ದಿಲ್ಲಿ ವಿಧಾನಸಭಾ ಚುನಾವಣೆ ಸೋಲು ಆಪ್ ನ ಅಂತ್ಯದ ಆರಂಭ: ಪ್ರಶಾಂತ್ ಕಿಶೋರ್

Update: 2025-02-10 12:09 IST
Photo of Prasanth Kishore

ಪ್ರಶಾಂತ್ ಕಿಶೋರ್ (PTI)

  • whatsapp icon

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿನ ಸೋಲು ಆಪ್ ನ ಅಂತ್ಯದ ಆರಂಭ ಎಂದು ಜನ ಸೂರಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದಾರೆ.

Business Today ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಪ್ರಶಾಂತ್ ಕಿಶೋರ್, “ಯಾವ ಪಕ್ಷ ಪಾರದರ್ಶಕ, ಉತ್ತರದಾಯಿ ಹಾಗೂ ಪ್ರಜಾಸತ್ತಾತ್ಮಕವಾಗಿರಬೇಕಿತ್ತೊ, ಆ ಪಕ್ಷವನ್ನು ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರಿ ಪಕ್ಷವನ್ನಾಗಿಸಿದರು” ಎಂದು ಆರೋಪಿಸಿದ್ದಾರೆ.

ಆಪ್ ಪಕ್ಷದ 10 ವರ್ಷದ ಆಡಳಿತದ ವಿರುದ್ಧ ಇದ್ದ ಆಡಳಿತವಿರೋಧಿ ಅಲೆಯ ಕಾರಣಕ್ಕೆ ಆಪ್ ಆಘಾತಕಾರಿ ಸೋಲು ಅನುಭವಿಸಿದೆ ಎಂದು ಅಭಿಪ್ರಾಯ ಪಟ್ಟಿರುವ ಅವರು, ಕಡೇ ಗಳಿಗೆಯಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಅವರ ನಿರ್ಧಾರ ಸೂಕ್ತವಾಗಿರಲಿಲ್ಲ ಎಂದೂ ಹೇಳಿದ್ದಾರೆ.

“ಅಪ್ ನ ಎರಡನೆಯದು ಹಾಗೂ ಬಹು ದೊಡ್ಡ ತಪ್ಪೆಂದರೆ, ಅರವಿಂದ್ ಕೇಜ್ರಿವಾಲ್ ರಾಜೀನಾಮೆ. ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾದಾಗಲೇ ಅವರು ರಾಜೀನಾಮೆ ಸಲ್ಲಿಸಬೇಕಿತ್ತು. ಆದರೆ, ಚುನಾವಣೆಗೂ ಮುನ್ನ ಮತ್ತೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿದ ನಂತರ, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು ಬಹು ದೊಡ್ಡ ಕಾರ್ಯತಂತ್ರ ದೋಷ ಎಂಬುದು ನಿರೂಪಿತವಾಯಿತು” ಎಂದು ಅವರು ಹೇಳಿದ್ದಾರೆ.

ಅರವಿಂದ್ ಕೇಜ್ರಿವಾಲ್ ರ ರಾಜಕೀಯ ನಿರ್ಧಾರಗಳಲ್ಲಿನ ಅಸ್ಥಿರತೆಯತ್ತಲೂ ಬೊಟ್ಟು ಮಾಡಿರುವ ಪ್ರಶಾಂತ್ ಕಿಶೋರ್, ಮೊದಲು ಇಂಡಿಯಾ ಮೈತ್ರಿಕೂಟದೊಂದಿಗೆ ಮೈತ್ರಿ ಮಾಡಿಕೊಂಡು, ನಂತರ ಅದರಿಂದ ನಿರ್ಗಮಿಸಿದ್ದೂ ಕೂಡಾ ಮತದಾರರ ಅಸಮಾಧಾನಕ್ಕೆ ಕಾರಣ ಎಂದು ವ್ಯಾಖ್ಯಾನಿಸಿದ್ದಾರೆ. ಅಲ್ಲದೆ, ಕೇಜ್ರಿವಾಲ್ ರ ಆಡಳಿತದೆಡೆಗಿನ ಧೋರಣೆ, ವಿಶೇಷವಾಗಿ ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ಜನರು ಅನುಭವಿಸುತ್ತಿರುವ ಸಮಸ್ಯೆಗಳ ಕಡೆಗಿನ ಧೋರಣೆ ನೀರಸವಾಗಿತ್ತು ಎಂದೂ ಅವರು ದೂಷಿಸಿದ್ದಾರೆ.

ಇದರೊಂದಿಗೆ, ಅರವಿಂದ್ ಕೇಜ್ರಿವಾಲ್ ಮಾಜಿ ಸಹೋದ್ಯೋಗಿಯೂ ಆದ ಪ್ರಶಾಂತ್ ಕಿಶೋರ್, ದಿಲ್ಲಿಯಲ್ಲಿನ ಆಪ್ ನ ಹಿನ್ನಡೆಗೆ ಅರವಿಂದ್ ಕೇಜ್ರಿವಾಲ್ ಅವರೇ ಕಾರಣ ಎಂದೂ ದೂರಿದ್ದಾರೆ.

ಶನಿವಾರ ಪ್ರಕಟಗೊಂಡ 70 ಸದಸ್ಯ ಬಲದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಆಪ್ ಪಕ್ಷವು ಕೇವಲ 22 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಹೀನಾಯವಾಗಿ ಪರಾಭವಗೊಂಡಿತ್ತು. ಇದಕ್ಕೂ ಮುನ್ನ 2020ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 62 ಸ್ಥಾನಗಳಲ್ಲಿ ಭಾರಿ ಗೆಲುವು ಸಾಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News