“ಪ್ರಧಾನಿ ಮೋದಿ ವಸೂಲಿ ಭಾಯ್” : ರಾಹುಲ್ ಟೀಕೆ

Update: 2024-02-23 17:00 GMT

ನರೇಂದ್ರ ಮೋದಿ, ರಾಹುಲ್‌ ಗಾಂಧಿ | Photo : PTI 

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರು ಅವರ ‘ದೇಣಿಗೆ ಉದ್ಯಮ’ವನ್ನು ನಡೆಸಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆಂದು ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿ ಶುಕ್ರವಾರ ಆಪಾದಿಸಿದ್ದಾರೆ. ಕೇಂದ್ರೀಯ ತನಿಖಾಸಂಸ್ಥೆಗಳಿಂದ ತನಿಖೆಯನ್ನು ಎದುರಿಸುತ್ತಿರುವ ಹಲವಾರು ಉದ್ಯಮಸಂಸ್ಥೆಗಳು ಬಿಜೆಪಿ ಪಕ್ಷದ ನಿಧಿಗೆ ದೇಣಿಗೆಯನ್ನು ನೀಡಿವೆ ಎಂದು ಕಾಂಗ್ರೆಸ್ ಆರೋಪಿಸಿದ ಬೆನ್ನಲ್ಲೇ ರಾಹುಲ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಟೀಕೆಯನ್ನು ಮಾಡಿದ್ದಾರೆ.   

‘‘ ಪ್ರಧಾನಿಯವರ ದೇಣಿಗೆ ನೀಡಿ, ಜಾಮೀನು ಪಡೆಯಿರಿ ಹಾಗೂ ಉದ್ಯಮ ಕೈಗೊಳ್ಳಿ’’ ಯೋಜನೆ ನಿಮಗೆ ತಿಳಿದಿದೆಯೇ? ಈ ದೇಶದಲ್ಲಿ ಪ್ರಧಾನಿಯವರು ‘ವಸೂಲಿ ಭಾಯ್’ ನಂತೆ ಜಾರಿ ನಿರ್ದೇಶನಾಲಯ (ಈ.ಡಿ.), ಆದಾಯ ತೆರಿಗೆ ಇಲಾಖೆ ಹಾಗೂ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’’ ಎಂದು ರಾಹುಲ್‌ ಗಾಂಧಿ ಟ್ವೀಟ್ ಮಾಡಿದ್ದಾರೆ.

ಕೇಂದ್ರೀಯ ತನಿಖಾ ಸಂಸ್ಥೆಗಳು ವಸೂಲಿ ಏಜೆಂಟರಂತೆ ಕೆಲಸಮಾಡುತ್ತಿವೆ. ವರದಿಗಳ ಪ್ರಕಾರ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ತನಿಖೆಯನ್ನು ಎದುರಿಸುತ್ತಿರುವ 30 ಕಂಪೆನಿಗಳು ಬಿಜೆಪಿಗೆ ದೇಣಿಗೆಯನ್ನು ನೀಡಿವೆ ಎಂದು ಅವರು ಆರೋಪಿಸಿದ್ದಾರೆ. ಈ ‘ದೇಣಿಗೆ ಉದ್ಯಮ’ವು ಎಷ್ಟರ ಮಟ್ಟಿಗೆ ಲಜ್ಜೆಗೆಟ್ಟಿದೆಯೆಂದರೆ, ಮಧ್ಯಪ್ರದೇಶದ ಮದ್ಯದ ಕಾರ್ಖಾನೆ (ಡಿಸ್ಟಿಲರಿ)ಯೊಂದರ ಮಾಲಕರು ಜಾಮೀನು ದೊರೆತ ಕೂಡಲೇ ಬಿಜೆಪಿಗೆ ದೇಣಿಗೆ ನೀಡಿದ್ದಾರೆ. ಒಂದೆಡೆ ಅಪ್ರಾಮಾಣಿಕವಾಗಿ ಸ್ನೇಹಿತರ ಕಂಪೆನಿಗಳಿಗೆ ಪ್ರಯೋಜನ ಮಾಡಿಕೊಡಲಾಗುತ್ತಿದ್ದರೆ, ಇತರರಿಗೆ ಬೇರೆ ಕಾನೂನುಗಳೇ? ಮೋದಿ ಆಳ್ವಿಕೆಯಲ್ಲಿ ಬಿಜೆಪಿಗೆ ನೀಡುವ ಅಕ್ರಮ ದೇಣಿಗೆಗಳು ಹಾಗೂ ಚುನಾವಣಾ ದೇಣಿಗೆಗಳು, ‘ಉದ್ಯಮವನ್ನು ಸುಗಮಗೊಳಿಸುವ ’ ಖಾತರಿಯೇ ಎಂದು ರಾಹುಲ್ ‘ಎಕ್ಸ್’ನಲ್ಲಿ ಪ್ರಶ್ನಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News