ಮುಕೇಶ್ ಅಂಬಾನಿ ಪುತ್ರನ ವಿವಾಹಕ್ಕೆ ಹಾಜರಾದ ಪ್ರಧಾನಿ ಮೋದಿ ; ಹಿರಿಯ ವಕೀಲ ಪ್ರಶಾಂತ್ ಭೂಷಣ್ ಟೀಕೆ

Update: 2024-07-14 16:50 GMT
PC : PTI

ಹೊಸದಿಲ್ಲಿ: ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ವಿವಾಹೋತ್ಸವದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಹಿರಿಯ ವಕೀಲ ಹಾಗೂ ಹೋರಾಟಗಾರ ಪ್ರಶಾಂತ್ ಭೂಷಣ್ ಟೀಕಿಸಿದ್ದಾರೆ.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಗೂ, ಈಗ ಮುಕೇಶ್ ಅಂಬಾನಿ ಪುತ್ರನ ವಿವಾಹೋತ್ಸವದಲ್ಲಿ ಪಾಲ್ಗೊಂಡಿರುವ ಅವರ ನಡೆಗೂ ಇರುವ ವ್ಯತ್ಯಾಸವನ್ನು ಅವರು ಎತ್ತಿ ತೋರಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ಕೆಲ ದಿನಗಳ ಹಿಂದೆ ಅಂಬಾನಿ ಅವರು ಕಾಂಗ್ರೆಸ್ ಪಕ್ಷಕ್ಕೆ ಟೆಂಪೊಗಟ್ಟಲೆ ನಗದನ್ನು ರವಾನಿಸುತ್ತಿದ್ದಾರೆ ಎಂದು ಮೋದಿ ಆರೋಪಿಸಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವ ಬದಲು, ಅಂಬಾನಿಯ ಅಸಭ್ಯ ಹಾಗೂ ದುಂದುವೆಚ್ಚದ ವಿವಾಹೋತ್ಸವದಲ್ಲಿ ಮುಂಬೈನ ಅರ್ಧ ವಾಹನ ಸಂಚಾರವನ್ನು ನಿಲುಗಡೆ ಮಾಡಿಸಿ ಪಾಲ್ಗೊಂಡಿದ್ದಾರೆ. ಜನಪಥ್ 10 ನಿವಾಸಕ್ಕೆ ವಿವಾಹ ಆಮಂತ್ರಣ ಪತ್ರದೊಂದಿಗೆ ಅಂಬಾನಿ ಖುದ್ದಾಗಿ ತೆರಳಿದರೂ, ಈ ಸಮಾರಂಭದಲ್ಲಿ ರಾಹುಲ್ ಹಾಗೂ ಸೋನಿಯಾ ಪಾಲ್ಗೊಂಡಿಲ್ಲ" ಎಂದು ಟೀಕಿಸಿದ್ದಾರೆ.

ಈ ಟ್ವೀಟ್‌ನೊಂದಿಗೆ, ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷಕ್ಕೆ ಅಂಬಾನಿ ಲೋಡುಗಟ್ಟಲೆ ನಗದು ರವಾನಿಸುತ್ತಿದ್ದಾರೆ ಎಂದು ಚುನಾವಣಾ ಪ್ರಚಾರ ಸಮಾರಂಭವೊಂದರಲ್ಲಿ ಆರೋಪಿಸಿರುವ ವಿಡಿಯೊವನ್ನೂ ಪ್ರಶಾಂತ್ ಭೂಷಣ್ ಲಗತ್ತಿಸಿದ್ದಾರೆ. ಅಂಬಾನಿ ವಿರುದ್ಧ ತಾವು ಮಾಡಿದ್ದ ಆರೋಪಗಳ ಬಗ್ಗೆ ಸ್ಥಿರತೆ ಹೊಂದಿರದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಆರೋಪದ ಗಾಂಭೀರ್ಯ ಅರಿಯದೆ, ಹಣಕಾಸು ಅವ್ಯವಹಾರ ಆರೋಪದ ಬಗ್ಗೆ ಉದಾಸೀನತೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ನಡುವೆ, ಮುಕೇಶ್ ಅಂಬಾನಿ ಅವರೇ ಖುದ್ದು ಜನಪಥ್ 10 ನಿವಾಸಕ್ಕೆ ತೆರಳಿ, ತಮ್ಮ ಪುತ್ರನ ವಿವಾಹೋತ್ಸವದ ಆಮಂತ್ರಣ ಪತ್ರಿಕೆ ನೀಡಿ ಬಂದರೂ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಜುಲೈ 12ರಂದು ನಡೆದ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಿಂದ ದೂರ ಉಳಿದಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News