ಮೃತ ನಾಗರಿಕರ ಕುಟುಂಬಗಳಿಗೆ ಉದ್ಯೋಗ, ಪರಿಹಾರ ಪ್ರಕಟಿಸಿದ ಸರಕಾರ

Update: 2023-12-23 17:19 GMT

ಸಾಂದರ್ಭಿಕ ಚಿತ್ರ

ಶ್ರೀನಗರ: ಗುರುವಾರ ಪೂಂಛ್‌ನಲ್ಲಿ ಎರಡು ಸೇನಾ ವಾಹನಗಳ ಮೇಲೆ ಹೊಂಚುದಾಳಿಯನ್ನು ನಡೆಸಿದ್ದ ಭಯೋತ್ಪಾದಕರಿಗಾಗಿ ಭದ್ರತಾ ಪಡೆಗಳು ಭಾರೀ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದು, ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೂವರು ನಾಗರಿಕರ ಕುಟುಂಬಗಳಿಗೆ ಜಮ್ಮು-ಕಾಶ್ಮೀರ ಆಡಳಿತವು ಶನಿವಾರ ಪರಿಹಾರ ಮತ್ತು ಉದ್ಯೋಗಗಳನ್ನು ಘೋಷಿಸಿದೆ. ಹೊಂಚುದಾಳಿಯಲ್ಲಿ ಐವರು ಯೋಧರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರು.

27ರಿಂದ 42ರ ಹರೆಯದ ನಡುವಿನ ಮೂವರು ವ್ಯಕ್ತಿಗಳು ಶುಕ್ರವಾರ ನಿಗೂಢ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು.

ಗುರುವಾರ ಹೊಂಚುದಾಳಿಗೆ ಸಂಬಂಧಿಸಿದಂತೆ ಸೇನೆಯು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದ ಎಂಟು ಜನರಲ್ಲಿ ಈ ಮೂವರು ಸೇರಿದ್ದರು. ಇತರ ನಾಲ್ವರು ಹಿಂಸೆಯಿಂದ ಗಾಯಗೊಂಡು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೃತರ ಸಂಬಂಧಿಗಳು ಮತ್ತು ರಾಜಕೀಯ ನಾಯಕರು ಆರೋಪಿಸಿದ್ದಾರೆ.

ಶನಿವಾರ ಅಪರಾಹ್ನ ಮೃತರ ಅಂತ್ಯಸಂಸ್ಕಾರವನ್ನು ಬುಫ್ಲಿಯಾಜ್‌ನಲ್ಲಿಯ ಅವರ ಪೂರ್ವಜರ ಖಬರ್‌ಸ್ತಾನ್‌ನಲ್ಲಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಎಲ್ಲ ಮೂವರು ಅಮಾಯಕರಾಗಿದ್ದು ,ಸೇನೆಯ ವಶದಲ್ಲಿರುವಾಗ ಚಿತ್ರಹಿಂಸೆಯಿಂದ ಮೃತಪಟ್ಟಿದ್ದಾರೆ ಎಂದು ಮೃತರ ಪೈಕಿ ಓರ್ವನ ಸಂಬಂಧಿ ಮುಹಮ್ಮದ್ ಸಾದಿಕ್ ದೂರವಾಣಿ ಮೂಲಕ ಸುದ್ದಿಸಂಸ್ಥೆಗೆ ತಿಳಿಸಿದರು.

‘ಜಿಲ್ಲಾಧಿಕಾರಿ ಮತ್ತು ಎಸ್‌ಎಸ್‌ಪಿ ಭರವಸೆಯ ಮೇರೆಗೆ ನಾವು ಮೃತರ ಅಂತ್ಯಸಂಸ್ಕಾರ ನಡೆಸಿದ್ದೇವೆ. ಕ್ರಮವನ್ನು ತೆಗೆದುಕೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ. ಸೇನಾ ಘಟಕದ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಾವು ಆಗ್ರಹಿಸುತ್ತಿದ್ದೇವೆ ’ ಎಂದರು.

ಇನ್ನೂ ಐವರು ವ್ಯಕ್ತಿಗಳು ಗಾಯಗೊಂಡಿದ್ದಾರೆ ಮತ್ತು ಈಗಲೂ ಸೇನೆಯ ವಶದಲ್ಲಿದ್ದಾರೆಂದು ಹೇಳಲಾಗಿದೆ ಎಂದೂ ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News