ಮಣಿಪುರ ಹಿಂಸಾಚಾರದಲ್ಲಿ ಮೃತಪಟ್ಟಿರುವವರ ಅಂತ್ಯ ಸಂಸ್ಕಾರ ನಡೆಸದಂತೆ ಕುಟುಂಬ ಸದಸ್ಯರ ಮೇಲೆ ಒತ್ತಡ

Update: 2023-11-28 15:52 GMT

Photo: PTI 

ಇಂಫಾಲ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ ಮೃತಪಟ್ಟಿರುವವರ ಮೃತದೇಹಗಳನ್ನು ಪಡೆಯಬಾರದು ಮತ್ತು ಅಂತಿಮ ಸಂಸ್ಕಾರಗಳನ್ನು ನಡೆಸಬಾರದು ಎಂಬ ಒತ್ತಡವನ್ನು ಅವರ ಸಂಬಂಧಿಕರು ನಾಗರಿಕ ಸಮಾಜದ ಸಂಘಟನೆಗಳಿಂದ ಎದುರಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ನೇಮಿತ ಸಮಿತಯೊಂದು ತನ್ನ ಮಧ್ಯಂತರ ವರದಿಯಲ್ಲಿ ಹೇಳಿದೆ.

ಮಣಿಪುರದಲ್ಲಿ ನಡೆಯುತ್ತಿರುವ ಸಂಘರ್ಷದ ಮಾನವೀಯ ಬಿಕ್ಕಟ್ಟಿನ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಸಮಿತಿಯು ತನ್ನ 13ನೇ ಮಧ್ಯಂತರ ವರದಿಯನ್ನು ನವೆಂಬರ್ 20ರಂದು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಮಣಿಪುರದಲ್ಲಿ ಮೆತೈ ಮತ್ತು ಕುಕಿ ಸಮುದಾಯಗಳ ನಡುವೆ ಮೇ ತಿಂಗಳಿನಿಂದ ಸಂಘರ್ಷ ನಡೆಯುತ್ತಿದೆ. ಸಂಘರ್ಷ ಸ್ಫೋಟಗೊಂಡಂದಿನಿಂದ 200ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 60,000ಕ್ಕೂ ಅಧಿಕ ಮಂದಿ ತಮ್ಮ ಮನೆಗಳನ್ನು ತೊರೆದು ಪಲಾಯನಗೈದಿದ್ದಾರೆ. ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಕುಕಿ ಸಮುದಾಯದ ಜನರ ಪ್ರಾಬಲ್ಯವಿದ್ದರೆ, ಇಂಫಾಲ ಕಣಿವೆಯಲ್ಲಿ ಮೆತೈ ಸಮುದಾಯದ ಜನರು ಹೆಚ್ಚಾಗಿ ವಾಸಿಸುತ್ತಿದ್ದಾರೆ.

ಹಿಂಸಾಚಾರದಲ್ಲಿ ಮೃತಪಟ್ಟಿರುವವರ ಪೈಕಿ ಅರ್ಧಕ್ಕಿಂತಲೂ ಹೆಚ್ಚಿನವರ ಮೃತದೇಹಗಳು ರಾಜ್ಯದ ಶವಾಗಾರಗಳಲ್ಲಿವೆ. ಅವುಗಳನ್ನು ಪಡೆಯಲು ಸಂಬಂಧಿಕರು ಬಂದಿಲ್ಲ.

ಮೂರು ಶವಾಗಾರಗಳಲ್ಲಿರುವ 94 ಮೃತದೇಹಗಳ ಪೈಕಿ 88 ದೇಹಗಳನ್ನು ಗುರುತಿಸಲಾಗಿದೆ. ಆದರೆ, ಮೃತದೇಹಗಳನ್ನು ಪಡೆದುಕೊಳ್ಳದಂತೆ ನಾಗರಿಕ ಸಮಾಜದ ಸಂಘಟನೆಗಳು ಸಂಬಂಧಿಕರ ಮೇಲೆ ಒತ್ತಡ ಹೇರುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮೃತದೇಹಗಳನ್ನು ಪಡೆದು ಅಂತ್ಯಸಂಸ್ಕಾರಗಳನ್ನು ನಡೆಸಲು ಸಂಬಂಧಿಕರು ಸಿದ್ಧರಿರುವ ಕೆಲವು ಪ್ರಕರಣಗಳನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತಲ್ ನೇತೃತ್ವದ ಸುಪ್ರೀಂ ಕೋರ್ಟ್ ಸಮಿತಿಯು ಉಲ್ಲೇಖಿಸಿದೆ. ಆದರೆ, ತಮ್ಮ ‘‘ಸ್ಥಾಪಿತ ಹಿತಾಸಕ್ತಿಗಳಿಗಾಗಿ’’ ಮತ್ತು ‘‘ಅನುಚಿತ ಬೇಡಿಕೆಗಳನ್ನು ಈಡೇರಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುವುದಕ್ಕಾಗಿ’’ ಮೃತರ ಅಂತ್ಯಸಂಸ್ಕಾರಗಳನ್ನು ನಡೆಸದಂತೆ ಕೆಲವು ನಾಗರಿಕ ಸಮಾಜ ಸಂಘಟನೆಗಳು ಅವರನ್ನು ತಡೆಯುತ್ತಿವೆ ಎಂದು ಅದು ಹೇಳಿದೆ.

‘‘ಸಮುದಾಯಗಳ ನಡುವಿನ ಸಂಘರ್ಷವನ್ನು ಮುಂದುವರಿಸಿಕೊಂಡು ಹೋಗಲು ಮತ್ತು ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆ ಮರಳುವುದನ್ನು ತಡೆಯಲು ಕೆಲವು ಶಕ್ತಿಗಳು ಶ್ರಮಿಸುತ್ತಿವೆ ಎಂಬ ಆತಂಕವಿದೆ’’ ಎಂದು ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ. ‘‘ಈ ಕಾರಣಕ್ಕಾಗಿ, ಪರಿಸ್ಥಿತಿಯ ನೈಜ ಮತ್ತು ವಾಸ್ತವಿಕ ಅಂಶಗಳನ್ನು ಸುಪ್ರೀಂ ಕೋರ್ಟ್‌ನ ಮುಂದೆ ಇಡಲಾಗುತ್ತಿಲ್ಲ’’ ಎಂದು ಅದು ಹೇಳಿದೆ.

ನಾಗರಿಕ ಸಮಾಜದ ಸಂಘಟನೆಗಳು ಸಾಮೂಹಿಕ ಶವ ಸಂಸ್ಕಾರಕ್ಕಾಗಿ ‘‘ಸೂಕ್ತವಲ್ಲದ ಸ್ಥಳಗಳನ್ನು’’ ಕೇಳುತ್ತಿವೆ. ಅವುಗಳ ಈ ಬೇಡಿಕೆಯು ಮುಂದೆ ಮೆತೈ ಮತ್ತು ಕುಕಿ ಸಮುದಾಯಗಳ ನಡುವೆ ‘‘ನಿರಂತರ ಉದ್ವಿಗ್ನತೆ’’ಗಳನ್ನು ಸೃಷ್ಟಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ನೇಮಿತ ಸಮಿತಿ ಅಭಿಪ್ರಾಯಪಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News