ಪ್ರಯಾಗರಾಜ್: ನಕ್ಸಲ್ ನಂಟಿನ ಆರೋಪದಲ್ಲಿ ವಿದ್ಯಾರ್ಥಿಯ ಕೊಠಡಿಗೆ ಎನ್‌ಐಎ ದಾಳಿ
ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ನಕ್ಸಲರೊಂದಿಗೆ ನಂಟಿನ ಆರೋಪದಲ್ಲಿ ಶುಕ್ರವಾರ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ವಿದ್ಯಾರ್ಥಿ ಹೋರಾಟಗಾರನೋರ್ವನ ಬಾಡಿಗೆ ಕೊಠಡಿಯ ಮೇಲೆ ದಾಳಿ ನಡೆಸಿದೆ. 2023ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆಯಡಿ ದಾಖಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು thewire.in ವರದಿ ಮಾಡಿದರು.
ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯು ತನ್ನ ಉತ್ತರ ಪ್ರಾದೇಶಿಕ ಘಟಕವನ್ನು ಪುನಃಶ್ಚೇತನಗೊಳಿಸಲು ನಡೆಸಿರುವ ಪ್ರಯತ್ನಗಳನ್ನು ವಿಫಲಗೊಳಿಸಲು ಉತ್ತರ ಪ್ರದೇಶ, ದಿಲ್ಲಿ, ಹರ್ಯಾಣ ಮತ್ತು ಪಂಜಾಬ್‌ಗಳಲ್ಲಿ ದಾಳಿಗಳನ್ನು ನಡೆಸಲಾಗಿದೆ. 2023ರ ಎಫ್‌ಐಆರ್‌ನಲ್ಲಿಯ ಆರೋಪಿಗಳು ಮತ್ತು ಶಂಕಿತ ವ್ಯಕ್ತಿಗಳಿಗೆ ಸಂಬಂಧಿಸಿದ ಒಟ್ಟು ಒಂಭತ್ತು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಪ್ರಕರಣದಲ್ಲಿಯ ವಿವಿಧ ಆರೋಪಿಗಳಿಗೆ ನಿಕಟವರ್ತಿಗಳೆಂದು ಶಂಕಿಸಲಾಗಿರುವ ವ್ಯಕ್ತಿಗಳಿಂದ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಹೇಳಿಕೆಯಲ್ಲಿ ತಿಳಿಸಿದೆ.
ಈ ಶಂಕಿತರು ಸಿಪಿಐ(ಮಾವೋವಾದಿ) ಸಿದ್ಧಾಂತಗಳನ್ನು ಪ್ರಚಾರ ಮಾಡಲು ಹಿಂದಿನ ಪೂರ್ವ ಪ್ರಾದೇಶಿಕ ಘಟಕದ ಮುಖ್ಯಸ್ಥ ಪ್ರಶಾಂತ ಬೋಸ್‌ನಿಂದ ಹಣವನ್ನು ಸ್ವೀಕರಿಸುತ್ತಿದ್ದರು ಎನ್ನುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ ಎಂದು ಎನ್‌ಐಎ ಆರೋಪಿಸಿದೆ.
ಪ್ರಯಾಗರಾಜ್‌ನಲ್ಲಿ ಎಡಪಂಥೀಯ ಒಲವು ಹೊಂದಿರುವ ವಿದ್ಯಾರ್ಥಿ ಸಂಘಟನೆ ‘ಇಂಕ್ವಿಲಾಬ್ ಛಾತ್ರ ಮೋರ್ಚಾ’ದ ಜಂಟಿ ಕಾರ್ಯದರ್ಶಿ ಹಾಗೂ ‘ಅಲಹಾಬಾದ್ ನಾಗರಿಕ ಸಮಾಜ್’ನ ಕಾರ್ಯಕಾರಿ ಸಮಿತಿಯ ಸದಸ್ಯ ಆಝಾದ್ ಕೊಠಡಿಯ ಮೇಲೆ ಎನ್‌ಐಎ ದಾಳಿ ನಡೆಸಿದ್ದು, ಅದಾನಿ ಗ್ರೂಪ್ ಕುರಿತು ಹಿಂಡೆನ್‌ಬರ್ಗ್ ರೀಸರ್ಚ್‌ನ ತನಿಖಾ ವರದಿಯ ಕುರಿತು ಅರ್ಥಶಾಸ್ತ್ರಜ್ಞ ಅರುಣ್ ಕುಮಾರ್ ಅವರ ಉಪನ್ಯಾಸವನ್ನು ಆಧರಿಸಿದ ಕರಪತ್ರಗಳನ್ನು ವಶಪಡಿಸಿಕೊಂಡಿದೆ. ‘ದಸ್ತಕ್’ನಿಯತಕಾಲಿಕದ ಮೇ-ಜೂನ್ ಸಂಚಿಕೆಯನ್ನೂ ಅದು ವಶಪಡಿಸಿಕೊಂಡಿದ್ದು, ಇದರಲ್ಲಿ ಆಜಾದ್ ಲಡಾಖ್‌ನಲ್ಲಿ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಆಂದೋಲನದ ಕುರಿತು ಲೇಖನವೊಂದನ್ನು ಬರೆದಿದ್ದಾರೆ
ಆಗ್ರಾ ನಿವಾಸಿಯಾಗಿರುವ ಆಜಾದ್ ಅಲಹಾಬಾದ್ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆಜಾದ್ ಮೇಲಿನ ದಾಳಿಯನ್ನು ಮಾನವ ಹಕ್ಕುಗಳ ಗುಂಪು ಪಿಯುಸಿಎಲ್ ಖಂಡಿಸಿದೆ.
ಅತ್ತ ಪಂಜಾಬಿನ ಬಠಿಂಡಾ ಜಿಲ್ಲೆಯಲ್ಲಿ ಭಾರತೀಯ ಕಿಸಾನ ಯೂನಿಯನ್(ಕ್ರಾಂತಿಕಾರಿ)ನ ಪ್ರಧಾನ ಕಾರ್ಯದರ್ಶಿ ಸುಖ್ವಿಂದರ್ ಕೌರ್ ನಿವಾಸದ ಮೇಲೂ ಶುಕ್ರವಾರ ಎನ್‌ಐಎ ದಾಳಿ ನಡೆಸಿದ್ದು,ಇದನ್ನು ರೈತ ಗುಂಪುಗಳು ಪ್ರತಿಭಟಿಸಿವೆ.
ಎನ್‌ಐಎ ಕಳೆದ ವರ್ಷದ ಜೂನ್‌ನಲ್ಲಿ ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ಒಟ್ಟು ಆರು ಆರೋಪಿಗಳನ್ನು ಹೆಸರಿಸಿದೆ. ಆಜಾದ್‌ಗೆ ನೋಟಿಸ್ ಜಾರಿಗೊಳಿಸಿರುವ ಎನ್‌ಐಎ ಸೆ.15ರಂದು ಲಕ್ನೋದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.