ಚುನಾವಣೆ ನಡೆದ ರಾಜ್ಯಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಪ್ರಧಾನಿ ಮೋದಿ ಚಾಲನೆ
ಹೊಸದಿಲ್ಲಿ : ಇತ್ತೀಚಿಗೆ ವಿಧಾನಸಭಾ ಚುನಾವಣೆ ನಡೆದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಡ, ಮಿಜೋರಾಂ ಮತ್ತು ತೆಲಂಗಾಣಗಳಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ವರ್ಚುವಲ್ ಆಗಿ ಚಾಲನೆ ನೀಡಿದರು.
ಇತರ ಪ್ರದೇಶಗಳಲ್ಲಿ ಈ ಹಿಂದೆಯೇ ಆರಂಭಗೊಂಡಿರುವ ಯಾತ್ರೆಯು ಚುನಾವಣೆಗಳ ಸಂದರ್ಭದಲ್ಲಿ ಅಸ್ತಿತ್ವದಲ್ಲಿದ್ದ ಮಾದರಿ ನೀತಿ ಸಂಹಿತೆಯಿಂದಾಗಿ ಈ ಐದು ರಾಜ್ಯಗಳಲ್ಲಿ ವಿಳಂಬಗೊಂಡಿತ್ತು.
ಸರಕಾರಿ ಯೋಜನೆಗಳ ಲಾಭಗಳನ್ನು ಪಡೆದುಕೊಂಡಿರುವ ವಿವಿಧ ರಾಜ್ಯಗಳ ಫಲಾನುಭವಿಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮೋದಿ ಸಂವಾದ ನಡೆಸಿದರು. ಇಂತಹ ಓರ್ವ ಫಲಾನುಭವಿಯೊಂದಿಗೆ ಮಾತನಾಡಿದ ಮೋದಿ, ದೇಶದಲ್ಲಿಯ ಸ್ವಾವಲಂಬಿ ಮಹಿಳೆಯರು ಸ್ವಯಂ ಮುನ್ನಡೆಯುತ್ತಿರುವುದು ಮಾತ್ರವಲ್ಲ, ಇತರರಿಗೂ ವರದಾನವಾಗಿದ್ದಾರೆ ಎಂದರು. ಕಷ್ಟಪಟ್ಟು ದುಡಿಯುವ ಇಂತಹ ವ್ಯಕ್ತಿಗಳನ್ನು ಬೆಂಬಲಿಸಲು ತನ್ನ ಸರಕಾರದ ಬದ್ಧತೆಯನ್ನು ಅವರು ವ್ಯಕ್ತಪಡಿಸಿದರು.
ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದೊಂದಿಗೆ ಮೋದಿಯ ಗ್ಯಾರಂಟಿ ವಾಹನವು ದೇಶದ ಮೂಲೆಮೂಲೆಗೂ ತಲುಪುತ್ತಿದೆ ಎಂದು ಹೇಳಿದ, ಒಂದು ತಿಂಗಳ ಅವಧಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಸಾವಿರಾರು ಗ್ರಾಮಗಳು ಮತ್ತು ನಗರಗಳಿಗೆ ತಲುಪಿದೆ ಮತ್ತು ಈ ಪೈಕಿ ಹೆಚ್ಚಿನವು ಸಣ್ಣ ಪಟ್ಟಣಗಳಾಗಿವೆ ಎಂದರು.
ತನ್ನ ಸರಕಾರವು ಕುಟುಂಬ ಸದಸ್ಯನಂತೆ ಪ್ರತಿಯೊಬ್ಬರ ತೊಂದರೆಗಳನ್ನು ನಿವಾರಿಸಲು ಯತ್ನಿಸುತ್ತಿದೆ ಎಂದು ಹೇಳಿದ ಮೋದಿ, ‘ನಮ್ಮ ಸರಕಾರವು ಬಡವರು,ರೈತರು,ಸಣ್ಣ ಉದ್ಯಮಿಗಳು ಮತ್ತು ಸಮಾಜದ ವಿವಿಧ ಇತರ ವರ್ಗಗಳಿಗೆ ನೆರವಾಗಿದೆ. ಇತರ ಎಲ್ಲರಿಂದಲೂ ಭರವಸೆಗಳು ಕಮರಿದ ಬಳಿಕ ಮೋದಿ ಗ್ಯಾರಂಟಿ ಆರಂಭಗೊಳ್ಳುತ್ತದೆʼ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ದೀರ್ಘ ಕಾಲದವರೆಗೆ ಅಭಿವೃದ್ಧಿಯ ಲಾಭಗಳು ಕೆಲವೇ ದೊಡ್ಡ ನಗರಗಳಿಗೆ ಸೀಮಿತವಾಗಿದ್ದವು. ಆದರೆ ತನ್ನ ಸರಕಾರವು ಸಣ್ಣನಗರಗಳ ಅಭಿವೃದ್ಧಿಯತ್ತ ಗಮನವನ್ನು ಹರಿಸಿದೆ ಮತ್ತು ಇದು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಬುನಾದಿಯನ್ನು ಬಲಗೊಳಿಸಲಿದೆ ಎಂದು ಹೇಳಿದ ಮೋದಿ, ಪ್ರತಿಯೊಬ್ಬರೂ ವಿವಿಧ ಸರಕಾರಿ ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.