ಅಸ್ಸಾಂ ಸಿಎಂ ಹಿಮಂತ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ ಚುನಾವಣಾ ಆಯೋಗದ ನೋಟಿಸ್
ಹೊಸದಿಲ್ಲಿ: ಚುನಾವಣಾ ಆಯೋಗವು ಗುರುವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರಿಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ಜಾರಿಗೊಳಿಸಿದೆ. ಅಕ್ಟೋಬರ್ 30ರೊಳಗಾಗಿ ಉತ್ತರಿಸುವಂತೆಯೂ ಅವರಿಗೆ ಸೂಚನೆ ನೀಡಲಾಗಿದೆ.
ಶರ್ಮ ಅವರಿಗೆ ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಎತ್ತಿ ಕಟ್ಟುವ ಉದ್ದೇಶವಿರುವುದು ಅವರು ಛತ್ತೀಸಗಢದ ಕವರ್ಧ ಜಿಲ್ಲೆಯಲ್ಲಿ ಅಕ್ಟೋಬರ್ 18ರಂದು ನೀಡಿದ ಭಾಷಣದಿಂದ ತಿಳಿದು ಬರುತ್ತದೆ ಎಂದು ಕಾಂಗ್ರೆಸ್ ಪಕ್ಷ ಆಯೋಗಕ್ಕೆ ದೂರು ನೀಡಿತ್ತು.
ಕಾಂಗ್ರೆಸ್ ಶಾಸಕ ಮುಹಮ್ಮದ್ ಅಕ್ಬರ್ ಅವರ ವಿರುದ್ಧದ ಪ್ರಚಾರ ಭಾಷಣದಲ್ಲಿ ಶರ್ಮ ಅವರು “ಒಬ್ಬ ಅಕ್ಬರ್ ಒಂದು ಸ್ಥಳಕ್ಕೆ ಬಂದರೆ, ಆತ 100 ಅಕ್ಬರರನ್ನು ಕರೆಯುತ್ತಾನೆ.” ಎಂದು ಹೇಳಿರುವ ಕುರಿತು ಕಾಂಗ್ರೆಸ್ ಆಕ್ಷೇಪಿಸಿ ದೂರು ನೀಡಿತ್ತು.
ಆರಂಭಿಕ ಪರಿಶೀಲನೆಯಿಂದ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ತಿಳಿದು ಬರುತ್ತದೆ ಎಂದು ಆಯೋಗ ಹೇಳಿದೆ.
ಆದರೆ ಶರ್ಮ ಶುಕ್ರವಾರ ಹೇಳಿಕೆ ನೀಡಿ ಅಕ್ಬರ್ ಅವರು ಪಕ್ಷದ ಅಭ್ಯರ್ಥಿ ಎಂದು ಕಾಂಗ್ರೆಸ್ ಹೇಳಿಲ್ಲ, ಅಭ್ಯರ್ಥಿಯ ಟೀಕೆಯು ಕೋಮು ರಾಜಕಾರಣವಾಗದು ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.
ಇನ್ನೊಂದೆಡೆ ಅಕ್ಟೋಬರ್ 25ರಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ರಾಜಸ್ಥಾನದ ದೌಸ ಜಿಲ್ಲೆಯಲ್ಲಿ ನೀಡಿದ ಭಾಷಣದ ಕುರಿತಂತೆ ಆಯೋಗಕ್ಕೆ ದೂರು ನೀಡಲಾಗಿತ್ತು.
ಭಿಲ್ವಾರ ಜಿಲ್ಲೆಯ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ಮೋದಿ ಲಕೋಟೆಯಲ್ಲಿ ದೇಣಿಗೆ ನೀಡಿದ್ದರು, ಅದನ್ನು ದೇವಸ್ಥಾನ ತೆರೆದಾಗ ಅದರಲ್ಲಿದ್ದುದು ಕೇವಲ ರೂ. 21 ಎಂದು ಪ್ರಿಯಾಂಕಾ ಹೇಳಿರುವ ಕುರಿತು ಬಿಜೆಪಿ ದೂರು ನೀಡಿತ್ತು.
ಈ ಭಾಷಣ ಕೂಡ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯೆಂದು ಹೊರನೋಟಕ್ಕೆ ಕಂಡು ಬರುತ್ತದೆ ಎಂದು ಹೇಳಿದ ಆಯೋಗ ಪ್ರಿಯಾಂಕ ಅವರಿಗೂ ನೋಟಿಸ್ ಜಾರಿಗೊಳಿಸಿದೆ.